Advertisement

ಪಶ್ಚಿಮ ಘಟ್ಟ ಕೊರೆದು ವಯನಾಡ್‌ಗೆ 8 ಕಿ.ಮೀ. ಸುರಂಗ

03:49 AM Oct 08, 2020 | Hari Prasad |

ಕಲ್ಲಿಕೋಟೆಯನ್ನು ವಯನಾಡ್‌ಗೆ ಸಂಪರ್ಕಿಸುವ ನಿಟ್ಟಿನಲ್ಲಿ ಪಶ್ಚಿಮ ಘಟ್ಟ ಕೊರೆದು ಎಂಟು ಕಿಮೀ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಅ.5ರಂದು ಚಾಲನೆ ಸಿಕ್ಕಿದೆ. ಆರಂಭದಲ್ಲಿ ಈ ಯೋಜನೆ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ನಡೆಯಲಿದೆ.

Advertisement

ಮುಂದಿನ ಮಾರ್ಚ್‌ಗೆ ಕಾಮಗಾರಿ ಶುರುವಾಗಿ 34 ತಿಂಗಳುಗಳಲ್ಲಿ ಮುಕ್ತಾಯವಾಗಲಿದೆ ಎನ್ನುವುದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿಕೆ.

ಈ ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅನುಮತಿ ನೀಡಬೇಕಷ್ಟೇ.

ಏನಿದು ಸುರಂಗ ರಸ್ತೆ ಯೋಜನೆ?
– 7 ಕಿಮೀ ಉದ್ದದ ಸುರಂಗ ರಸ್ತೆ. ಕಾಮಗಾರಿ ಪೂರ್ತಿಯಾದರೆ ದೇಶದಲ್ಲಿಯೇ ಅದು ಮೂರನೇ ಉದ್ದದ ರಸ್ತೆಯಾಗಲಿದೆ. ಕಲ್ಲಿಕೋಟೆಯ ತಿರುವಾಂಬಾಡಿ ಗ್ರಾ.ಪಂ.ನ ಮಾರಿಪುಳದಿಂದ ವಯನಾಡ್‌ನ‌ ಮೇಪ್ಪಡಿ ಪಂಚಾಯತ್‌ನ ಕಲ್ಲಡಿವರೆಗೆ ರಸ್ತೆ ನಿರ್ಮಾಣವಾಗಲಿದೆ.

– ವಯನಾಡ್‌ ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸಲು ಸದ್ಯ ನಾಲ್ಕು ರಸ್ತೆಗಳಿವೆ. ಈ ಪೈಕಿ 13 ಕಿಮೀ ದೂರದ ತಲಮಶ್ಯೇರಿ ಘಾಟಿ ರಸ್ತೆ ಮತ್ತು ಕಲ್ಲಿಕೋಟೆ – ಮೈಸೂರು ನಡುವಿನ ರಾ.ಹೆ. ಸಂಖ್ಯೆ 766 ಸೇರಿದೆ.

Advertisement

– ಮುಂಗಾರು ಅವಧಿಯಲ್ಲಿ ತಲಮಶ್ಯೇರಿ ಘಾಟಿ ರಸ್ತೆ ಭೂಕುಸಿತದಿಂದ ಕೂಡಿರುತ್ತದೆ. ಅದನ್ನು ಅಗಲಗೊಳಿಸುವ ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕಿಲ್ಲ. ಹಲವು ಬದಲಿ ರಸ್ತೆಗಳನ್ನು ಪ್ರಸ್ತಾವ‌ ಮಾಡಿದ್ದರೂ ಅದು ಕಾರ್ಯಸಾಧ್ಯವಾಗಿಲ್ಲ.

