Advertisement
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಂ.ಜೋಷಿಯವರು ಆರೋಪಿ ರೇಖಾ ನಾಯ್ಕಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸಂತೋಷ್ ನಾಯ್ಕ ಅವರ ಪುತ್ರಿ ಸಾನ್ವಿಕಾ ಜು. 11ರಂದು ಮಗು ನಾಪತ್ತೆ ಪ್ರಕರಣ ದಾಖಲಾಗಿದ್ದರೆ, ಜು. 13ರಂದು ಮನೆಯ ಸಮೀಪದ ಹೊಳೆಯಲ್ಲಿ ಮೃತದೇಹ ಸಿಕ್ಕಿದ ಬಳಿಕ, ತಾಯಿ ರೇಖಾ ನಾಯ್ಕ ವಿರುದ್ಧವೇ ಶಂಕರನಾರಾಯಣ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಕಲಂ 302, 307 ಮತ್ತು 309 ಐಪಿಸಿ ಅಡಿಯಲ್ಲಿ ಪೊಲೀಸರು ಕೇಸು ದಾಖಲಾಗಿತ್ತು. ಆರೋಪಿ ಪರ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.
ಮಗುವಿನ ಮೃತದೇಹ ಪತ್ತೆಯಾಗುವವರೆಗೂ ತಾಯಿಯೇ ಹೇಳಿದಂತೆ ಯಾರೋ ಅಪಹರಣ ಮಾಡಿಕೊಂಡು, ನದಿಯಾಚೆ ದಾಟಿ ಹೋಗಿದ್ದಾರೆ ಎನ್ನುವುದೇ ನಿಜವಾಗಿತ್ತು. ಆದರೆ ಎಸ್‌ಪಿ ನಿಶಾ ಜೇಮ್ಸ್ ಖುದ್ದು ದಿನವಿಡೀ ಅಲ್ಲಿಯೇ ಮೊಕ್ಕಾಂ ಹೂಡಿ, ಡಿವೈಎಸ್‌ಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಸಿದಾಗ ಪ್ರಕರಣದ ಚಿತ್ರಣವೇ ಬದಲಾಗಿತ್ತು. “ಜು. 11ರಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಸಾಯಬೇಕು ಎನ್ನುವ ಉದ್ದೇಶದಿಂದಲೇ 5 ವರ್ಷದ ಮಗ ಸಾತ್ವಿಕ್ ಹಾಗೂ ಪುತ್ರಿ ಸಾನ್ವಿಕಾಳನ್ನು ಎತ್ತಿಕೊಂಡು ಮನೆಯ ಪಕ್ಕದ ಕುಬ್ಜಾ ನದಿಗೆ ಇಳಿದಿದ್ದು, ಆ ಸಮಯ ಬಲಕೈಯಲ್ಲಿದ್ದ ಮಗು ಸಾನ್ವಿಕಾಳು ಕೈಯಿಂದ ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಆ ಮಗುವನ್ನು ಹಿಡಿಯಲು ಹೋದಾಗ ಇನ್ನೊಂದು ಕೈಯಲ್ಲಿದ್ದ ಗಂಡು ಮಗ ಸಾತ್ವಿಕ್‌ನೊಂದಿಗೆ ಹೊಳೆಯ ನೀರಿನಲ್ಲಿ ಸುಮಾರು ದೂರ ಕೊಚ್ಚಿ ಹೋಗಿದ್ದು, ಕಷ್ಟಪಟ್ಟು ಗಂಡು ಮಗುವಿನೊಂದಿಗೆ ನಾನು ದಡ ಸೇರಿದೆ. ಆದರೆ ಹೆಣ್ಣು ಮಗು ಸಾನ್ವಿಕಾ ಹೊಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುತ್ತಾಳೆ. ಇದರಿಂದ ಭಯಗೊಂಡ ನಾನು ಮಗು ಅಪಹರಣದ ನಾಟಕ ಆಡಿದ್ದೆ’ ಎಂದು ರೇಖಾ ಪೊಲೀಸರಿಗೆ ಹೇಳಿಕೆ ನೀಡಿದ್ದರು.
Related Articles
ಕೊಲೆ ಪ್ರಕರಣದ ಆರೋಪಿಗೆ ಜಾಮೀನು ನೀಡಬಾರದು ಎನ್ನುವುದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದವಾಗಿದ್ದರೆ, ಪ್ಯೂಪೇರಿಯಂ (ಬಾಣಂತನವಾದ ನಂತರ ಕೆಲವು ಸ್ತ್ರೀಯರಲ್ಲಿ ಕಾಣಿಸುವ ಮನೋರೋಗ) ಎನ್ನುವ ಮನೋ ರೋಗದಿಂದ ಬಳಲುತ್ತಿದ್ದುದರಿಂದ ತಾಯಿ ರೇಖಾ ತನ್ನ ಮಗುವನ್ನು ಕೊಲೆ ಮಾಡಿರುವುದಾಗಿ ಆರೋಪಿ ಪರ ವಕೀಲರು ನ್ಯಾಯಾಧೀಶರ ಮುಂದೆ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.
Advertisement