Advertisement

ಮಹಿಳಾ ಉದ್ಯಮಿಗೆ ಪ್ರತ್ಯೇಕ ಕೈಗಾರಿಕಾ ಪಾರ್ಕ್‌

11:22 AM Jul 28, 2017 | |

ಮೈಸೂರು: ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ರಾಜ್ಯದ ವಿವಿಧೆಡೆಗಳಲ್ಲಿ ಮಹಿಳಾ ಉದ್ಯಮ ಪಾರ್ಕ್‌ಗಳನ್ನು ನಿರ್ಮಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಹೇಳಿದರು. ನಗರದಲ್ಲಿ ಗುರುವಾರ ಮಹಿಳಾ ವಾಣಿಜ್ಯ ಮತ್ತು ಕೈಗಾರಿಕಾ ಸಬಲೀಕರಣ ಸಂಸ್ಥೆ (ವೈಬ…) ಉದ್ಘಾಟನೆ ಹಾಗೂ ಮಹಿಳೆಯರಿಗೆ ಉದ್ಯಮ ಪ್ರೇರಣಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

Advertisement

ಮಹಿಳಾ ಪಾರ್ಕ್‌ ನಿರ್ಮಾಣ: ಹಿಂದಿನ ಕೈಗಾರಿಕಾ ನೀತಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕೈಗಾರಿಕಾ ಪಾರ್ಕ್‌ ನಿರ್ಮಾಣಕ್ಕೆ ಅವಕಾಶ ಇರಲಿಲ್ಲ. ಹೊಸ ನೀತಿಯಲ್ಲಿ ಈ ಅವಕಾಶ ಮಾಡಿಕೊಟ್ಟ ನಂತರ ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಕಲಬುರ್ಗಿಗಳಲ್ಲಿ ಮಹಿಳಾ ಪಾರ್ಕ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

100 ಎಕರೆ ಪ್ರದೇಶ ಬೇಕು: ಮೈಸೂರು ಹೊರವಲಯದ ಅಡಕನಹಳ್ಳಿ, ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಮಹಿಳಾ ಪಾರ್ಕ್‌ಗೆ 50 ಎಕರೆ ಜಾಗ ಗುರುತಿಸಲಾಗಿದೆ. ಆದರೆ, ಈಗಿನ ಬೇಡಿಕೆ ನೋಡಿದರೆ 100 ಎಕರೆ ಪ್ರದೇಶದ ಅವಶ್ಯಕತೆ ಇದೆ. ಒಟ್ಟಾರೆ ರಾಜ್ಯದಲ್ಲಿ ಮಹಿಳಾ ಉದ್ಯಮದಾರಿಗಾಗಿಯೇ 5 ರಿಂದ 6 ಪಾರ್ಕ್‌ಗಳ ಅವಶ್ಯಕತೆ ಇದೆ ಎಂದರು.

ಬೆಂಗಳೂರು ಕೇಂದ್ರಿತವಾಗಿರುವ ಕೈಗಾರಿಕೋದ್ಯಮವನ್ನು ರಾಜ್ಯದ ಎರಡನೇ ಸ್ತರದ ನಗರಗಳಿಗೂ ವಿಸ್ತರಿಸಲು ರಾಜ್ಯ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ವಿಶೇಷ ಪ್ರೋತ್ಸಾಹ ಧನ ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.

ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಪ್ರದೇಶಗಳಿಗೆ ಬಂಡವಾಳ ಆಕರ್ಷಿಸಲು ಈ ಯೋಜನೆ ಜಾರಿಗೆ ತರಲಾಗಿದ್ದು, ತೀರಾ ಹಿಂದುಳಿದಿರುವ ಹೈದ್ರಾಬಾದ್‌ ಕರ್ನಾಟಕ ಭಾಗದಲ್ಲಿ ಕೈಗಾರಿಕೋದ್ಯಮ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

Advertisement

ದೇಶದಲ್ಲಿ ಕರ್ನಾಟಕ ನಂ.1: ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಕೈಗಾರಿಕಾ ನಿವೇಶನ ನೀಡಲು ತೀರ್ಮಾನಿಸಲಾಗಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ದರ ನಿಗದಿ ಪಡಿಸಿದ ನಂತರ ಇದರ ಲಾಭ ಮಹಿಳೆಯರಿಗೆ ದೊರೆಯಲಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿ ನಂ.1ನೇ ಸ್ಥಾನ ಕಾಯ್ದುಕೊಂಡಿದ್ದು, ಗುಜರಾತ್‌ 2ನೇ ಸ್ಥಾನದಲ್ಲಿದೆ. ಗುಜರಾತ್‌ನಲ್ಲಿ 60 ಸಾವಿರ ಕೋಟಿ ರೂ., ಕರ್ನಾಟಕದಲ್ಲಿ 1.77 ಲಕ್ಷ ಕೋಟಿ ಹೂಡಿಕೆಯಾಗಿದೆ ಎಂದು ವಿವರಿಸಿದರು.

ಸನ್ಮಾನ: ಸಾಧಕ ಉದ್ಯಮಿಗಳಾದ ಮೈಸೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಸುರೇಶ್‌ ಕುಮಾರ್‌ ಜೈನ್‌, ದೀಪಕ್‌ ಟೂಲ್ಸ್‌ ಹೀಟ್‌ ಟ್ರೀಟರ್ನ ಸುಬ್ರಹ್ಮಣ್ಯಂ, ರಾಜಮನೆ ಸೋಮ ಇಂಡಟ್ರೋನಿಕ್ಸ್‌ನ ಶ್ರೀಶೈಲರಾಮಣ್ಣನವರ್‌, ಸುಪ್ರೀಂ ಪಬ್ಲಿಕ್‌ ಸ್ಕೂಲ್‌ನ ಅಧ್ಯಕ್ಷ ಎಂ.ಎಲ್‌. ರವೀಂದ್ರಸ್ವಾಮಿ, ಶ್ರೀ ಚೌಡೇಶ್ವರಿ ಟ್ರೇಡಿಂಗ್‌ ಕಂಪನಿಯ ಸಿ.ಕೆ. ಗಣೇಶ್‌, ಬೆಂಗಳೂರು ಕೋವೆ ಅಧ್ಯಕ್ಷೆ ರೂಪಾರಾಣಿ ಅವರನ್ನು ಸನ್ಮಾನಿಸಲಾಯಿತು.

ಎಫ್ಕೆಸಿಸಿಐ ಹಿರಿಯ ಉಪಾಧ್ಯಕ್ಷ ಸುಧಾಕರ ಎಸ್‌.ಶೆಟ್ಟಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್‌.ರಾಮಕೃಷ್ಣೇಗೌಡ, ಎಂಸಿಸಿಐ ಅಧ್ಯಕ್ಷ ಎ.ಎಸ್‌.ಸತೀಶ್‌, ವೈಬ್‌ ಸ್ಥಾಪಕಾಧ್ಯಕ್ಷೆ ಗಾಯತ್ರಿ ಕೇಶವರಾವ್‌, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next