Advertisement

ಅಕ್ಕಿ ಪಡೆದವರಿಗೆ ಮಾತ್ರ ದುಡ್ಡು; ರಾಜ್ಯ ಸರಕಾರದಿಂದ ಸದ್ದಿಲ್ಲದೆ ಅಲಿಖೀತ ಆದೇಶ

12:54 AM Jul 04, 2023 | Team Udayavani |

ಬೆಂಗಳೂರು: ಈ ತಿಂಗಳಿನಲ್ಲಿ ಪಡಿತರ ಪಡೆದವರಿಗೆ ಮಾತ್ರ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣ ಸಿಗಲಿದೆ. ಇಲ್ಲದಿದ್ದರೆ “ಅನ್ನಭಾಗ್ಯ’ದ ಗ್ಯಾರಂಟಿ ಇಲ್ಲ!

Advertisement

ಅಕ್ಕಿಯ ಬದಲಾಗಿ ಹಣ ನೀಡುವ ತೀರ್ಮಾನ ಕೈಗೊಂಡ ಬೆನ್ನಲ್ಲೇ ಸರಕಾರ ಸದ್ದಿಲ್ಲದೆ ಸಂಬಂಧಪಟ್ಟ ಇಲಾಖೆಗೆ ಇಂತಹ ದ್ದೊಂದು ಅಲಿಖೀತ ಫ‌ರ್ಮಾನು ಹೊರಡಿಸಿದೆ. ಈ ಮೂಲಕ ಪಡಿತರ ಪಡೆಯ ದವರಿಗೆ ಉದ್ದೇಶಿತ “ಅನ್ನಭಾಗ್ಯ’ ಯೋಜನೆ ಅಡಿ ತಾನು ನೀಡುವ ಹಣಕ್ಕೂ ಕೊಕ್ಕೆ ಹಾಕಲು ಮುಂದಾಗಿದೆ.

ರಾಜ್ಯದಲ್ಲಿ ಸುಮಾರು 10.89 ಲಕ್ಷ ಅಂತ್ಯೋದಯ ಕಾರ್ಡ್‌ ಹೊಂದಿರುವ ಕುಟುಂಬ ಗಳಿದ್ದು, 44.76 ಲಕ್ಷ ಸದಸ್ಯ ರಿದ್ದಾರೆ. ಅದೇ ರೀತಿ 1.17 ಕೋಟಿ ಬಿಪಿಎಲ್‌ ಕಾರ್ಡ್‌ ದಾರರಿದ್ದು, ಅಂದಾಜು 4 ಕೋಟಿ ಸದಸ್ಯರಿದ್ದಾರೆ. ನಿಯಮದ ಪ್ರಕಾರ ಇವರೆಲ್ಲ ರಿಗೂ ಪ್ರತೀ ತಿಂಗಳು ಕ್ರಮವಾಗಿ 35 ಕೆ.ಜಿ. ಹಾಗೂ ತಲಾ 5 ಕೆ.ಜಿ. ಅಕ್ಕಿ ಪೂರೈಕೆ ಆಗಬೇಕು. ಆದರೆ ಈ ಪೈಕಿ ಕೆಲವರು ಪಡಿತರ ಪಡೆಯಲು ಬರು ವುದೇ ಇಲ್ಲ. ಆ ವರ್ಗ ಅಂದಾಜು ಶೇ. 10ಕ್ಕಿಂತ ಅಧಿಕ ಇದೆ. ಅಂತಹವರಿಗೆ ಅಕ್ಕಿಯ ಬದ ಲಿನ ಹಣವನ್ನೂ ವರ್ಗಾ ವಣೆ ಮಾಡದಿರಲು ಉನ್ನತ ಮಟ್ಟದಲ್ಲಿ ಚಿಂತನೆ ನಡೆದಿದೆ.

