Advertisement

50 ಸಾವಿರಕ್ಕಿಂತ ಹೆಚ್ಚು ನಗದಿಗೆ ದಾಖಲೆ ಅಗತ್ಯ

11:24 AM Nov 13, 2021 | Team Udayavani |

ಕಲಬುರಗಿ: ವಿಧಾನ ಪರಿಷತ್‌ (ಸ್ಥಳೀಯ ಸಂಸ್ಥೆ) ಚುನಾವಣೆ ನೀತಿಸಂಹಿತೆ ಮಂಗಳವಾರ (ನ.9)ರಿಂದಲೇ ಜಾರಿಯಲ್ಲಿದ್ದು, ಗ್ರಾಮ ಪಂಚಾಯಿತಿಯಿಂದ ಹಿಡಿದು ಯಾವುದೇ ಇಲಾಖೆಗಳು ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮಾಡುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಧಾನ ಪರಿಷತ್‌ ಚುನಾವಣೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಕಾಮಗಾರಿಯ ಕ್ರಿಯಾಯೋಜನೆ ಮಾಡುವಂತಿಲ್ಲ. ಒಂದು ವೇಳೆ ಕ್ರಿಯಾಯೋಜನೆ ಆಗಿದ್ದರೆ ಆಡಳಿತಾತ್ಮಕ ಅನುಮೋದನೆ ನೀಡುವಂತಿಲ್ಲ. ಹೊಸ ಟೆಂಡರ್‌ ಕರೆಯುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ನೀತಿಸಂಹಿತೆ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿ 50 ಸಾವಿರ ರೂ. ನಗದು ಕೊಂಡೊಯ್ಯಬಹುದು. 50 ಸಾವಿರಕ್ಕಿಂತ ಹೆಚ್ಚು ನಗದು ಕೊಂಡೊಯ್ಯಬೇಕಾದರೆ ಅಗತ್ಯ ದಾಖಲೆಗಳನ್ನು ಪ್ರದರ್ಶಿಸಬೇಕು. ಕರೆನ್ಸಿ ಚೆಸ್ಟ್‌ ಬ್ರ್ಯಾಂಚ್‌ನಿಂದ ಇತರೆ ಬ್ಯಾಂಕ್‌, ಎಟಿಎಂ ಕೇಂದ್ರಗಳಿಗೆ ನಗದು ರವಾನಿಸುವಾಗ ವಾಹನದಲ್ಲಿ ಎಲ್ಲ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.

ಫ್ಲೈಯಿಂಗ್‌ ಸ್ಕ್ವಾಡ್‌ ತಂಡದವರು 10 ಲಕ್ಷ ರೂ. ವರೆಗೆ ಅಕ್ರಮವಾಗಿ ಸಾಗಿಸುವ ನಗದು ಹಣವನ್ನು ಜಪ್ತಿ ಮಾಡಬಹುದು. 10 ಲಕ್ಷ ರೂ.ಗೂ ಹೆಚ್ಚಿನ ಮೊತ್ತದ ಹಣ ಇದ್ದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಲಿದ್ದಾರೆ ಎಂದರು.

ಚೆಕ್‌ ಪೋಸ್ಟ್‌ಗಳಲ್ಲಿ ಅಕ್ರಮ ಮದ್ಯ ಸಾಗಾಟ ಬಗ್ಗೆ ಹದ್ದಿನ ಕಣ್ಣಿಡಬೇಕು ಎಂದು ಸೂಚಿಸಿದ ಅವರು, ವಶಪಡಿಸಿಕೊಂಡ ಮದ್ಯವನ್ನು ಬ್ರ್ಯಾಂಡ್‌ ವಾರು ಮಾಹಿತಿ ಸಂಗ್ರಹಿಸಿಡಬೇಕು. ಅಕ್ರಮವಾಗಿ ಸಾಗಿಸುವ ನಗದು, ಮದ್ಯ, ಶಸ್ತ್ರಾಸ್ತ್ರಗಳ ವಶಪಡಿಸಿಕೊಂಡ ಮಾಹಿತಿಯನ್ನು ಪ್ರತಿದಿನವೂ ಸಲ್ಲಿಸಬೇಕು. ಚುನಾವಣೆ ಸಂದರ್ಭದಲ್ಲಿ ಅಕ್ರಮಗಳು ಕುರಿತಂತೆ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್‌ ರೂಂ ಸ್ಥಾಪಿಸುವಂತೆ ಅಧಿಕಾರಿಗಳಿಗೆ ನಿದೇರ್ಶನ ನೀಡಿದರು.

Advertisement

ನಗರ ಪೊಲೀಸ್‌ ಆಯುಕ್ತ ಡಾ| ವೈ.ಎಸ್‌.ರವಿಕುಮಾರ ಮಾತನಾಡಿದರು. ಸಭೆಯಲ್ಲಿ ನೋಡಲ್‌ ಅಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ| ದಿಲೀಷ್‌ ಸಸಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಅಪರ ಜಿಲ್ಲಾಧಿಕಾರಿ ಡಾ| ಶಂಕರ ವಣಿಕ್ಯಾಳ, ಉಪ ಸಾರಿಗೆ ಆಯುಕ್ತ ನೂರ ಅಹ್ಮದ್‌, ಅಬಕಾರಿ ಉಪ ಆಯುಕ್ತ ಶಶಿಕಲಾ ಒಡೆಯರ್‌, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಇಂತೇಸಾರ್‌ ಹುಸೇನ್‌, ಎಂಸಿಎಂಸಿ ಸಮಿತಿಯ ನೋಡಲ್‌ ಅಧಿಕಾರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ., ಸಹಾಯಕ ಆಯುಕ್ತರ ಕಚೇರಿಯ ತಹಶೀಲ್ದಾರ ಕೆ.ಆನಂದಶೀಲ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ವಿಧಾನ ಪರಿಷತ್‌ ಚುನಾವಣೆಯ ನೀತಿ-ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಯಾವುದೇ ಸದಸ್ಯರು ಅಧಿಕೃತ ಸಭೆ ಕರೆಯುವಂತಿಲ್ಲ. ಮತದಾನಕ್ಕೆ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಮತಗಟ್ಟೆಯನ್ನು ತೆರೆಯಲಾಗುವುದು. -ವಿ.ವಿ.ಜ್ಯೋತ್ಸ್ನಾ, ಜಿಲ್ಲಾಧಿಕಾರಿನಗರ

ಪೊಲೀಸ್‌ ಆಯುಕ್ತಾಲಯದ ವ್ಯಾಪ್ತಿಯಲ್ಲಿ 62 ಗ್ರಾಮಗಳು ಕೂಡ ಬರಲಿದ್ದು, ಹಳ್ಳಿಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಸಂಗ್ರಹದ ಬಗ್ಗೆ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುವುದು. -ಡಾ| ವೈ.ಎಸ್‌.ರವಿಕುಮಾರ, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next