Advertisement

ದಾಖಲೆ ಪ್ರಮಾಣಕ್ಕೇರಿದ ಬಿಟ್‌ ಕಾಯಿನ್‌ ಮೌಲ್ಯ

02:19 AM Mar 03, 2021 | Team Udayavani |

ದಶಕಗಳ ಹಿಂದಷ್ಟೇ ಚಾಲ್ತಿಗೆ ಬಂದಿರುವ ಬಿಟ್‌ ಕಾಯಿನ್‌ (ಕ್ರಿಪ್ಟೋ ಕರೆನ್ಸಿ) ಮೌಲ್ಯ ಕೆಲವು ದಿನಗಳ ಹಿಂದೆ 38 ಲಕ್ಷ ರೂ. ದಾಟಿದೆ. ಈ ಬೆನ್ನಲ್ಲೇ ಬಿಟ್‌ ಕಾಯಿನ್‌ಗಳಿಗೆ ಬೇಡಿಕೆಯೂ ವಿಪರೀತವಾಗಿ ಹೆಚ್ಚಾಗಿದೆ. ಹೀಗಾಗಿ ಇಡೀ ಜಗತ್ತೇ ಈ ಬಿಟ್‌ ಕಾಯಿನ್‌ಗಳ ಹಿಂದೆ ಬಿದ್ದಿರುವಾಗ ಇವೂ ಸಾಮಾನ್ಯ ಹಣದಂತೆಯೇ ವ್ಯವಹಾರಗಳಲ್ಲಿ ಚಾಲ್ತಿಗೆ ಬರಲು ಹೆಚ್ಚು ಸಮಯವಿಲ್ಲ ಎಂಬುದು ಹೂಡಿಕೆದಾರರ ಲೆಕ್ಕಾಚಾರವಾಗಿದೆ. ಬಿಟ್‌ ಕಾಯಿನ್‌ಗಳಿಗೆ ಅದೃಷ್ಟ ಖುಲಾಯಿಸಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಇದರತ್ತ ಆಕರ್ಷಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೂಡಿಕೆ ಮಾಡಲು ಚಿನ್ನದ ಬದಲಿಗೆ ಬಿಟ್‌ ಕಾಯಿನ್‌ನತ್ತ ಹೆಚ್ಚು ಒಲವು ತೋರುವ ಸಾಧ್ಯತೆಗಳಿವೆ. ಹಾಗಾದರೆ ಏನಿದು ಬಿಟ್‌ಕಾಯಿನ್‌? ಏನಿದರ ವಿಶೇಷತೆ ಇಲ್ಲಿದೆ ವಿವರ.

Advertisement

ಭಾರತದಲ್ಲಿ ಡಿಜಿಟಲ್‌ ಕರೆನ್ಸಿ ಪ್ರಸ್ತಾವ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿರುವ ಕ್ರಿಪ್ಟೋ ಕರೆನ್ಸಿಗೆ ಭಾರತದಲ್ಲಿ ಕಾನೂನಿನ ಮಾನ್ಯತೆ ಇಲ್ಲ. ಬಿಟ್‌ ಕಾಯಿನ್‌ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿರಿಸಿ ಸರಕಾರ ತಾನೇ ಒಂದು ಡಿಜಿಟಲ್‌ ಕರೆನ್ಸಿಯನ್ನು ಚಲಾವಣೆಗೆ ತರುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಬಿಟ್‌ಕಾಯಿನ್‌ಂತಹ ಕ್ರಿಪ್ಟೊ ಕರೆನ್ಸಿಗಳು ಈಗಾಗಲೇ ಬಳಕೆಯಲ್ಲಿವೆ. ಖಾಸಗಿ ಡಿಜಿಟಲ್‌ ಕರೆನ್ಸಿಗಳು (ಪಿಡಿಸಿ), ವರ್ಚುವಲ್‌ ಕರೆನ್ಸಿಗಳು (ವಿಸಿ), ಕ್ರಿಪ್ಟೊ ಕರೆನ್ಸಿಗಳು ಈತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಪಡೆದುಕೊಂಡಿವೆಯಾದರೂ ಇವುಗಳ ದುರ್ಬಳಕೆ ನಿರಂತರವಾಗಿ ನಡೆಯುತ್ತಿವೆ. ಹೀಗಾಗಿ ಭಾರತ ಸರಕಾರ ಅವುಗಳ ಬಳಕೆಯನ್ನು ಬ್ಯಾನ್‌ ಮಾಡುವ ಚಿಂತನೆಯಲ್ಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಕೂಡ ಕ್ರಿಪ್ಟೋ ಕರೆನ್ಸಿಗೆ ಮಾನ್ಯತೆ ನೀಡುವ ಪ್ರಸ್ತಾವವನ್ನು ಸರಕಾರದ ಮುಂದಿಟ್ಟಿದೆಯಾದರೂ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ. ಇಂಥ ಪ್ರಸ್ತಾವ ವರ್ಷಗಳಷ್ಟು ಹಳೆಯದಾಗಿದ್ದರೂ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಟ್‌ ಕಾಯಿನ್‌ ಬೀರುತ್ತಿರುವ ಪ್ರಭಾವದಿಂದಾಗಿ ಸರಕಾರ ತನ್ನದೇ ಆದ ಕ್ರಿಪ್ಟೋ ಕರೆನ್ಸಿಯನ್ನು ಚಲಾವಣೆಗೆ ತರುವ ಕುರಿತಂತೆ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿವೆ.

