ಬೆಂಗಳೂರು: ಚುನಾವಣಾ ಅರ್ಜಿಗಳ ವಿಚಾರಣೆ ಮತ್ತು ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳಲ್ಲಿ ವಿಶೇಷ ಪೀಠ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹೇಳಿದರು.
ಶಾಸಕರ ಭವನದಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳು ಆಯೋಜಿಸಿದ್ದ “ಭಾರತದಲ್ಲಿ ಚುನಾವಣಾ ಸುಧಾರಣೆಗಳು’ ಕುರಿತ ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣಾ ಅರ್ಜಿಗಳ ವಿಚಾರಣೆಗೆ ಪ್ರತ್ಯೇಕವಾಗಿ ವಿಶೇಷ ಪೀಠಗಳನ್ನು ಸ್ಥಾಪಿಸಿದರೆ ಕಾಲಮಿತಿಯೊಳಗೆ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬಹುದು ಎಂದರು.
ಚುನಾವಣಾ ಅರ್ಜಿಗಳು, ಚುನಾವಣಾ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಹೆಚ್ಚಿನ ಅಧಿಕಾರ ಕೊಡಬೇಕು ಎಂದು ಪ್ರತಿಪಾದಿಸಿದ ಸುದರ್ಶನ್, ಇವಿಎಂಗಳ ಬಗೆಗಿನ ಅನುಮಾನಗಳನ್ನು ಸಾಬೀತುಪಡಿಸಿ ಅನ್ನುವುದು ಆಯೋಗದ ಬೇಜವಾಬ್ದಾರಿ ಹೇಳಿಕೆ. ಎವಿಎಂಗಳ ಬಗ್ಗೆ ಅಷ್ಟೊಂದು ಪ್ರತಿರೋಧ ವ್ಯಕ್ತವಾಗುತ್ತಿರುವಾಗ ಅದನ್ನು ಗಂಭೀರವಾಗಿ ಪರಿಗಣಿಸಿ ಲೋಪಗಳನ್ನು ಸರಿಪಡಿಸುವುದು ಆಯೋಗದ ಜವಾಬ್ದಾರಿ ಎಂದರು.
ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ವಿಧಾನಸಭೆ ಮತ್ತು ಲೋಕಸಭೆಗೆ ಏಕ ಕಾಲಕ್ಕೆ ಚುನಾವಣೆ ನಡೆಯಬೇಕು ಎಂಬ ಆಲೋಚನೆ ಅತ್ಯಂತ ಅಪಾಯಕಾರಿ. ಇದು ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮಾರಕವಾದದ್ದು. ಚುನಾವಣಾ ಆಯುಕ್ತರ ನೇಮಕದಲ್ಲಿ ಆಡಳಿತಾರೂಢ ಪಕ್ಷದ ಪಾತ್ರ ಹೆಚ್ಚಾಗಿರುವುದರಿಂದ ಆ ಸ್ಥಾನಕ್ಕೆ ಬಂದವರು ಆಡಳಿತ ಪಕ್ಷದ ಮರ್ಜಿಯಲ್ಲಿ ಕೆಲಸ ಮಾಡುವ ಸನ್ನಿವೇಶ ನಿರ್ಮಾಣವಾಗುತ್ತದೆ. ಆದ್ದರಿಂದ ಚುನಾವಣಾ ಆಯುಕ್ತರ ನೇಮಕದಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಸಮಾನ ಪಾತ್ರ ಇರಬೇಕು ಎಂದರು.
“ಒಂದೇ’ ಆಲೋಚನೆಗೆ ವಿರೋಧ: ಚುನಾವಣಾ ಸುಧಾರಣೆಗಳ ಜತೆಗೆ ರಾಜಕೀಯ ಪಕ್ಷಗಳಲ್ಲೂ ಸುಧಾರಣೆ ಆಗಬೇಕು. ಒಂದು ದೇಶಕ್ಕೆ ಒಬ್ಬ ನಾಯಕ, ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದೇ ಚುನಾವಣೆ ಎಂಬ ಆಲೋಚನೆಗಳ ವಿರುದ್ಧ ಪ್ರಬಲ ಜನಾಂದೋಲನ ನಡೆಯಬೇಕು. ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ಹಾಗೂ ವಿದೇಶಿ ದೇಣಿಗೆಯ ಅಪಾಯಗಳನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕು.
ಈ ಎಲ್ಲ ವಿಚಾರಗಳ ಬಗ್ಗೆ ಅತಿದೊಡ್ಡ ವಿರೋಧಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿರಬೇಕು ಎಂಬ ಅಭಿಪ್ರಾಯಗಳು ಸಂವಾದದಲ್ಲಿ ಕೇಳಿ ಬಂದವು. ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ್, ಸಿಪಿಎಂ ಮುಖಂಡ ವಿಜಿಕೆ ನಾಯರ್, ಜೆಡಿಯು (ಶರದ್ ಯಾದವ್) ಮುಖಂಡ ಡಾ. ಎಂ.ಪಿ. ನಾಡಗೌಡ ಮತ್ತಿತರರು ವಿಷಯದ ಕುರಿತು ಮಾತನಾಡಿದರು.
ಮೈತ್ರಿ ಸರ್ಕಾರಕ್ಕೆ ಒಂದು ಚೌಕಟ್ಟು ಇರುತ್ತದೆ. ಆ ಚೌಕಟ್ಟಿನಲ್ಲೇ ಎಲ್ಲವೂ ನಡೆಯಬೇಕು. ಹಾಗಾದಾಗ ಮಾತ್ರ ಸಮ್ಮಿಶ್ರ ಸರ್ಕಾರ ಅವಧಿ ಪೂರೈಸಲು ಸಾಧ್ಯ. ಕೈ ಮೀರಿದ ಸಂದರ್ಭಗಳು ಸೃಷ್ಟಿಯಾದರೆ ಯಾರೂ, ಏನೂ ಮಾಡಲಿಕ್ಕಾಗದು.
-ವಿ.ಆರ್.ಸುದರ್ಶನ್, ಕೆಪಿಸಿಸಿ ಉಪಾಧ್ಯಕ್ಷ