ಬೆಂಗಳೂರು: “ವಿವಾದಿತ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ, ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಈ ಮೂಲಕ ಯೋಜನೆ ವಿರೋಧಿಸಿ ನಡೆದ ಪ್ರತಿಭಟನೆಗೆ ಸರ್ಕಾರ ಸ್ಪಂದಿಸಿದೆ.
ಗೃಹ ಕಚೇರಿ “ಕೃಷ್ಣಾ’ದಲ್ಲಿ ಮಂಗಳವಾರ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ನಗರದ ಸಂಚಾರದಟ್ಟಣೆ ಸಮಸ್ಯೆಗೆ ಮುಂದಿನ 20 ವರ್ಷಗಳ ಕಾಲ ಶಾಶ್ವತ ಪರಿಹಾರ ಕಂಡುಕೊಳ್ಳುವುದು ನಮ್ಮ ಉದ್ದೇಶ.
ಈ ನಿಟ್ಟಿನಲ್ಲಿ ಸಮಗ್ರ ಯೋಜನೆಯನ್ನು ರೂಪಿಸಲು ಉದ್ದೇಶಿಸಲಾಗಿದೆ. ಕಾರಿಡಾರ್‌ಗೆ ಪರ್ಯಾಯಗಳಿದ್ದರೆ, ಆ ನಿಟ್ಟಿನಲ್ಲೂ ಪರಿಶೀಲಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಪರಿಸರ ಹೋರಾಟಗಾರ ಲಿಯೊ ಸಲ್ಡಾನ, ಐಐಎಸ್ಸಿಯ ಪ್ರೊ.ಆಶಿಶ್ ವರ್ಮ, ರಂಗಕರ್ಮಿ ಪ್ರಕಾಶ ಬೆಳವಾಡಿ, ವಾಸ್ತುಶಿಲ್ಪಿ ನರೇಷ್ ನರಸಿಂಹನ್, ಬೆಂಗಳೂರು ಬಸ್ ಪ್ರಾಯಣಿಕರ ವೇದಿಕೆಯ ವಿನಯ್ ಶ್ರೀನಿವಾಸ್, ವೈಟ್‌ಫೀಲ್ಡ್ ರೈಸಿಂಗ್‌ನ ಜಿ.ಬಿ. ಜಮಾಲ್,
ಕರ್ನಾಟಕ ಕೊಳಚೆ ಪ್ರದೇಶ ನಿವಾಸಿಗಳ ಸಂಫಟನೆಯ ಐಸಾಕ್ ಅಮೃತ್‌ರಾಜ್, ಸಿಟಿಜನ್ಸ್ ಫಾರ್ ಬೆಂಗಳೂರಿನ ತಾರಾ ಕೃಷ್ಣಸ್ವಾಮಿ ಹಾಗೂ ಶ್ರೀನಿವಾಸ್ ಅಲವಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಎಲಿವೇಟೆಡ್ ಕಾರಿಡಾರ್‌ನ ಸಾಧಕ-ಬಾಧಕಗಳ ಬಗ್ಗೆ ಐಐಎಸ್ಸಿಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಆಶಿಶ್ ವರ್ಮ ತಯಾರಿಸಿದ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸಬೇಕು.ಬಸ್ ಪ್ರಯಾಣ ದರ ಇಳಿಕೆ ಮಾಡಬೇಕು. ಹೊರವರ್ತುಲ ರಸ್ತೆಯಲ್ಲಿ ಬಸ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟ್‌ಂ ಅನುಷ್ಠಾನಗೊಳಿಸಬೇಕು. ಹೊರವರ್ತುಲ ರಸ್ತೆಯಲ್ಲಿ ಮೆಟ್ರೋ ನಿರ್ಮಾಣ ಯೋಜನೆ ಕಾರ್ಯ ತ್ವರಿತಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು.
ಚುನಾವಣೆ ಬಳಿಕ ಮತ್ತೂಮ್ಮೆ ಚರ್ಚೆ: ಎಲಿವೇಟೆಡ್ ಕಾರಿಡಾರ್ ನಿರ್ಮಾಣ ವಿಚಾರದಲ್ಲಿ ಮುಂದುವರಿಯುವ ಮುನ್ನ ತಜ್ಞರು ಹಾಗೂ ಸಾರ್ವಜನಿಕರೊಂದಿಗೆ ಸಭೆಗಳನ್ನು ನಡೆಸಲಾಗುವುದು. ಅಭಿಪ್ರಾಯಗಳನ್ನು ಸಂಗ್ರಹಿಸಿ, ನಂತರವಷ್ಟೇ ನಿರ್ಧಾರಕ್ಕೆ ಬರಲಾಗುವುದು ಎಂದ ಮುಖ್ಯಮಂತ್ರಿ ಕುಮಾರಸ್ವಾಮಿ, ಲೋಕಸಭಾ ಚುನಾವಣೆ ಬಳಿಕ ಈ ಸಂಬಂಧ ಮತ್ತೂಮ್ಮೆ ಚರ್ಚೆ ನಡೆಸಲಾಗುವುದು ಎಂದೂ ಹೇಳಿದರು. ಉದ್ದೇಶಿತ ಯೋಜನೆ ವಿರೋಧಿಸಿ ನಗರದಲ್ಲಿ ಈಚೆಗೆ ನಡೆದ ಪ್ರತಿಭಟನೆಯಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕು ಎನ್ನುವುದು ಪ್ರಮುಖ ಬೇಡಿಕೆ ಆಗಿತ್ತು.