ಯಾಕೆ ಬೇಡ?
ಪಿಡಿಸಿ, ವಿಸಿ ಹಾಗೂ ಕ್ರಿಪ್ಟೊ ಕರೆನ್ಸಿಗಳ ಜತೆಯಲ್ಲೇ ಬರುವ ಕೆಲವು ಅಪಾಯಗಳ ಬಗ್ಗೆಯೂ ಸರಕಾರ ಆತಂಕವನ್ನು ಹೊಂದಿದೆ. ಹೀಗಿದ್ದರೂ ಭಾರತದ ಅಧಿಕೃತ ಕರೆನ್ಸಿಯ ಡಿಜಿಟಲ್‌ ಆವೃತ್ತಿಯನ್ನು ಚಲಾವಣೆಗೆ ತರಬೇಕೇ ಎಂಬ ಬಗ್ಗೆ ಕೇಂದ್ರೀಯ ಬ್ಯಾಂಕ್‌ ಪರಿಶೀಲನೆ ನಡೆಸುತ್ತಿದೆ. ಒಂದು ವೇಳೆ ಚಲಾವಣೆಗೆ ತರುವುದಾದಲ್ಲಿ ಅದನ್ನು ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕು ಎಂಬ ಬಗ್ಗೆಯೂ ಪರಿಶೀಲನೆ ನಡೆದಿದೆ. ಹೊಸ ಸಂಶೋಧನೆಗಳ ಕಾರಣದಿಂದಾಗಿ ಪಾವತಿ ವ್ಯವಸ್ಥೆಯಲ್ಲಿ ವೇಗದ ಬದಲಾವಣೆಗಳಾಗುತ್ತಿವೆ. ಹಾಗಾಗಿ ವಿಶ್ವಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು, ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ತಮ್ಮ ಅಧಿಕೃತ ಕರೆನ್ಸಿಯನ್ನು ಡಿಜಿಟಲ್‌ ರೂಪದಲ್ಲಿಯೂ ನೀಡ ಬಹುದೇ ಎಂದು ಪರಿಶೀಲನೆ ನಡೆಸುತ್ತಿವೆ. ಆದರೆ ಈ ಹಂತದಲ್ಲಿ ಈ ಸಾಧ್ಯತೆಯ ಬಗೆಗೆ ಸ್ಪಷ್ಟತೆ ಇಲ್ಲ. ಖಾಸಗಿಯವರು ತಮ್ಮದೇ ಆದ ಕರೆನ್ಸಿಗಳನ್ನು ಚಲಾವಣೆಗೆ ತಂದಿರುವ ಕಾರಣ ತನ್ನದೇ ಆದ ಡಿಜಿಟಲ್‌ ಕರೆನ್ಸಿ ಚಲಾವಣೆಗೆ ತರಬೇಕು ಎಂಬುದು ಆರ್‌ಬಿಐ ಆಲೋಚನೆ.

