ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಶುಕ್ರವಾರ (ಡಿ.6) ಒಂದೇ ದಿನ 9.20 ಲಕ್ಷ ಜನ ಪ್ರಯಾಣಿಸಿದ್ದು, ಇದು ಈವರೆಗೆ ದಾಖಲೆಯಾಗಿದೆ.
ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ 4.39 ಲಕ್ಷ ಹಾಗೂ ಹಸಿರು ಮಾರ್ಗದಲ್ಲಿ 3.12 ಲಕ್ಷ, ನಾಡಪ್ರಭು ಕೆಂಪೇಗೌಡ ಮೆಟ್ರೋ ಇಂಟರ್‌ಚೇಂಜ್‌ನಿಂದ 1.67 ಲಕ್ಷ ಮತ್ತು ಪೇಪರ್ ಟಿಕೆಟ್‌ನಿಂದ 1,081 ಜನ ಸೇರಿದಂತೆ 9,20,562 ಜನ ಪ್ರಯಾಣಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಶುಕ್ರವಾರ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಖಾಸಗಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದು,ಅವರಲ್ಲಿ ಬಹುತೇಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಇದರಿಂದ ದಾಖಲೆ ಪ್ರಯಾಣ ಆಗಿರಬಹುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಆಗಸ್ಟ್ 14ರಂದು ಒಂದೇ ದಿನದಲ್ಲಿ 9.17 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಇದು ಮೆಟ್ರೋ ಆರಂಭವಾದ ದಿನದಿಂದ ಈವರೆಗಿನ ದಾಖಲೆಯಾಗಿತ್ತು. ಈಗ ಆ ದಾಖಲೆ ಸರಿಗಟ್ಟಿದ್ದು, ಮುಂದಿನ ಕೆಲವೇ ದಿನಗಳಲ್ಲಿ 10 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರತಿದಿನ ನಮ್ಮ ಮೆಟ್ರೋದಲ್ಲಿ ಸಂಚರಿಸುವ ಸರಾಸರಿ ಪ್ರಯಾಣಿಕರ ಸಂಖ್ಯೆ 8.52ಲಕ್ಷದಿಂದ 8.67 ಲಕ್ಷ ಆಗಿದೆ. ಈ ಹಿಂದೆ ಆಗಸ್ಟ್ 6ರಂದು ಮೆಟ್ರೋದಲ್ಲಿ ಅತಿಹೆಚ್ಚು 8.26 ಲಕ್ಷ ಜನ ಪ್ರಯಾಣಿಸಿದ್ದರು. ಅದಕ್ಕೂ ಮುನ್ನ ಅಂದರೆ 2022ರ ಆಗಸ್ಟ್ 15ರಂದು 8.25 ಲಕ್ಷ ಜನ ಪ್ರಯಾಣಿಸಿದ್ದರು. ಇನ್ನು ಇದೇ ವರ್ಷದ ಜನವರಿಯಲ್ಲಿ 7.48 ಲಕ್ಷ, ಫೆಬ್ರವರಿಯಲ್ಲಿ 7.05 ಲಕ್ಷ, ಮೇ 7.18 ಲಕ್ಷ ಪ್ರಯಾಣಿಕರು ಸಂಚರಿಸಿದ್ದರು ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಮುಂಬರುವ ದಿನಗಳಲ್ಲಿ ಆರ್.ವಿ. ರಸ್ತೆ- ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗ ತೆರೆದುಕೊಂಡ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ12-13 ಲಕ್ಷ ತಲುಪಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.