ಅಂಕಿಅಂಶಗಳ ಪ್ರಕಾರ ಮೇ ತಿಂಗಳಿನಲ್ಲಿ ಪಡಿತರ ಪಡೆದವರ ಸಂಖ್ಯೆ ಶೇ. 82ರಿಂದ 83ರಷ್ಟಿದೆ. ಅದರಲ್ಲೂ ಬೆಂಗಳೂರು ಸೇರಿದಂತೆ ಹಲವು ನಗರಗಳ ವ್ಯಾಪ್ತಿಯಲ್ಲಿ ಪ್ರತೀ ತಿಂಗಳು ಅಕ್ಕಿ ಪಡೆಯುವವರ ಸಂಖ್ಯೆ ಸರಾಸರಿ ಶೇ. 75-80ರಷ್ಟು ಮಾತ್ರ ಇದೆ. ಉಳಿದವರಿಗೆ ಪಡಿತರದ ಆವಶ್ಯಕತೆ ಇಲ್ಲ. ಹೀಗಿರುವಾಗ ಅಕ್ಕಿಯ ಬದಲಿಗೆ ನೀಡುವ ಹಣವನ್ನೂ ಅನಗತ್ಯವಾಗಿ ಏಕೆ ಹಾಕಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ಸದ್ದಿಲ್ಲದೆ ಸಿದ್ಧತೆಗಳು ನಡೆದಿವೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಹೊಸ ತಂತ್ರ
ಪಡಿತರ ಪಡೆಯದ ವರ್ಗ ಶೇ. 10ರಷ್ಟು ಎಂದು ಲೆಕ್ಕಹಾಕಿದರೂ ಸುಮಾರು 10ರಿಂದ 12 ಲಕ್ಷ ಕುಟುಂಬಗಳಿಗೆ ಹೋಗಬಹುದಾದ “ಹೆಚ್ಚುವರಿ ಹಣ’ದ ಹರಿವಿಗೆ ಬ್ರೇಕ್‌ ಬೀಳಲಿದೆ. ಈ “ಉಳಿತಾಯದ ತಂತ್ರ’ ಸರಕಾರದ್ದಾಗಿದೆ. ಸಾಮಾನ್ಯವಾಗಿ ಬಿಪಿಎಲ್‌ ಕಾರ್ಡ್‌ ಹೊಂದುವ ಉದ್ದೇಶ ಬರೀ ಪಡಿತರ ಪಡೆಯುವುದಾಗಿರುವುದಿಲ್ಲ; ಉಚಿತ ಆರೋಗ್ಯ ಸೇವೆಯೂ ದೊರೆಯುವುದರಿಂದ ಈ ಕಾರ್ಡ್‌ ಹೊಂದಿರುತ್ತಾರೆ. ಬೆಂಗಳೂರಿನಂತಹ ನಗರ ಪ್ರದೇಶಗಳಿಗೆ ವಲಸೆ ಬಂದವರೂ ಪ್ರತ್ಯೇಕ ಬಿಪಿಎಲ್‌ ಕಾರ್ಡ್‌ ಹೊಂದಿರುತ್ತಾರೆ. ಆದರೆ ಅವರೆಲ್ಲ ಪಡಿತರದ ಬಗ್ಗೆ ತಲೆಕೆಡಿಸಿಕೊಳ್ಳುವುದು ಕಡಿಮೆ. ಇಂಥವರಿಗೆ ಹೆಚ್ಚುವರಿ 5 ಕೆ.ಜಿ.ಯ ಹಣ ನೀಡುವುದು ಅನಗತ್ಯ ಎಂಬ ಅಭಿಪ್ರಾಯ ಅಧಿಕಾರಿಗಳದ್ದಾಗಿದೆ.

Advertisement

ಸಾಮಾನ್ಯ ತಿಳಿವಳಿಕೆ: ಇಲಾಖೆ
“ಇದೊಂದು ಸಾಮಾನ್ಯ ತಿಳಿವಳಿಕೆ. 5 ಕೆ.ಜಿ. ಅಕ್ಕಿ ಸೇರಿದಂತೆ ಪಡಿತರ ಮತ್ತು ಅದರ ಬದಲಿಗೆ ನೀಡುವ ಹಣ ಒಂದಕ್ಕೊಂದು ಪೂರಕವಾದವು. ಬಯೋಮೆಟ್ರಿಕ್‌ ನೀಡಿ ಕಾರ್ಡುದಾರರು ಪಡಿತರ ಪಡೆಯುತ್ತಾರೆ. ಅದನ್ನು ಆಧರಿಸಿ ಫ‌ಲಾನುಭವಿಗಳ ಖಾತೆಗೆ ಅನಂತರ ಹಣ ವರ್ಗಾವಣೆ ಆಗುತ್ತದೆ. ಇಲ್ಲದಿದ್ದರೆ ಹಣವೂ ಇಲ್ಲ. ಪಡಿತರ ಪಡೆದ ಮೂರ್‍ನಾಲ್ಕು ದಿನಗಳಲ್ಲಿ ಹೆಚ್ಚುವರಿ ಅಕ್ಕಿ ಬದಲಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಇದೆಲ್ಲವೂ ಇನ್ನೂ ಸರಕಾರ ಮಟ್ಟದಲ್ಲಿ ಚರ್ಚೆ ಆಗುತ್ತಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next