Advertisement
ಐಪಿಸಿ, ಸಿಆರ್‌ಪಿಸಿ ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಕೇಂದ್ರದ ಐಟಿ ಆ್ಯಕ್ಟ್ಗಳನ್ನು ಮೀರಿದ ಅಪರಾಧ ಕೃತ್ಯಗಳಿಗೆ ರಾಜ್ಯ ಸಾಕ್ಷಿಯಾಗುತ್ತಿದೆ. ಸೈಬರ್ ಅಪರಾಧ ನಿಯಂತ್ರಣ ಎಲ್ಲ ಸರಕಾರಗಳಿಗೂ ಸವಾಲಾಗಿ ಪರಿಣಮಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಪ್ರತ್ಯೇಕವಾದ ಐಟಿ ಕಾಯ್ದೆ ಜಾರಿಗೊಳಿಸುವ ಬಗ್ಗೆ ಗೃಹ ಸಚಿವ ಡಾ| ಪರಮೇಶ್ವರ ಚಿಂತನೆ ನಡೆಸಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಪೊಲೀಸ್ ಅಧಿಕಾರಿಗಳು, ಕೇಂದ್ರ ಗೃಹ ಇಲಾಖೆ, ಐಟಿ ಉದ್ಯಮದ ತಜ್ಞರು, ಸೈಬರ್ ಲಾ ತಜ್ಞರ ಜತೆಗೆ ಸಂವಹನ ಪ್ರಾರಂಭವಾಗಿದೆ.
ಇದು ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಆಧರಿಸಿ ನಡೆದ ಬೆಳವಣಿಗೆಯಲ್ಲ. ಒಟ್ಟಾರೆಯಾಗಿ ಡಿಜಿಟಲ್ ಜಾಲದ ಓತಪ್ರೋತ ಹರಿವಿನ ಯಥಾಸಾಧ್ಯ ನಿಯಂತ್ರಣಕ್ಕೆ ನಡೆಸುತ್ತಿರುವ ಪ್ರಕ್ರಿಯೆ ಎಂದು ಗೃಹ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ. ಯಾವ ಕಾರಣಕ್ಕಾಗಿ ?
– ಸೈಬರ್ ಅಪರಾಧ ನಿಯಂತ್ರಣ
ಸೈಬರ್ ಅಪರಾಧಗಳು ಇತ್ತೀಚೆಗಿನ ದಿನಗಳಲ್ಲಿ ಭಯಾನಕ ಸ್ವರೂಪ ಪಡೆಯುತ್ತಿವೆ. ಈ ಅಪರಾಧ ಜಗತ್ತಿನ ಆಳ ಮತ್ತು ವಿಸ್ತಾರ ಅಳೆಯುವುದಕ್ಕೆ ಹಾಗೂ ನಿಯಂತ್ರಿಸುವುದಕ್ಕೆ ಈಗಿರುವ ಕಾನೂನುಗಳು ಅಶಕ್ತವಾಗುತ್ತಿವೆ. ಇದು ದೇಶ-ಭಾಷೆಗಳ ಎಲ್ಲೆಯಿಲ್ಲದೆ ವ್ಯಾಪಿಸಿದ್ದರೂ ಅಪರಾಧ ನಿಯಂತ್ರಣಕ್ಕೆ ಪ್ರತೀ ರಾಜ್ಯವೂ ಕಟ್ಟುನಿಟ್ಟಿನ ಕಾನೂನು ಹೊಂದಿರುವುದು ಅಗತ್ಯವಾಗಿದೆ.
Related Articles
ಐಟಿ ಯುಗದಲ್ಲಿ ವ್ಯಕ್ತಿಯ ಖಾಸಗಿತನದ ಉಲ್ಲಂಘನೆ ಹೆಚ್ಚುತ್ತಿದೆ. ಅಧಿಕಾರಸ್ಥರಿಂದ ಮೊದಲುಗೊಂಡು ಸಾಮಾನ್ಯ ವ್ಯಕ್ತಿಯವರೆಗೂ ಇದೊಂದು ಪಿಡುಗಾಗಿ ಪರಿಗಣಿಸಿದೆ. ಬೇರೆಯವರ ಖಾಸಗಿ ಕ್ಷಣಗಳನ್ನು ಸೆರೆ ಹಿಡಿದು ಬ್ಲ್ಯಾಕ್‌ವೆುàಲ್, ಹಣ ವಸೂಲಿ, ಅತ್ಯಾಚಾರದಂಥ ಪ್ರಕರಣಗಳು ಹೆಚ್ಚುತ್ತಿದೆ. ದಾವಣಗೆರೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಇತ್ತೀಚೆಗೆ ನಡೆದ ಖಾಸಗಿತನ ಉಲ್ಲಂಘನೆ ಪ್ರಕರಣವಾಗಿದೆ.
