ರಾಣಿಬೆನ್ನೂರು (ಹಾವೇರಿ): ಸುಳ್ಳು ಕರೆ, ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಎಷ್ಟೇ ಎಚ್ಚರಿಕೆಗಳನ್ನು ನೀಡಿದರೂ ಸಹ ಜನರು ಮಾತ್ರ ವಂಚಕರ ಮೋಸಕ್ಕೆ ಬಲಿಯಾಗಿ ಹಣ ಕಳೆದುಕೊಳ್ಳುವುದು ನಿಂತಿಲ್ಲ.
ಇದಕ್ಕೊಂದು ನಿದರ್ಶನವೆಂಬಂತೆ ನಗರದ ಶಿಕ್ಷಕಿಯೋರ್ವರು ಈ ಮೋಸದ ಜಾಲಕ್ಕೆ ಸಿಲುಕಿ ಬರೋಬರಿ 31.14 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ನಗರದ ನಿವಾಸಿ ತಾಲೂಕಿನ ಚಿಕ್ಕಮಾಗನೂರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಧಾ ಸುರೇಶ ಕಡೆಮನಿ ವಂಚನೆಗೊಳಗಾದವರು.
ಇವರ ಮೊಬೈಲ್‌ಗೆ 4,80,00,0000 ರೂ.ಗಳ ಬಹುಮಾನ ಬಂದಿದೆ ಎಂದು ಅಮೆರಿಕಾದಿಂದ ಕರೆ ಮಾಡಿದ್ದರು ಎನ್ನಲಾದ ಡಾ| ಥಾಮೋಸ್ ವಿಲಿಯಮ್ಸ್ ಮತ್ತು ಅಲೆಕ್ಸಾಂಡರ್ ಜೈನ್ ಎಂಬಿಬ್ಬರು ನಿಮಗೆ ವಾಟ್ಸ್ಯಾಪ್ ಗ್ಲೊಬಲ್ ಆವಾರ್ಡ್ ಬಂದಿದೆ ಎಂದು ಸಂದೇಶ ಕಳುಹಿಸಿದ್ದರು.
ಬಳಿಕ ಫೋನ್ ಮಾಡಿದ ವಂಚಕರ ಮಾತುಗಳನ್ನು ಈ ಶಿಕ್ಷಕಿ ನಂಬಿದ್ದಾರೆ. ಬಳಿಕ ಶಿಕ್ಷಕಿಯ ವೈಯಕ್ತಿಕ ಮಾಹಿತಿ ಪಡೆದುಕೊಂಡು ಆಕೆಗೆ ನಂಬಿಕೆ ಬರುವಂತೆ ಹಲವು ಬಾರಿ ಮೇಲ್‌ಗಳನ್ನು ಕಳಿಸಿ ಅವರ ಜೊತೆಯಲ್ಲಿ ಪೋನ್‌ನಲ್ಲಿ ಆಂಗ್ಲ ಭಾಷೆಯಲ್ಲಿ ವಂಚಕರು ಮಾತನಾಡಿದ್ದಾರೆ.
ಆ ಬಳಿಕ ಅಮೆರಿಕಾ ಡಾಲರನ್ನು ರೂಪಾಯಿಯಲ್ಲಿ ವಿನಿಮಯ ಮಾಡಿ ಖಾತೆ ಹಾಕಲು ನೀವು ಕೆಲವೊಂದು ಸರ್ವಿಸ್ ಚಾರ್ಜ್‌ಗಳನ್ನು ಕಟ್ಟಬೇಕು ಎಂದು ನಂಬಿಸಿ 37,14,600 ರೂಪಾಯಿಗಳನ್ನು ವಂಚಕರು ಶಿಕ್ಷಕಿಯಿಂದ ಕಟ್ಟಿಸಿಕೊಂಡಿದ್ದಾರೆ.
ವಂಚಕರ ಈ ಮೋಸ ತಡವಾಗಿ ಅರಿತುಕೊಂಡ ಶಿಕ್ಷಕಿ ಕಂಗಾಲಾಗಿ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.