1 ಟ್ರಿಲಿಯನ್‌ ಡಾಲರ್‌
ಕ್ರಿಪ್ಟೋ ಕರೆನ್ಸಿ ಬಿಟ್‌ ಕಾಯಿನ್‌ ಕಳೆದ ಕೆಲವು ದಿನಗಳಲ್ಲಿ 1 ಟ್ರಿಲಿಯನ್‌ ಡಾಲರ್‌ ಮಾರುಕಟ್ಟೆ ಮೌಲ್ಯ ದಾಟಿ ಅಚ್ಚರಿ ಮೂಡಿಸಿತ್ತು. ಕಳೆದ ಶುಕ್ರವಾರ ಟೆಸ್ಲಾ, ಮಾಸ್ಟರ್‌ ಕಾರ್ಡ್‌, ಪೇಪಾಲ್‌, ಬ್ಲಾಕ್‌ ರಾಕ್‌ ಗಮನ ಸೆಳೆದಿತ್ತು. ಆಪಲ್‌, ಮೈಕ್ರೋಸಾಫ್ಟ್, ಗೂಗಲ್‌ನಂಥ ಸಂಸ್ಥೆಗಳು ದಶಕಗಳ ಅನಂತರ ಮುಟ್ಟಿದ್ದ ದಾಖಲೆ ಮೌಲ್ಯವನ್ನು ಬಿಟ್‌ ಕಾಯಿನ್‌ ದಶಕಗಳಲ್ಲೇ ಸಾಧಿಸಿದೆ.

ಇದರ ಲಾಭ ಏನು?
ಡಿಜಿಟಲ್‌ ಕರೆನ್ಸಿಯನ್ನು ಜಾರಿಗೆ ತಂದರೆ ಅದರ ಚಲಾವಣೆಗೆ ಮಧ್ಯವರ್ತಿ ಸಂಸ್ಥೆಗಳ ಅಗತ್ಯ ಇರುವುದಿಲ್ಲ. ಅದು ವ್ಯಕ್ತಿ-ವ್ಯಕ್ತಿಯ ನಡುವೆ ನೇರವಾಗಿ ವಿನಿಮಯ ಆಗುತ್ತದೆ. ಆದರೆ ಕರೆನ್ಸಿಯ ವಿನಿಮಯವನ್ನು ದಾಖಲಿಸುವ ಕೇಂದ್ರೀಕೃತ ದತ್ತಾಂಶ ಕೋಶವೊಂದು ಇರುತ್ತದೆ. ನೋಟಿನ ರೂಪದಲ್ಲಿ ಇರುವ ಕರೆನ್ಸಿಯು ಯಾರ ಕೈಯಲ್ಲಿ ಇತ್ತು, ಅಲ್ಲಿಂದ ಯಾರ ಕೈಗೆ ಹೋಯಿತು ಎಂಬುದನ್ನು ದಾಖಲಿಸಿಡಲು ಸಾಧ್ಯವಿಲ್ಲ. ಆದರೆ ಡಿಜಿಟಲ್‌ ಕರೆನ್ಸಿಯ ವಿನಿಮಯ ಎಲ್ಲೆಲ್ಲಿ ಆಯಿತು ಎಂಬುದನ್ನು ಸಮರ್ಥವಾಗಿ ದಾಖಲಿಸಲು ಸಾಧ್ಯವಾಗುತ್ತದೆ. ಈ ರೀತಿಯ ಸುಮಾರು 800 ಡಿಜಿಟಲ್‌ ಕರೆನ್ಸಿಗಳು ಲಭ್ಯವಿವೆ. ಇದು ಆನ್‌ಲೈನ್‌ನಲ್ಲೇ ಇರುವುದರಿಂದ ವೈರಸ್‌ ದಾಳಿಗೆ ತುತ್ತಾಗಿ, ಸುಲಭವಾಗಿ ಹ್ಯಾಕ್‌ ಆಗಬಹುದಾದ ಅಪಾಯವಂತೂ ಇದ್ದೇ ಇದೆ.

