Advertisement

Lok Adalat ದಾಖಲೆ ಪ್ರಮಾಣದಲ್ಲಿ 24 ಲಕ್ಷ ಪ್ರಕರಣ ಇತ್ಯರ್ಥ

12:30 AM Sep 13, 2023 | Team Udayavani |

ಬೆಂಗಳೂರು: ಪರ್ಯಾಯ ನ್ಯಾಯದಾನ ವ್ಯವಸ್ಥೆಯಾಗಿರುವ ಲೋಕ್‌ ಅದಾಲತ್‌ನಲ್ಲಿ ವ್ಯಾಜ್ಯಗಳ ದಾಖಲೆ ಪ್ರಮಾಣದ ಇತ್ಯರ್ಥ ಮುಂದುವರಿದಿದ್ದು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸೆ. 9ರಂದು ನಡೆಸಲಾದ ಈ ವರ್ಷದ ಮೂರನೇ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿ 24.36 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ.

Advertisement

ಲೋಕ್‌ ಅದಾಲತ್‌ನ ವಿವರಗಳನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಜಿ. ನರೇಂದರ್‌ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಕೆ. ಸೋಮಶೇಖರ್‌, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್‌, ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌, ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಕಾವೇರಿ ಮತ್ತಿತರರು ಉಪಸ್ಥಿತರಿದ್ದರು.

255 ದಂಪತಿಗಳ ಪುನರ್‌ಮಿಲನ
ಈ ಬಾರಿಯ ಲೋಕ ಅದಾಲತ್‌ನಲ್ಲಿ ಒಟ್ಟು 1,305 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅದರಲ್ಲಿ 255 ದಂಪತಿಗಳು ಪರಸ್ಪರ ರಾಜಿ-ಸಂಧಾನದ ಮೂಲಕ ಪುನಃ ಒಂದಾಗಿದ್ದಾರೆ. ಇದು ಲೋಕ್‌ ಅದಾಲತ್‌ನ ಸಾರ್ಥಕತೆಗೆ ಒಂದು ನಿರ್ದಶನ ಎಂದು ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಕೆ. ಸೋಮಶೇಖರ್‌ ತಿಳಿಸಿದರು.

ಪ್ರವೇಶ ಅಕ್ರಮ: ಹೈಕೋರ್ಟ್‌ ಮೊರೆ ಹೋದ ಮಂಗಳೂರಿನ ವಿದ್ಯಾರ್ಥಿಗಳು
ಬೆಂಗಳೂರು: 2022-23ನೇ ಸಾಲಿನ ತಮ್ಮ ಪ್ರವೇಶವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಅಕ್ರಮವೆಂದು ಸಾರಿರುವ ಹಿನ್ನೆಲೆಯಲ್ಲಿ ತಮಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಕೋರಿ ಮಂಗಳೂರಿನ ಜಿ.ಆರ್‌. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಮೊದಲ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿನಿ ಡಿ.ಎಸ್‌. ಧಾತ್ರಿ ಸೇರಿ 90ಕ್ಕೂ ಅಧಿಕ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ| ಜಿ. ನರೇಂದರ್‌ ಮತ್ತು ನ್ಯಾ| ವಿಜಯ ಕುಮಾರ್‌ ಪಾಟೀಲ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿ ಸಂಬಂಧ ಕೇಂದ್ರ, ರಾಜ್ಯ ಸರಕಾರ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕಾಲೇಜಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಸೆ. 20ಕ್ಕೆ ಮುಂದೂಡಿದೆ. ಪ್ರವೇಶವನ್ನು ಅಕ್ರಮ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಹೇಳಿದೆ.

Advertisement

ಆದರೆ, ತಮ್ಮ ಶಿಕ್ಷಣ ಮುಂದುವರಿಕೆಗೆ ಅನುಕೂಲವಾಗುವಂತೆ ಯಾವುದಾದರೂ ಸರಕಾರಿ ಕಾಲೇಜಿಗೆ ತಮ್ಮನ್ನು ವರ್ಗಾವಣೆ ಮಾಡುವಂತೆ ಮತ್ತು ಅಕ್ಟೋಬರ್‌ ತಿಂಗಳ‌ಲ್ಲಿ ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕೆಂದು ಅರ್ಜಿದಾರ ವಿದ್ಯಾರ್ಥಿಗಳು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next