Advertisement

ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಜನಾಭಿಪ್ರಾಯ ಸಂಗ್ರಹ

07:26 AM Feb 22, 2019 | Team Udayavani |

ಮೈಸೂರು: ಹಾಲಿ ಸಂಸದರಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚಿಸಿ ಆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾದ ಸಂಸದ ಅವಿನಾಶ್‌ ರಾಯ್‌ ಖನ್ನಾ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್‌ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದಲ್ಲದೆ, ಅಭ್ಯರ್ಥಿ ಆಯ್ಕೆ ಸಂಬಂಧ ಜನಾಭಿಪ್ರಾಯವನ್ನೂ ಸಂಗ್ರಹಿಸಲಾಗುವುದು ಎಂದರು. ಐದು ವರ್ಷಗಳ ಕಾಲ ಭ್ರಷ್ಟಾಚಾರ ರಹಿತ, ಸ್ವತ್ಛ, ದಕ್ಷ ಆಡಳಿತ ನೀಡಿರುವ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ನೇರ ಸಂಪರ್ಕ: ಪ್ರಪಂಚದ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಯನ್ನು ಸೋಲಿಸುವ ಶಕ್ತಿ ಕಾಂಗ್ರೆಸ್‌ಗೆ ಇಲ್ಲ. ಹಿಂದೆಲ್ಲಾ ಸರ್ಕಾರದ ಹಗರಣಗಳ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು. ಆದರೆ, ಕಳೇದ ಐದು ವರ್ಷಗಳಿಂದ ನರೇಂದ್ರಮೋದಿ ಸರ್ಕಾರದ ಯೋಜನೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಜನ ಸಾಮಾನ್ಯರೊಂದಿಗೆ ನೇರ ಸಂಪರ್ಕ ಹೊಂದಿರುವ ಪ್ರಧಾನಿ ನರೇಂದ್ರಮೋದಿ ಅವರನ್ನು ದೇಶದ ಜನತೆ ಬೆಂಬಲಿಸಲಿದ್ದಾರೆ ಎಂದರು.

ಇತ್ತೀಚಿನ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಸೋತಿರುವುದರಿಂದ ಧೃತಿಗೆಟ್ಟಿಲ್ಲ. ರಾಜಸ್ಥಾನದಲ್ಲಿ ನೋಟಾಗೆ 4.50 ಲಕ್ಷ ಮತ ಚಲಾವಣೆಯಾಗಿದೆ. ಹೀಗಾಗಿ ಅಲ್ಪ ಅಂತರದಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮೋದಿ ನಾಮಬಲವಿತ್ತು. ಈಗ ಮೋದಿ ನಾಮಬಲದೊಂದಿಗೆ ಅಭಿವೃದ್ಧಿ ಕಾರ್ಯಕ್ರಮಗಳ ಬಲವೂ ಸೇರಿಕೊಂಡಿದೆ. 

ಸಲಹೆ ನೀಡಿ: ಪ್ರಧಾನಿ ನರೇಂದ್ರ ಮೋದಿ ಜನರ ಪರವಾಗಿ ಇರುವಂತಹ ಪ್ರಣಾಳಿಕೆ ತಯಾರು ಮಾಡಬೇಕೆಂಬ ಉದ್ದೇಶ ಹೊಂದಿದ್ದು, ಅದಕ್ಕಾಗಿ ಎಲ್ಲಾ ರಾಜ್ಯಗಳಲ್ಲೂ ಜನರೊಂದಿಗೆ ಸಂವಾದ ನಡೆಸಿ ಸಲಹೆ ಪಡೆಯಲಾಗುತ್ತಿದೆ. ಜನರು ಪತ್ರ, ದೂರವಾಣಿ ಕರೆ, ಇ-ಮೇಲ್‌ ಮೂಲಕ ಸಲಹೆ ಕೊಡಬಹುದು ಎಂದರು.

Advertisement

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ಮೇಲೆ ನಡೆದ ಉಗ್ರರ ಆತ್ಮಾಹುತಿ ದಾಳಿಗೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಭಯೋತ್ಪಾದಕ ಸಂಘಟನೆಗಳನ್ನು ಮಟ್ಟ ಹಾಕುವ ವಿಚಾರದಲ್ಲಿ ಯಾವ ರಾಜಕೀಯವು ಇಲ್ಲ ಎಂದರು.

ಶಾಸಕ ಭರತ್‌ ಶೆಟ್ಟಿ, ರಾಜ್ಯ ಬಿಜೆಪಿ ವಕ್ತಾರ ಗೋ.ಮಧುಸೂದನ್‌, ವಿಧಾನಪರಿಷತ್‌ ಮಾಜಿ ಸದಸ್ಯ ತೋಂಟದಾರ್ಯ, ನಗರ ಬಿಜೆಪಿ ಅಧ್ಯಕ್ಷ ಡಾ.ಮಂಜುನಾಥ್‌, ಸಂಚಾಲಕ ಎನ್‌.ವಿ.ಫ‌ಣೀಶ್‌, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ. ರಾಜೇಂದ್ರ, ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ನಾಗರಾಜ ಮಲ್ಲಾಡಿ,ಮಾಧ್ಯಮ ಪ್ರಮುಖ್‌ ಪ್ರಭಾಕರ ಶಿಂಧೆ, ನಗರ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ರಾಜೀವ್‌, ಸತೀಶ್‌ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next