ವಿಧಾನಸಭೆ: ಆನೆ, ಚಿರತೆ ಸೇರಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕುರಿತು ಹಳೇ ಮೈಸೂರು ಭಾಗದ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯನ್ನು ಅಧಿವೇಶನ ಮುಗಿದ ತಕ್ಷಣ ಕರೆದು ಚರ್ಚಿಸಲಾಗುವುದು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಹೊಳೆನರಸಿಪುರ ಹಾಗು ಅರಸೀಕೆರೆ ತಾಲೂಕುಗಳಲ್ಲಿ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಾಕಷ್ಟು ಸಾಕು ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿವೆ. ಒಬ್ಬ ವ್ಯಕ್ತಿ ಚಿರತೆ ಎದುರು ಹೋರಾಡಿ ಚಿರತೆ ಕೊಂದಿದ್ದಾನೆ. ರಾತ್ರಿ ಹೊತ್ತು ಯಾವ ಹೊತ್ತಿನಲ್ಲಾದರೂ ದಾಳಿ ಮಾಡುತ್ತವೆ. ಜನರು ಜೀವ ಕೈಯಲ್ಲಿ ಹಿಡಿದು ಬದುಕುವ ಪರಿಸ್ಥಿತಿ ಇದೆ ಎಂದು ಹೇಳಿದರು.
ಇದಕ್ಕೆ ಉತ್ತರ ನೀಡಿದ ಅರಣ್ಯ ಸಚಿವ ಉಮೇಶ್ ಕತ್ತಿ, ಹಾಸನ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಿದೆ. ಆನೆ, ಚಿರತೆ, ಮಂಗನ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ನಾನೇ ಸ್ವತಃ ಅಲ್ಲಿಗೆ ಭೇಟಿ ನೀಡಿ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗುವುದು. ಕಳೆದ ಮೂರು ವರ್ಷಗಳಲ್ಲಿ ಯಾವುದೇ ಮಾನವ ಜೀವ ಹಾನಿಯಾಗಿಲ್ಲ. ಸಾಕು ಪ್ರಾಣಿಗಳ ಜೀವ ಹಾನಿಗೆ ಪರಿಹಾರ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣಕ್ಕೆ ಕ್ರಮ: ಶಶಿಕಲಾ ಜೊಲ್ಲೆ
ಈ ಸಂದರ್ಭದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಕಾಡು ಪ್ರಾಣಿಗಳ ಹಾವಳಿ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಾಗಿದೆ. ಚನ್ನಪಟ್ಟಣ, ರಾಮನಗರ ತಾಲೂಕುಗಳಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಕಾಡು ಪ್ರಾಣಿಗಳ ನಾಡಿನ ಪ್ರವೇಶಕ್ಕೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಾಡು ಪ್ರಾಣಿಗಳು ದಾಳಿ ಇಡಬಾರದು ಎಂದು ರೈತ ತನ್ನ ಹೊಲದ ದಂಡೆಗೆ ಕರೆಂಟ್ ಹಾಕಿದ್ದ, ಇದರಿಂದ ಆನೆ ಸಾವಿಗೀಡಾಗಿತ್ತು. ಅದರಿಂದ ರೈತನನ್ನು ಬಂಧಿಸಲಾಯಿತು. ಈ ರೀತಿಯ ಬೆಳವಣಿಗೆಗಳು ನಿರಂತರ ನಡೆಯುತ್ತಲೇ ಇರುತ್ತವೆ. ಇದೆಲ್ಲದಕ್ಕೂ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಅವರ ಮಾತಿಗೆ ಧ್ವನಿಗೂಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಬಗ್ಗೆ ಅರಣ್ಯ ಸಚಿವರು ವಿಶೇಷ ಸಭೆ ಕರೆದು ಚರ್ಚಿಸಿ, ಮುಖ್ಯಮಂತ್ರಿ ಜೊತೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ ಮಾತನಾಡಿ, ಹಸು ಸೇರಿ ಸಾಕು ಪ್ರಾಣಿಗಳು ಕಾಡು ಪ್ರಾಣಿಗಳ ದಾಳಿಗೆ ತುತ್ತಾದಾಗ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಮನವಿ ಮಾಡಿದರು.
ಸಚಿವ ಉಮೇಶ ಕತ್ತಿ ಪ್ರತಿಕ್ರಿಯಿಸಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಅಧಿವೇಶನ ಮುಗಿದ ನಂತರ ಹಳೆ ಮೈಸೂರು ಭಾಗದ ಹಾಸನ, ಮಂಡ್ಯ, ರಾಮನಗರ, ಕೋಲಾರ ಜಿಲ್ಲೆಗಳ ಜನ ಪ್ರತಿನಿಧಿಗಳ ಸಭೆ ಕರೆದು ಕಾಡು ಪ್ರಾಣಿಗಳ ಹಾವಳಿ ತಡೆಯಲು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನೀವು ಸಭೆ ನಡೆಸುವ ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಗಳು ಇಲ್ಲವಲ್ಲ ಎಂದು ಕೇಳಿದರು. ಆನೆ ದಾಳಿ ಹಾವಳಿ ಇರುವ ಜಿಲ್ಲೆಗಳ ಸಭೆ ನಡೆಸುವುದಾಗಿ ಹೇಳುತ್ತಿದ್ದೇನೆ ಎಂದು ಸಚಿವರು ಹೇಳಿದರು.