Advertisement

ರಾಜ್ಯಕ್ಕೆ ಆರೋಗ್ಯ ಮಂತ್ರಿಯನ್ನು ಕೊಟ್ಟ ಹೆಮ್ಮೆಯ ಶಾಲೆ

09:57 AM Dec 06, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1913 ಶಾಲೆ ಆರಂಭ
1995ರ ಬಳಿಕ ಹಿ.ಪ್ರಾ. ಶಾಲೆಯಾಗಿ ಮೇಲ್ದರ್ಜೆಗೆ

ಬಂಟ್ವಾಳ: ಐತಿಹಾಸಿಕ ನೆತ್ತರಕೆರೆಯ ದಂಡೆಯಲ್ಲೇ ಬೆಳೆದು ನಿಂತಿರುವ ಕಳ್ಳಿಗೆ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ರಾಜ್ಯಕ್ಕೆ ಆರೋಗ್ಯ ಮಂತ್ರಿಯನ್ನು ಕೊಟ್ಟ ಹೆಮ್ಮೆಯನ್ನೂ ಗಳಿಸಿಕೊಂಡಿದೆ. 1913ರಲ್ಲಿ ಈ ಶಾಲೆ ಪ್ರಾರಂಭಗೊಂಡಿದೆ ಎಂದು ದಾಖಲೆಗಳು ಹೇಳುತ್ತಿದ್ದರೂ ಅದಕ್ಕೂ ಒಂದಷ್ಟು ವರ್ಷಗಳ ಹಿಂದೆ ಈ ಶಾಲೆ ಮುಳಿಹುಲ್ಲಿನ ಛಾವಣಿಯ, ಮಣ್ಣಿನ ಗೋಡೆಯ ಗುಡಿಸಲಿನಲ್ಲಿ ನಡೆಯುತ್ತಿತ್ತು ಎನ್ನಲಾಗುತ್ತಿದೆ.

ಒಮ್ಮೆ ಶಾಲೆಯು ಕುಸಿದ ಸಂದರ್ಭ ಸ್ಥಳೀಯ ವೆಂಕಪ್ಪಯ್ಯ ರಾವ್‌ ಹೊಗೆಗದ್ದೆ ಅವರ ಮನೆಯಲ್ಲಿ ಶಾಲೆ ನಡೆದಿತ್ತು. ತುಂಬೆ, ಪುದು, ಕೊಡಾಣ್‌ ಹಾಗೂ ಕಳ್ಳಿಗೆ ಗ್ರಾಮಕ್ಕೆ ಇದು ಏಕೈಕ ಶಾಲೆಯಾಗಿತ್ತು. ಈಗ ಇಲ್ಲಿ 5 ಸರಕಾರಿ ಪ್ರಾಥಮಿಕ ಕಾಗೂ 2 ಸರಕಾರಿ ಪ್ರೌಢಶಾಲೆಗಳಿವೆ. ಪ್ರಾರಂಭದಲ್ಲಿ ಇಲ್ಲಿ 1ರಿಂದ 5ನೇ ತರಗತಿಗಳು ಮಾತ್ರ ಇದ್ದು, 1995ರ ಬಳಿಕ ಹಿ.ಪ್ರಾ. ಶಾಲೆಯಾಗಿ ಮೇಲ್ದರ್ಜೆಗೇರಿತ್ತು. ಆರ್‌ಎಸ್‌ಎಸ್‌ನ ಮೋಹನ್‌ಜಿ ಭಾಗವತ್‌, ಸಂತೋಷ್‌ಜೀ ಮೊದಲಾದ ಗಣ್ಯರು, ರಾಜಕೀಯ ನಾಯಕರು ಈ ಶಾಲೆಗೆ ಭೇಟಿ ನೀಡಿದ್ದಾರೆ.

ಹಳೆ ವಿದ್ಯಾರ್ಥಿ ಆರೋಗ್ಯ ಸಚಿವರು
60ರ ದಶಕದಲ್ಲಿ ಸುರತ್ಕಲ್‌ ಶಾಸಕರಾಗಿದ್ದ ಡಾ| ಕೆ. ನಾಗಪ್ಪ ಆಳ್ವ ಅವರು ಇದೇ ಕಳ್ಳಿಗೆ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ರಾಜ್ಯ ಸರಕಾರದ ಆರೋಗ್ಯ ಮಂತ್ರಿ, ಮೈಸೂರು ಪ್ರಾಂತದ ರಾಜ್ಯಸಭಾ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಖ್ಯಾತ ಕೈ ಬರಹ ವಿಶ್ಲೇಷಕಿ ಡಾ| ನೂತನ ರಾವ್‌ ಅವರೂ ಕಳ್ಳಿಗೆಯ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದರು. ಬೆಂಗಳೂರಿನ ಪ್ರಸಿದ್ಧ ಉದ್ಯಮಿ ಮುಂಡಾಜೆಗುತ್ತು ಚಿಕ್ಕರಾಜೇಂದ್ರ ಶೆಟ್ಟಿ, ಪ್ರಗತಿಪರ ಕೃಷಿಕ ನಾರಾಯಣ ರಾವ್‌, ಉದ್ಯಮಿ ವೆಂಕಟ ರಾವ್‌, ಎಂಜಿನಿಯರ್‌ ಸುಬ್ರಹ್ಮಣ್ಯ ರಾವ್‌ ಮೊದಲಾದ ಗಣ್ಯರು ಈ ಶಾಲೆಯಲ್ಲೇ ಕಲಿತ್ತಿದ್ದಾರೆ.