Advertisement

ಬಿಟ್‌ ಕಾಯಿನ್‌ ಎಂದರೇನು?
ಇದೊಂದು ಡಿಜಿಟಲ್‌ ಕರೆನ್ಸಿಯಾಗಿದೆ. ಅಂದರೆ ಆನ್‌ಲೈನ್‌ ಮೂಲಕ ಪಾವತಿಸಲು ನಿಜವಾದ ನಾಣ್ಯವನ್ನು ನೀಡಬೇಕಿಲ್ಲ. ಇಂದು ಸುಮಾರು 800ರಷ್ಟು ಇಂಥ ಕ್ರಿಪ್ಟೋ ಕರೆನ್ಸಿ (crypto currency) ಗಳಿವೆ. ಈ ವರ್ಚುವಲ್‌ ಹಣದ ಮೂಲಕ ಜಾಗತಿಕವಾಗಿ ಹಣಕಾಸಿನ ವ್ಯವಹಾರ ನಡೆಸಬಹುದಾಗಿದೆ. ಕ್ರಿಪ್ಟೋ ಕರೆನ್ಸಿ ಬಳಸಿ ಹಣದ ವ್ಯವಹಾರ ನಡೆಸುವ ವೀಸಾ, ಮಾಸ್ಟರ್‌ ಕಾರ್ಡ್‌ ಮೊದಲಾದ ವ್ಯವಸ್ಥೆಗಳು ಈಗಾಗಲೇ ಚಾಲ್ತಿ ಯಲ್ಲಿವೆ. ಆದರೆ ಇವು ಒಂದು ದೇಶದಿಂದ ಇನ್ನೊಂದು ದೇಶದ ನಡು ವಣ ವ್ಯವಹಾರದಲ್ಲಿ ಮೊದಲು ಈ ದೇಶದ ಹಣವನ್ನು ಡಾಲರ್‌ಗೂ ಬಳಿಕ ಡಾಲರ್‌ನಿಂದ ಆ ದೇಶದ ಹಣಕ್ಕೂ ಪರಿವರ್ತಿಸಿ ವಹಿವಾಟು ನಡೆಸುತ್ತವೆ. ಆದರೆ ಈ ಹಂತ ಗಳಲ್ಲಿ ಸಂಸ್ಥೆಗಳು ಅಪಾರ ವಾದ ಕಮೀಷನ್‌ ಪಡೆಯು ತ್ತವೆ. ಅಲ್ಲದೇ ಈ ವಹಿವಾಟು ಸರಕಾರದ ಆಧೀನದಲ್ಲಿಯೇ ಬ್ಯಾಂಕ್‌ಗಳ ಮುಖಾಂತರ ನಡೆ ಯುತ್ತದೆ. ಆದರೆ ಬಿಟ್‌ ಕಾಯಿನ್‌ಗೆ ಯಾವುದೇ ನಿರ್ಬಂಧವಿಲ್ಲ. ಸದ್ಯಕ್ಕೆ ಭಾರತದಲ್ಲಿ ಬಿಟ್‌ ಕಾಯಿನ್‌ಗಳಿಗೆ ಸರಕಾರದ ಮಾನ್ಯತೆ ಇಲ್ಲ.

ಬಿಟ್‌ ಕಾಯಿನ್‌ ಮೌಲ್ಯ ಜಿಗಿತ
ವಿಶ್ವದ ಅತೀ ಹೆಚ್ಚು ಪ್ರಖ್ಯಾತಿ ಪಡೆದಿರುವ ಡಿಜಿಟಲ್‌ ಕರೆನ್ಸಿಗಳಲ್ಲಿ ಬಿಟ್‌ ಕಾಯಿನ್‌ ಮೊದಲ ಸ್ಥಾನದಲ್ಲಿದೆ. 2020ರ ಡಿ.16ರಂದು ಬಿಟ್‌ ಕಾಯಿನ್‌ ಬೆಲೆ 19 ಸಾವಿರ ಡಾಲರ್‌ನ ಆಸುಪಾಸಿ ನಲ್ಲಿತ್ತು. ಇದಾದ ಅನಂತರ ಬಿಟ್‌ ಕಾಯಿನ್‌
ಸಾಂಸ್ಥಿಕ ಅಳ ವಡಿಕೆ ಆರಂಭ ಗೊಂಡಿತ್ತು. ಇದರಿಂದಾಗಿ ಬಿಟ್‌ ಕಾಯಿನ್‌ ಬೆಲೆಯಲ್ಲಿ ಏಕಾ ಏಕಿ ಏರಿಕೆ ಕಂಡು ಬಂದಿದೆ. ಮಂಗಳವಾರ ಬಿಟ್‌ಕಾಯಿನ್‌ 33,88,185.79 ರೂ.ಗೆ ಮಾರಾಟಗೊಂಡಿತು. ಬಿಟ್‌ಕಾಯಿನ್‌ ಮೌಲ್ಯದಲ್ಲಿ ಏರಿಳಿತ ಗಳು ಸಹಜವಾದರೂ ಸದ್ಯ ಇದು ಏರುಗತಿ ಯಲ್ಲಿರುವುದರಿಂದ ಹೂಡಿಕೆದಾರರ ಚಿತ್ತ ಇದರತ್ತ ಹೊರಳಿದೆ.

Advertisement

Udayavani is now on Telegram. Click here to join our channel and stay updated with the latest news.

Next