Advertisement

ರಸ್ತೆ ಇಲ್ಲದೇ ಪಾಳು ಬಿದ್ದ ಕಾಲೇಜು ಕಟ್ಟಡ

11:48 AM Dec 08, 2018 | |

ಔರಾದ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಸರ್ಕಾರ ಉತ್ತಮ ಕಟ್ಟಡ ನಿರ್ಮಿಸಿ ಕೊಟ್ಟು ವರ್ಷಗಳು ಕಳೆದರೂ, ಕಾಲೇಜಿಗೆ ಹೋಗಿ ಬರಲು ರಸ್ತೆ ಇಲ್ಲದ ಪರಿಣಾಮ ಕಟ್ಟಡ ಉದ್ಘಾಟನೆ ಭಾಗ್ಯ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಗುರುಭವನದಲ್ಲಿಯೇ ಕುಳಿತು ಪಾಠ ಕೇಳಬೇಕಾಗಿದೆ.

Advertisement

ಕಾಲೇಜಿನಲ್ಲಿ 500 ವಿದ್ಯಾರ್ಥಿಗಳು ಹಾಗೂ ತರಗತಿವಾರು ಉಪನ್ಯಾಸಕರು ಕೂಡ ಇದ್ದಾರೆ. ಹಾಗಾಗಿ ಮೂರು ವರ್ಷಗಳ ಹಿಂದೆ ನಿರ್ಮಾಣವಾದ ಕಟ್ಟಡ ಉದ್ಘಾಟನೆಯಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕಿತ್ತು. ಆದರೆ ನಿರುಪಯುಕ್ತವಾಗಿರುವುದರಿಂದ ಅನೈತಿಕ ಚಟುವಟಿಕೆಯ ತಾಣವಾಗಿ ಪರಿಣಮಿಸಿದೆ. ವಿದ್ಯುತ್‌ ಸಂಪರ್ಕ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳು ಇಲ್ಲದಿರುವುದರಿಂದ ಕಟ್ಟಡ ಪಾಳು ಬೀಳುತ್ತಿದೆ. ಕಾಲೇಜಿಗೆ ಹೋಗಿ ಬರಲು ಸಣ್ಣ ರಸ್ತೆ ನಿರ್ಮಾಣಕ್ಕೂ ಈ ಭಾಗದ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳದಿರುವುದರಿಂದ 2ಕೋಟಿ ರೂ. ಅನುದಾನದಲ್ಲಿ ನಿರ್ಮಿಸಿರುವ ಕಟ್ಟಡ ಹಾಳು ಕೊಂಪೆಯಾಗುತ್ತಿದೆ. ಆವರಣದಲ್ಲಿ ಸಣ್ಣ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಕಿಡಕಿ ಗಾಜುಗಳು ಒಡೆದು ನೆಲಕ್ಕೆ ಬಿದ್ದಿವೆ. ಹಾಗಾಗಿ ರಾತ್ರಿ ವೇಳೆ ಯುವಕರು ಪಾರ್ಟಿ ಮಾಡುವ ತಾಣವಾಗಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ. 

ಪ್ರತಿಭಟನೆಗೂ ಬೆಲೆಯಿಲ್ಲ: ಕಾಲೇಜು ಕಟ್ಟಡಕ್ಕೆ ರಸ್ತೆ ಹಾಗೂ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಎಬಿವಿಪಿ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಅವರು ಉಪವಾಸ ಸತ್ಯಾಗ್ರಹ ಮಾಡಿ, ನ್ಯಾಯಾಲಯ ಮೊರೆ ಹೋಗಿದ್ದರೂ ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸಿಲ್ಲ.

ಗುರು ಭವನದಲ್ಲೇ ಪಾಠ: ಕಾಲೇಜಿನ ಹೊಸ ಕಟ್ಟಡಕ್ಕೆ ರಸ್ತೆ ಇಲ್ಲದಿರುವುದರಿಂದ ಕಾಲೇಜಿನ ಪ್ರಾಂಶುಪಾಲಕರು ಗುರು ಭವನದಲ್ಲಿಯೇ ನಿತ್ಯ ಪಾಠ ನಡೆಸುತ್ತಿದ್ದಾರೆ. ಗುರುಭವನದಲ್ಲಿ ಸಮರ್ಪಕ ಸ್ಥಳ ಇಲ್ಲದಿದ್ದರೂ ಇರುವುದರಲ್ಲಿಯೇ ಉಪನ್ಯಾಸಕರ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ.