Advertisement
– ನವ ಮಾಧ್ಯಮಗಳಿಗೆ ಮೂಗುದಾರಸಾಮಾಜಿಕ ಜಾಲತಾಣಗಳೂ ಒಳಗೊಂಡಂತೆ ನವಮಾಧ್ಯಮಗಳು ಕೆಲವೊಮ್ಮೆ ಸೃಷ್ಟಿಸುವ ವಿವಾದಗಳು ಸಾಮಾಜಿಕ ಸಾಮರಸ್ಯಗಳನ್ನು ಕೆಡಿಸುವ ಜತೆಗೆ ಸಹ್ಯವಲ್ಲದ ಚರ್ಚೆಗಳನ್ನೂ ಹುಟ್ಟು ಹಾಕುತ್ತಿವೆ. ಇವುಗಳ ನಿಯಂತ್ರಣ ಅಸಾಧ್ಯ. ಆದರೆ ಕಡಿವಾಣಕ್ಕೆ ಗೃಹ ಇಲಾಖೆ ಮಾರ್ಗ ಹುಡುಕುತ್ತಿದೆ. – ಸುಳ್ಳು ಸುದ್ದಿ ನಿಯಂತ್ರಣ
ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡಕ್ಕೂ ಸುಳ್ಳು ಸುದ್ದಿಗಳಿಗೆ ನಿಯಂತ್ರಣ ಹೇರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಿರುವ ಕಾಯ್ದೆಗಳ ಅನ್ವಯ ದಂಡನೆಯ ಸ್ವರೂಪ ನಿರ್ಧರಿಸುವುದಕ್ಕೆ ನ್ಯಾಯಾಲಯಗಳಿಗೂ ಸಾಧ್ಯವಾಗುತ್ತಿಲ್ಲ. ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ಶಿಕ್ಷೆಗೆ ಗುರಿಯಾದ ವ್ಯಕ್ತಿಗಳ ಸಂಖ್ಯೆ ಬೆರಳೆಣಿಕೆಯಷ್ಟೂ ಇಲ್ಲ. ಹೀಗಾಗಿ ಇದಕ್ಕೊಂದು ಪ್ರತ್ಯೇಕ ಕಾಯ್ದೆ ಬೇಕೆಂಬುದು ಪೊಲೀಸ್ ಇಲಾಖೆಯ ಅಭಿಪ್ರಾಯ. – ಮಕ್ಕಳ ಮಾನಸಿಕ ಆರೋಗ್ಯ
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಅಥವಾ ಹಂಚಿಕೆಯಾಗುವ ಕೆಲವು ವೀಡಿಯೋ, ಮಾಹಿತಿ, ಮನೋರಂಜನೆಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಹದಿಹರೆಯದ ಲೈಂಗಿಕ ಸಮಸ್ಯೆ ಈಗ ಎಳೆ ಹರೆಯದವರನ್ನೂ ಕಾಡುತ್ತಿದೆ. ಲೈಂಗಿಕತೆಗೆ ಪ್ರಚೋದಿಸುವ ಸರಕುಗಳು ಮಕ್ಕಳಿಗೂ ಸುಲಭವಾಗಿ ಲಭ್ಯವಾಗುತ್ತಿದ್ದು, ಇವುಗಳಿಂದ ಪ್ರೇರಿತವಾದ ಬಾಲಾಪರಾಧಗಳ ಪ್ರಮಾಣ ಹೆಚ್ಚುತ್ತಿದೆ. ಇದೊಂದು ಸಾಮಾಜಿಕ ಪಿಡುಗಾಗಿ ಬೆಳೆಯುತ್ತಿದ್ದು, ನಿಯಂತ್ರಣ ಸರಕಾರದ ಕರ್ತವ್ಯವೂ ಆಗಿದೆ. ಇವೆಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡಿರುವ ರಾಜ್ಯ ಸರಕಾರವು ಹೊಸ ಐಟಿ ಕಾಯ್ದೆ ಜಾರಿಗೆ ಚಿಂತನೆ ನಡೆಸುತ್ತಿದೆ. ಒಟ್ಟಾರೆಯಾಗಿ ಸಮಾಜದ ಮೇಲೆ ಸೈಬರ್ ಲೋಕ ಬೀರುವ ನಕಾರಾತ್ಮಕ ಪರಿಣಾಮ ನಿಯಂತ್ರಣದ ದೃಷ್ಟಿಯಿಂದ ಕಾಯ್ದೆಯ ಚೌಕಟ್ಟು ರೂಪಿಸುವ ಪ್ರಯತ್ನ ಪ್ರಾರಂಭವಾಗಿದೆ ಎಂದು ಗೃಹ ಇಲಾಖೆ ಉನ್ನತ ಮೂಲಗಳು ತಿಳಿಸಿವೆ. ರಾಘವೇಂದ್ರ ಭಟ್