Advertisement

ಡೀಮ್ಡ್ ಫಾರೆಸ್ಟ್‌ ಕುರಿತು ಶೀಘ್ರ ತೀರ್ಮಾನಕ್ಕೆ ಪತ್ರ

06:40 AM Aug 14, 2018 | Team Udayavani |

ಬೆಂಗಳೂರು: ಗ್ರಾಮೀಣ ಮತ್ತು ನಗರ ಅಕ್ರಮ ಸಕ್ರಮಕ್ಕೆ (94ಸಿ ಮತ್ತು 94 ಸಿಸಿ) ಸಂಬಂಧಿಸಿದಂತೆ ಬಡವರಿಗೆ ಜಮೀನು ಮಂಜೂರು ಮಾಡಲು ಅನುಕೂಲವಾಗುವಂತೆ ಡೀಮ್ಡ್ ಫಾರೆಸ್ಟ್‌ ವಿಚಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕು ಮತ್ತು ಅದುವರೆಗೆ ಸರ್ಕಾರಿ ಜಾಗಕ್ಕೆ ಅಕ್ರಮ-ಸಕ್ರಮದಡಿ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸದಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರನ್ನು ಆಗ್ರಹಿಸಿದ್ದಾರೆ.

Advertisement

ಈ ಕುರಿತು ಕಂದಾಯ ಸಚಿವರಿಗೆ ಪತ್ರ ಬರೆದಿರುವ ಅವರು, 94 ಸಿ ಮತ್ತು 94 ಸಿಸಿ ಅರ್ಜಿಗಳ ವಿಲೇವಾರಿ ಹಾಗೂ 50 ಮತ್ತು 53 ಅರ್ಜಿಗಳ ವಿಲೇವಾರಿ ಮಾಡಿ ಹಕ್ಕುಪತ್ರಗಳನ್ನು ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದೀರಿ. ಈ ಆದೇಶದಲ್ಲಿ 94 ಸಿ ಮತ್ತು 94 ಸಿಸಿ ಅಡಿ ಹಕ್ಕುಪತ್ರ ನೀಡಲು ಸಾಧ್ಯವಾಗದಿದ್ದಲ್ಲಿ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಬೇಕು ಎಂದು ಆದೇಶಿಸಿದ್ದೀರಿ. ಆದರೆ, ಸಿಆರ್‌ಝೆಡ್‌ ಪ್ರದೇಶ, ಕುಮ್ಕಿ, ಗೋಮಾಳ, ಸಿ ಆ್ಯಂಡ್‌ ಡಿ ಭೂಇ, ಡೀಮ್ಡ್ ಫಾರೆಸ್ಟ್‌ ಇತ್ಯಾದಿ ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡವರಿಗೆ ಸಕ್ರಮಗೊಳಿಸಲು ನಿಯಮಾವಳಿಯಲ್ಲಿ ಅವಕಾಶವಿಲ್ಲ. ಇದರಿಂದಾಗಿ ಇಂತಹ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ಪಡೆಯಲು ಅವಕಾಶವಿಲ್ಲದಂತಾಗಿದೆ ಎಂದು ಹೇಳಿದ್ದಾರೆ.

ಡೀಮ್ಡ್ ಫಾರೆಸ್ಟ್‌ನಲ್ಲಿ ಮನೆ ಕಟ್ಟಿಕೊಂಡವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಡೀಮ್ಡ್ ಫಾರೆಸ್ಟ್‌ ಎಂಬ ಕಾರಣಕ್ಕೆ ಅಧಿಕಾರಿಗಳು ಅಲ್ಲಿನ ಮನೆಗಳನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡುತ್ತಿಲ್ಲ. ಬದಲಾಗಿ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಈ ಮಧ್ಯೆ ಉಡುಪಿ ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್‌, ದಕ್ಷಿಣ ಕನ್ನಡದಲ್ಲಿ 25 ಸಾವಿರ ಹೆಕ್ಟೇರ್‌, ಶಿವಮೊಗ್ಗ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್‌ನಿಂದ ಕೈಬಿಡುವಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈ ಕಡತ ಸಚಿವ ಸಂಪುಟದ ಮುಂದೆ ಬಾಕಿ ಇದೆ ಎಂದು ಹೇಳಿದ್ದಾರೆ.

ಆದ್ದರಿಂದ ಸಂಪುಟ ಸಭೆಯಲ್ಲಿ ಈ ಕಡತದ ಬಗ್ಗೆ ತೀರ್ಮಾನ ಕೈಗೊಳ್ಳುವಾಗ ಬಡವರ ಪರ ತೀರ್ಮಾನ ಕೈಗೊಳ್ಳಬೇಕು. ಅಲ್ಲಿಯವರೆಗೆ ಸರ್ಕಾರಿ ಜಾಗದಲ್ಲಿ ಅಕ್ರಮ-ಸಕ್ರಮಕ್ಕೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸದಂತೆ ಜಿಲ್ಲಾಧಿಕಾರಿಗಳಿಗೆ ಮತ್ತೂಂದು ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next