ಪ್ರಸ್ತಾವ ಮತ್ತು ಪ್ರಗತಿ
– 1970ರಿಂದಲೇ ಸುರಂಗ ಮಾರ್ಗದ ಪ್ರಸ್ತಾವವಿತ್ತು. ಇದರ ಜತೆಗೆ ಬದಲಿ ರಸ್ತೆ ನಿರ್ಮಾಣದ ಯೋಜನೆಯೂ ಇತ್ತು. ಅರಣ್ಯ ಪ್ರದೇಶದ ಭೂಮಿ ಇದ್ದುದರಿಂದ ಹೆಚ್ಚಿನ ಪ್ರಗತಿ ಕಂಡುಬರಲಿಲ್ಲ.

– 2015ರಲ್ಲಿ ಕೇರಳ ಸರಕಾರ ಖಾಸಗಿ ಸಂಸ್ಥೆಯಿಂದ ಮಾರಿಪುಳದಿಂದ ಕಲ್ಲಡಿವರೆಗೆ ಸುರಂಗ ಮಾರ್ಗಕ್ಕೆ ಸಲಹೆ ಮಾಡಿತು. ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಷ್ಟವೆಂದು ಅದು ಅಭಿಪ್ರಾಯಪಟ್ಟಿತು.

– 2016ರಲ್ಲಿ ಎಲ್‌ಡಿಎಫ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕೊಂಕಣ ರೈಲ್ವೇ ಕಾರ್ಪೊರೇಷನ್‌ಗೆ ಅದರ ಹೊಣೆ ವಹಿಸಲಾಯಿತು.

ಯೋಜನೆಯ ಮೊತ್ತ: 658 ಕೋಟಿ ರೂ.

ಹೂಡಿಕೆ ಸಂಸ್ಥೆ: ಕೇರಳ ಮೂಲ ಸೌಕರ್ಯ ಬಂಡವಾಳ ಹೂಡಿಕೆ ನಿಧಿ (ಕೆಐಐಎಫ್ಬಿ)

ಪರಿಸರಕ್ಕೆ ಹಾನಿ ಇದೆಯೇ?
ಅರಣ್ಯ ಇಲಾಖೆ ಪ್ರಕಾರ ಇದೊಂದು ಪರಿಸರ ಸೂಕ್ಷ್ಮ ಪ್ರದೇಶ. ಶೋಲಾ ಕಾಡುಗಳು ಇಲ್ಲಿವೆ. ಇದೊಂದು ಜೌಗು ಪ್ರದೇಶವೂ ಹೌದು. ವಯನಾಡ್‌ ಮತ್ತು ತಮಿಳುನಾಡಿನ ನೀಲಗಿರಿ ಪ್ರದೇಶದ ವ್ಯಾಪ್ತಿಯಲ್ಲಿ ಆನೆಗಳು ಸಂಚರಿಸುವ ಪ್ರದೇಶ. ವಯನಾಡ್‌ ಪರ್ವತ ಪ್ರದೇಶಗಳಿಂದ ಕಬಿನಿ, ಚಲಿಯಾರ್‌ ನದಿ ಹುಟ್ಟಿ ಕರ್ನಾಟಕದತ್ತ ಹರಿಯುತ್ತಿವೆ.

ಯೋಜನೆ ಪರ ವಾದ ಮಾಡುವವರು ಸುರಂಗ ರಸ್ತೆಯಿಂದ ಅರಣ್ಯಕ್ಕೆ ಹಾನಿ ಇಲ್ಲ ಎನ್ನುತ್ತಿದ್ದಾರೆ. ಕೇಂದ್ರ ಅರಣ್ಯ ಇಲಾಖೆ ನಿಯಮ ಪ್ರಕಾರ ಭೂಮಿಯ ಮೇಲ್ಮೈ ಪ್ರದೇಶಕ್ಕೆ ಮಾತ್ರವಲ್ಲ, ಭೂಮಿಯೊಳಗಿನ ಪ್ರದೇಶಕ್ಕೂ ಅರಣ್ಯ ಕಾಯ್ದೆ ಅನ್ವಯ.

Advertisement

Udayavani is now on Telegram. Click here to join our channel and stay updated with the latest news.

Next