ಅರ್ಧ ರಸ್ತೆ ನಿರ್ಮಾಣ: ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಅವರು ಈ ಕುರಿತು ಹೈಕೋರ್ಟ್‌ ಮೊರೆ ಹೋಗಿ ಅರ್ಜಿ ಸಲ್ಲಿಸಿದಾಗ, ಅಂದಿನ ಪ್ರಭಾರಿ ಜಿಲ್ಲಾಧಿಕಾರಿ ಹಾಗೂ ಇಂದಿನ ಬೀದರ ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ ಅವರು, ಎರಡು ತಿಂಗಳಲ್ಲಿ ಕಾಲೇಜಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಡುತ್ತೇವೆ ಎಂದು ಲಿಖೀತವಾಗಿ ನ್ಯಾಯಾಲಯಕ್ಕೆ ಪತ್ರ ಬರೆದಿದ್ದಾರೆ. 15 ತಿಂಗಳು ಕಳೆದರೂ ಇಂದಿಗೂ ರಸ್ತೆ ನಿರ್ಮಾಣ ಕಾಮಗಾರಿ ಬಸ್‌ ಘಟಕದವರೆಗೆ ಮಾತ್ರ ನಡೆದಿದೆ. ಇನ್ನೂ 1 ಕಿ.ಮೀ. ರಸ್ತೆ ನಿರ್ಮಾಣ ಮಾಡಿಯೇ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತರ ಗುರುನಾಥ ವಡ್ಡೆ ತಿಳಿಸಿದ್ದಾರೆ.

Advertisement

15 ತಿಂಗಳ ಹಿಂದೆ ಬೀದರ ಸಹಾಯಕ ಆಯುಕ್ತರು ತಿಂಗಳಲ್ಲಿ ರಸ್ತೆ ನಿರ್ಮಾಣ ಮಾಡುವುದಾಗಿ ನ್ಯಾಯಾಲಯಕ್ಕೆ ಲಿಖೀತ ಪತ್ರದ ಮೂಲಕ ತಿಳಿಸಿದ್ದಾರೆ. ಇಂದಿಗೂ ರಸ್ತೆ ಮಾಡಿಲ್ಲ.
ಹೀಗಾಗಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದರ ಜೊತೆಗೆ ಕಾಲೇಜಿಗೆ ರಸ್ತೆ ಕಲ್ಪಿಸುವಂತೆ ಹೈಕೋರ್ಟ್‌ಗೆ ಮರು ಅರ್ಜಿ ಸಲ್ಲಿಸುತ್ತೇನೆ.
 ಗುರುನಾಥ ವಡ್ಡೆ, ಸಾಮಾಜಿಕ ಕಾರ್ಯಕರ್ತ

ಕಾಲೇಜು ಕಟ್ಟಡ ಉತ್ತಮವಾಗಿದೆ. ವಿದ್ಯಾರ್ಥಿಗಳಿಗೆ ಹೋಗಿ ಬರಲು ರಸ್ತೆಯೇ ಇಲ್ಲದಿರುವುದರಿಂದ ಗುರುಭವನದಲ್ಲಿಯೇ ಪಾಠ ಮಾಡಲಾಗುತ್ತಿದೆ. ರಸ್ತೆ ನಿರ್ಮಾಣ ಮಾಡಿದರೆ ಕಾಲೇಜು ಕೂಡಲೆ ಸ್ಥಳಾಂತರಿಸಲಾಗುತ್ತದೆ. 
 ಸೂರ್ಯಕಾಂತ ಚಿದ್ರೆ, ಕಾಲೇಜಿನ ಪ್ರಾಂಶುಪಾಲ

ರಸ್ತೆ ಸೇರಿದಂತೆ ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಸರ್ಕಾರ ಹಾಗೂ ಈ ಭಾಗದ ಜನನಾಯಕರು ಬೆಲೆ ನೀಡಿಲ್ಲ. ಹಿಗಾಗಿ ನಾವೂ ಕೂಡ ಪ್ರತಿಭಟನೆ ಕೈ ಬಿಟ್ಟಿದೇವೆ.
 ಹಾವಪ್ಪ ದ್ಯಾಡೆ, ಎಬಿವಿಪಿ ಪ್ರಮುಖ

ಕಾಲೇಜಿಗೆ ರಸ್ತೆ ಸಂಪರ್ಕ ಕಲ್ಪಿಸುವ ಕುರಿತು ನಾನೂ ಕೂಡ ಸಹಾಯಕ ಆಯುಕ್ತರೊಂದಿಗೆ ಮಾತನಾಡಿ, ಕೂಡಲೆ ರಸ್ತೆ ಕಾಮಗಾರಿ ಮಾಡುವಂತೆ ಕ್ರಮ ಕೈಗೊಳ್ಳುತ್ತೇನೆ. 
ಎಂ. ಚಂದ್ರಶೇಖರ, ತಹಶೀಲ್ದಾರ್‌

„ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next