ಬಹುನಿರೀಕ್ಷಿತ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರಕಾರದ ಗುರಿಯ ದುಪ್ಪಟ್ಟು ಸುಮಾರು 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗೆ ಒಪ್ಪಂದಗಳಾಗಿರುವುದು ಉತ್ತಮ ಬೆಳವಣಿಗೆ.
ರಾಜ್ಯದ ಆರ್ಥಿಕತೆ ಚೇತರಿಕೆ ದೃಷ್ಟಿಯಿಂದ ಹಾಗೂ ಉದ್ಯಮ ಮತ್ತು ಕೈಗಾರಿಕೆ ಬೆಳವಣಿಗೆ ಹಿನ್ನೆಲೆಯಲ್ಲಿ ಕೊರೊನಾ ಅನಂತರ ರಾಜ್ಯ ಸರಕಾರ ಇನ್ವೆಸ್ಟ್ ಕರ್ನಾಟಕ ಹೂಡಿಕೆ ಸಮಾವೇಶದ ಮೂಲಕ ಮೊದಲ ಹಂತದ ಯಶಸ್ಸು ಗಳಿಸಿದೆ. ಹತ್ತು ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಿಂದ 10 ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇರುವುದು ರಾಜ್ಯದ ಪಾಲಿಕೆ ಭರವಸೆ ಮೂಡಿಸಿದೆ. ಕೊರೊನಾ ಅನಂತರ ವಿಶ್ವದ ಬಹುತೇಕ ದೇಶ ಮತ್ತು ರಾಜ್ಯಗಳ ಆರ್ಥಿಕತೆ ಕುಸಿದು ನಲುಗುತ್ತಿವೆ. ಇಂತಹ ಸಂದರ್ಭದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದ ಮೊದಲ ರಾಜ್ಯ ಕರ್ನಾಟಕ ಎಂಬುದು ಹೆಮ್ಮೆಯ ವಿಚಾರ.
ಇದೀಗ ರಾಜ್ಯ ಸರಕಾರ ಬಂಡವಾಳ ಹೂಡಿಕೆಗೆ ತಕ್ಕಂತೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ. ಒಪ್ಪಂದದ ಎರಡನೇ ಹಂತದಲ್ಲಿ ಇದು ಅತ್ಯಗತ್ಯ. ಜತೆಗೆ ಒಪ್ಪಂದಗಳ ಪೈಕಿ ಅನುಷ್ಠಾನದ ಪ್ರಮಾಣವೂ ಹೆಚ್ಚಳವಾಗಬೇಕಾಗಿದೆ. ಏಕೆಂದರೆ ಹಿಂದಿನ ನಾಲ್ಕು ಹೂಡಿಕೆದಾರರ ಸಮಾವೇಶದ ಪ್ರತಿಫಲ ನೋಡಿದಾಗ ಶೇ.15 ರಿಂದ ಶೇ.44 ರಷ್ಟು ಮಾತ್ರ ಅನುಷ್ಠಾನಗೊಂಡಿದೆ.
ಇದಕ್ಕೆ ಸಾಕಷ್ಟು ಕಾರಣಗಳು ಇರಬಹುದು, ಬೇರೆ ಬೇರೆ ಹಂತದಲ್ಲಿ ಅಡ್ಡಿಗಳು ಎದುರಾಗಿರಬಹುದು. ಆದರೆ ಪ್ರಸ್ತುತ ಕೈಗಾರಿಕೆ ಇಲಾಖೆ ಹಿಂದಿನ ನಿಯಮಾವಳಿಗಳಲ್ಲಿ ಸಾಕಷ್ಟು ಸರಳೀಕರಣ ಹಾಗೂ ಕೈಗಾರಿಕಾ ಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಈ ಬಾರಿಯ ಒಪ್ಪಂದಗಳಲ್ಲಿ ಹೆಚ್ಚಿನ ಪ್ರಮಾಣದ ಅನುಷ್ಠಾನಕ್ಕೆ ಒತ್ತು ನೀಡಬೇಕಾಗಿದೆ.
ಈವರೆಗಿನ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಗಳು ಬೆಂಗಳೂರು ಕೇಂದ್ರೀಕೃತವಾಗಿದ್ದವು. ಈ ಬಾರಿ ಬಿಯಾಂಡ್ ಬೆಂಗ ಳೂರು ಪರಿಕಲ್ಪನೆಯಲ್ಲಿ ಬೆಂಗಳೂರು ಹೊರತುಪಡಿಸಿ 2 ಮತ್ತು 3ನೇ ಹಂತದ ನಗರಗಳತ್ತ ಉದ್ಯಮಿಗಳು ಆಸಕ್ತಿ ತೋರಿರುವುದು ಉತ್ತಮ ಬೆಳ ವಣಿಗೆ. ಉದ್ಯಮಗಳು ರಾಜ್ಯ ಸರಕಾರದ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿ ಕೊಳ್ಳಲಾಗುವುದು. ಮೂರು ದಿನಗಳ ಸಮಾವೇಶದಲ್ಲಿನ ಒಪ್ಪಂದ ಗಳನ್ನು ಮುಂದಿನ ಮೂರು ತಿಂಗಳೊಳಗಾಗಿ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹಾಗೂ ಕೈಗಾರಿಕೆ ಸಚಿ ವರು ಭರವಸೆ ನೀಡಿರುವುದು ಹೂಡಿಕೆದಾರರಲ್ಲಿÉ ಆಶಾಭಾವನೆ ಮೂಡಿಸಿದೆ. ಮುಂದಿನ ಜಾಗತಿಕ ಹೂಡಿಕೆದಾರರ ಸಮಾವೇಶ 2025ರಲ್ಲಿ ನಡೆಸುವುದಾಗಿ ಘೋಷಣೆ ಸಹ ಮಾಡಿರುವುದರಿಂದ ಅಷ್ಟರಲ್ಲಿ ಈಗಿನ ಸಮಾವೇಶದ ಎಲ್ಲ ಒಪ್ಪಂದ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಬೇಕಾಗಿದೆ.
ಈ ಬಾರಿಯ ಸಮಾವೇಶದಲ್ಲಿ ಇಂಧನ, ಉತ್ಪಾದನೆ, ನವೀಕರಿಸಬಹು ದಾದ ಇಂಧನ, ಮೂಲಸೌಕರ್ಯ ಸಹಿತ ಪ್ರಮುಖ ವಲಯಗಳಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗಿರುವುದು ಗಮನಾರ್ಹ. ಐಟಿ-ಬಿಟಿ ಕೇಂದ್ರ ಆಗಿರುವ ಕರ್ನಾಟಕವನ್ನು ದೇಶದ ಆರ್ಥಿಕತೆಯ ಕೇಂದ್ರವನ್ನಾಗಿ ಸುವುದು ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿಯವರು ಘೋಷಿಸಿರುವುದು ಮತ್ತು ಹೂಡಿಕೆದಾರರ ಸಮಾವೇಶವು ಕೇವಲ ಹೂಡಿಕೆಗೆ ಸೀಮಿತವಾಗದೆ ಯುವ ಜನರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಿದೆ ಎಂದು ಹೇಳಿರುವುದು ಕರ್ನಾಟಕದ ದಿಟ್ಟ ಹೆಜ್ಜೆಗೆ ಸಾಕ್ಷಿ.