Advertisement

ದತ್ತು ಪಡೆದು ಅಭಿವೃದ್ಧಿ
ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಕಂಡ ಸ್ಥಳೀಯ ನವೋದಯ ಮಿತ್ರಕಲಾ ವೃಂದವು ಶಾಲೆಯನ್ನು ದತ್ತು ಪಡೆದು, ದತ್ತು ಸಮಿತಿ ಅಧ್ಯಕ್ಷ ಸುರೇಶ್‌ ಭಂಡಾರಿ ಅರ್ಬಿ ಅಧ್ಯಕ್ಷತೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿತ್ತು. ಉದ್ಯಮಿ ಎಂ. ಚಿಕ್ಕರಾಜೇಂದ್ರ ಶೆಟ್ಟಿ ಅವರ ಕುಟುಂಬ ಶಾಲೆಗೆ 13 ಲಕ್ಷ ರೂ. ವೆಚ್ಚದ ಕೊಡುಗೆ ನೀಡಿದೆ. ಎಸ್‌ಡಿಎಂಸಿ ಅಧ್ಯಕ್ಷ ದಾಮೋದರ ನೆತ್ತರಕೆರೆ ಅಧ್ಯಕ್ಷತೆಯಲ್ಲಿ ಸಮಿತಿಯು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ.

ಪ್ರಸ್ತುತ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 121 ವಿದ್ಯಾರ್ಥಿಗಳು, ಪೂರ್ವ ಪ್ರಾಥಮಿಕದಲ್ಲಿ 45 ವಿದ್ಯಾರ್ಥಿಗಳು ಸಹಿತ ಒಟ್ಟು 165 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 5 ಮಂದಿ ಖಾಯಂ ಶಿಕ್ಷಕರು, ಒಬ್ಬರು ಅತಿಥಿ ಶಿಕ್ಷಕಿ ಹಾಗೂ ಮೂರು ಮಂದಿ ಗೌರವ ಶಿಕ್ಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯು ಹಾಲಿ 2.07 ಎಕ್ರೆ ಜಾಗವಿದ್ದು, ಕಟ್ಟಡಗಳು, ಬಾವಿ ಇದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಕರಾಟೆ, ಸಂಗೀತ ಮೊದಲಾದ ಸೃಜನಾತ್ಮಕ ಚಟುವಟಿಕೆಗಳನ್ನು ಕಲಿಸಲಾಗುತ್ತಿದೆ.

ಶತಮಾನ ಕಂಡ ಈ ಶಾಲೆ ಕಳ್ಳಿಗೆ ಗ್ರಾಮದ ಹೆಮ್ಮೆಯ ವಿದ್ಯಾಲಯವಾಗಿದೆ. ಶಾಲಾಭಿವೃದ್ಧಿ ಸಮಿತಿ, ಶಾಲಾ ದತ್ತು ಸಮಿತಿ ಹಾಗೂ ಜನ ಸಮುದಾಯದವರು ಶಾಲೆಯ ಪ್ರಗತಿಗೆ ಬೆನ್ನೆಲುಬು ಆಗಿ ನಿಂತಿರುವುದು ಬಹಳ ಹೆಮ್ಮೆಯ ವಿಚಾರ.
-ಗುಣರತ್ನಾ, ಮುಖ್ಯ ಶಿಕ್ಷಕಿ

1962-65ರಲ್ಲಿ ತಾನು ಕಲಿಯುವ ವೇಳೆಗೆ ಶಾಲೆಯು ಏಕೋಪಾಧ್ಯಾಯ ಶಾಲೆಯಾಗಿದ್ದು, ಆಗ ಭೋಜ ಮಾಸ್ಟರ್‌ ಶಿಕ್ಷಕರಿದ್ದರು. ಕೇವಲ ಒಂದು ಹಾಲ್‌ನ ರೀತಿಯ ಮುಳಿಹುಲ್ಲಿನ ಕಟ್ಟಡದಲ್ಲಿ ಶಾಲೆ ನಡೆಯುತ್ತಿತ್ತು. ಅದು ಒಮ್ಮೆ ಕುಸಿದು, ಬಳಿಕ ಸ್ಥಳೀಯರೊಬ್ಬರ ಮನೆಯಲ್ಲಿ ಶಾಲೆ ನಡೆದಿತ್ತು. ಶಾಲೆಯು ಬಹಳ ಇತಿಹಾಸವನ್ನು ಹೊಂದಿದ್ದು, ಅನೇಕ ಮಹನೀಯರು ಅಲ್ಲಿ ಕಲಿತಿದ್ದಾರೆ.
-ಮುಂಡಾಜೆಗುತ್ತು ಚಿಕ್ಕರಾಜೇಂದ್ರ ಶೆಟ್ಟಿ, ಉದ್ಯಮಿ, ಬೆಂಗಳೂರು, ಹಳೆ ವಿದ್ಯಾರ್ಥಿ

- ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next