Advertisement

ನಿರ್ವಹಣೆ ಇಲ್ಲದೇ ಪಾಳುಬಿದ್ದ ಪುರಭವನ

12:56 PM Jan 03, 2022 | Team Udayavani |

ಹುಮನಾಬಾದ: ಪಟ್ಟಣದ ಏಕೈಕ ಉದ್ಯಾನವನ ಆವರಣದಲ್ಲಿ 3.14 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪುರಭವನ ಉದ್ಘಾಟನೆಗೂ ಮುನ್ನವೇ ಹಾಳಾದ ಸ್ಥಿತಿಗೆ ಬಂದಿದೆ. ಸದ್ಯ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

Advertisement

ನೆಮ್ಮದಿ ಊರು ಯೋಜನೆಯ ಎಚ್‌ ಕೆಆರ್‌ಡಿ ಮ್ಯಾಕ್ರೋ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಂಡು ಮುಖ್ಯ ಕಟ್ಟಡ ಕಾಮಗಾರಿಗೆ 1.94 ಕೋಟಿ ವೆಚ್ಚ ಮಾಡಲಾಗಿದೆ. 500 ಜನರು ಏಕಕಾಲಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಕಟ್ಟಡದ ಸುತ್ತುಗೋಡೆ, ವಿದ್ಯುತ್‌ ದೀಪ, ಉದ್ಯಾನವನ ವ್ಯವಸ್ಥೆ, ಎಸಿ ಸೇರಿದಂತೆ ಇತರೆ ಕಾಮಗಾರಿಗಳಿಗೆ ಸುಮಾರು 1.20 ಕೋಟಿ ರೂ. ಖರ್ಚು ಮಾಡಲಾಗಿದೆ.

ಲೋಕೋಪಯೋಗಿ ಇಲಾಖೆಯಡಿಯಲ್ಲಿ ಕಾಮಗಾರಿ ನಡೆದಿದ್ದು, 2020ರಲ್ಲಿ ಪೂರ್ಣಗೊಂಡ ಕಾಮಗಾರಿ ಫೆಬ್ರವರಿ ತಿಂಗಳಲ್ಲಿ ಸ್ಥಳೀಯ ಪುರಸಭೆಗೆ ಹಸ್ತಾಂತರಗೊಂಡಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿರ್ವಹಣೆ ಕೊರತೆ

ಉದ್ಯಾನವನ ಆವರಣದಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ನೋಡುಗರ ಗಮನ ಸೆಳೆಯುವಂತಿದೆ. ಆದರೆ ಕಟ್ಟಡ ನಿರ್ವಹಣೆ ಮಾಡುವಲ್ಲಿ ಇಲ್ಲಿನ ಪುರಸಭೆ ಆಡಳಿತ ಸಂಪೂರ್ಣ ವಿಫಲಗೊಂಡಿದೆ. ಕಟ್ಟಡ ಆವರಣದಲ್ಲಿ ಹಾಸಿದ ಹುಲ್ಲು ಒಣಗಿದೆ. ಎಲ್ಲಾ ಕಡೆಗಳಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ. ವಿದ್ಯುತ್‌ ಕಂಬಗಳ ದೀಪಗಳು ಒಡೆದು ಹಾಕಲಾಗಿದೆ. ಕಿಟಕಿ ಬಾಗಿಲು ಗಾಜುಗಳು ಪುಡಿ ಮಾಡಲಾಗಿದೆ. ಹೊಸ ಕಟ್ಟಡ ಆವರಣದ ಎಲ್ಲ ಕಡೆಗಳಲ್ಲಿ ಪಾಳು ಬಿದ್ದಂತೆ ಭಾಸವಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ನಿರ್ವಹಣೆ ಮಾಡುವಲ್ಲಿ ವಿಫಲಗೊಂಡಿದ್ದಾರೆ. ಇಲ್ಲಿನ ಪುರಸಭೆಗೆ ಒಬ್ಬರ ನಂತರ ಒಬ್ಬರು ಅಧಿಕಾರಿಗಳು ಬದಲಾಗುತ್ತಿದ್ದು, ಪುರಭವನ ಕಡೆಗೆ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಕೆಲ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.

Advertisement

ಅನೈತಿಕ ಚಟುವಟಿಕೆ ತಾಣ

ಇಲ್ಲಿನ ಉದ್ಯಾನವನ ಈ ಹಿಂದೆ ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾಗಿತ್ತು. ದಿನಗಳೆದಂತೆ ನಿರ್ವಹಣೆ ಕೊರತೆಯಿಂದ ಉದ್ಯಾನವನ ಸಂಪೂರ್ಣ ಹಾಳಾಗಿತ್ತು. ಈ ಮಧ್ಯದಲ್ಲಿ ಪುರಭವನ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಟ್ಟಡವಾದರೂ ಸಾರ್ವಜನಿಕರ ಉಪಯೋಗಕ್ಕೆ ಬರುತ್ತೆಂದು ಊಹಿಸಲಾಗಿತ್ತು. ಆದರೆ ಕಟ್ಟಡ ಮಾತ್ರ ಪುಂಡ- ಪೋಕರಿಗಳ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಕಟ್ಟಡದ ಮುಖ್ಯ ದ್ವಾರಕ್ಕೆ ಹಾಗೂ ಗೇಟಿಗೆ ಬೀಗ ಹಾಕದ ಕಾರಣ ಪುಂಡರು ಅಕ್ರಮ ಪ್ರವೇಶ ಮಾಡಿ ವಿವಿಧ ವಸ್ತುಗಳಿಗೆ ಹಾನಿ ಉಂಟು ಮಾಡುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಹೆಚ್ಚು ಹಾನಿ ಸಂಭವಿಸಬಹುದಾಗಿದೆ.

ಈಡೇರದ ಶಾಸಕರ ಮಾತು

ಪಟ್ಟಣದಲ್ಲಿರುವ ಉದ್ಯಾನವನ ಅಭಿವೃದ್ಧಿ ಮಾಡುವುದಾಗಿ ಅನೇಕ ಬಾರಿ ಭರವಸೆ ನೀಡಿದ ಶಾಸಕರ ಮಾತು ಇಂದಿಗೂ ಕಾರ್ಯ ರೂಪಕ್ಕೆ ಬಂದಿಲ್ಲ. ಪಟ್ಟಣದಲ್ಲಿ ಹೈಟೆಕ್‌ ಉದ್ಯಾನವನ, ಹೈಟೆಕ್‌ ಲೈಬ್ರರಿ, ಹೈಟೆಕ್‌ ಜಿಮ್‌ ವ್ಯವಸ್ಥೆ ಕಲ್ಪಿಸುವುದಾಗಿ ಶಾಸಕರು ಅನೇಕ ಬಾರಿ ಹೇಳಿದ್ದರು. ಅಲ್ಲದೆ ಸಾರ್ವಜನಿಕರ ಅನುಕೂಲಕ್ಕಾಗಿ ಉದ್ಯಾನವನದಲ್ಲಿ ಪುರಭವನ ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದರು. ಇದೀಗ ಕೂಡಲೇ ಪುರಭವನ ಉದ್ಘಾಟನೆ ಮಾಡಿ, ಸೂಕ್ತ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಬೇಕಾಗಿದೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಚಾಂದ್‌ ಪಟೇಲ್‌ ಖುದ್ದು ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

-ದುರ್ಯೋಧನ ಹೂಗಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next