Advertisement
ತನ್ನ ಕೃತಿಗಳು, ಬದುಕು, ಸಂಸ್ಥೆಗಳೊಡನೆ ಸಂತಸ- ಇವುಗಳ ಮೂಲಕ ನಮ್ಮೊಡನೆ ಸದಾ ಒಡನಾಟವಿಟ್ಟುಕೊಂಡು ಆತ್ಮೀಯರಾಗಿದ್ದ, ಸಾರ್ವಜನಿಕ ಜೀವನದ ಕ್ರಿಯಾಶೀಲ ಭಾಗವಾಗಿದ್ದ ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರಂಥವರು ಇಲ್ಲವಾದಾಗ ಅವರನ್ನು ಹೇಗೆ ನೆನಪಿಟ್ಟುಕೊಳ್ಳಬಹುದು? ಸಾಹಿತಿಯೊಬ್ಬನ ಬದುಕನ್ನು ಸ್ಮರಿಸಿಕೊಳ್ಳುವಾಗ, ಕೃತಜ್ಞತೆ ಹೇಳುವಾಗ ಪರಿಗಣಿಸಬೇಕಾದ್ದು ಕೆಲವೇ ಅಂಶಗಳನ್ನು : ಆತ ಸಾಹಿತ್ಯವೆಂಬ ಒಂದು ಸಂಸ್ಥೆಯನ್ನು ಎಷ್ಟು ಮಾನವೀಯಗೊಳಿಸಿದ, ಎಷ್ಟು ಓದುಗರ ಬದುಕಿಗೆ ಸಾಹಿತ್ಯವನ್ನು ಆತ್ಮೀಯವಾಗಿಸಿದ, ಸಾಹಿತ್ಯ ಕೃತಿಗಳು ಸಾದರಪಡಿಸುವ ಮೌಲ್ಯಗಳಲ್ಲಿ ಓದುಗರಿಗೆ ಎಷ್ಟು ನಂಬಿಕೆ ಹುಟ್ಟಿಸಿದ… ಮೊದಲಾದವುಗಳನ್ನು.
ಸಂಸ್ಥೆಗಳನ್ನು ಕಟ್ಟುವುದು, ಬೆಳೆಸುವುದು, ಸಮಾನ ಮನಸ್ಕರೊಡನೆ ಗೌರವವನ್ನು ಸಂಪಾದಿಸಿ ಬೆರೆತು ಕೆಲಸ ಮಾಡುವುದು ಎಲ್‌ಎಸ್‌ಎಸ್ ಅವರ ಸ್ವಭಾವವೇ ಆಗಿತ್ತು. ಭಾರತ-ಭಾರತಿ ಪುಸ್ತಕ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ- ಈ ಸಂಸ್ಥೆಗಳಲ್ಲಿ ಅವರು ಕೆಲಸ ಮಾಡಿದ ರೀತಿ ಅನನ್ಯ. ಆದರೆ, ಅವರು ಬೆಂಗಳೂರಿನ ಉದಯಭಾನು ಕಲಾ ಸಂಘದ ಸಲಹೆಗಾರರಾಗಿದ್ದರು. ಕನ್ನಡ ಚಳುವಳಿಯ ಸಮಿತಿಗಳಲ್ಲಿ ಕ್ರಿಯಾಶೀಲರಾಗಿದ್ದರು. ಅಕಾಡೆಮಿ ಪರಿಷತ್‌ಗಾಗಿ ನಾನಾ ರೀತಿಯ ಸಂಪುಟಗಳನ್ನು ಸಂಪಾದಿಸಿಕೊಟ್ಟರು. ವರ್ಗವಾಗಿ ಹೋದ ಕಡೆಯಲ್ಲಿ ಸಾಹಿತ್ಯ ಸಂಘ ಪ್ರಚಾರೋಪನ್ಯಾಸಗಳನ್ನು ಸಂಘಟಿಸುತ್ತಿದ್ದರು. ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿದ್ದರು. ಇಂತಹ ಹಲವು ಜವಾಬ್ದಾರಿಯನ್ನು ಅವರು ನಿರ್ವಹಿಸಿದ ಬಗೆ ತುಂಬಾ ಜನರಿಗೆ ಗೊತ್ತಿಲ್ಲ. ಈ ಯಾವ ಸಾಂಸ್ಥಿಕ ಜವಾಬ್ದಾರಿಗಳೂ ಅವರ ಬರಣಿಗೆಯ ವ್ಯಾಪಕತೆಯನ್ನು ಕಡಿಮೆ ಮಾಡಲಿಲ್ಲ. ಸಾರ್ವಜನಿಕ ಬದುಕಿನ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಅರಿಯಲು ಅವರ ಅಂಕಣ ಬರಹಗಳ ಸಂಪುಟವನ್ನು ಗಮನಿಸಬಹುದು. ಎಲ್‌ಎಸ್‌ಎಸ್ ಅಂಕಣ ಬರೆಯದ, ಪುಸ್ತಕ ಸಮೀಕ್ಷೆ ಮಾಡದ ಒಂದೇ ಒಂದು ಪತ್ರಿಕೆ ಕೂಡ ಕರ್ನಾಟಕದಲ್ಲಿ ಇರಲಾರದು.
Related Articles
Advertisement
ಪ್ರಾಧಿಕಾರದ ಅಧ್ಯಕ್ಷ , ಪರಿಷತ್ತಿನ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಮಾಹಿತಿ ಕಾರ್ಯದರ್ಶಿ ಹೀಗೆ ಹತ್ತುಹಲವು ಜವಾಬ್ದಾರಿಗಳನ್ನು ನಿರ್ವಹಿಸಿದರೂ, ಯಾವೊಂದು ಸಂಸ್ಥೆಯ ಸಂಪರ್ಕವನ್ನು ತನ್ನ ಅಥವಾ ಕುಟುಂಬದ ಉಪಯೋಗಕ್ಕಾಗಿ ಬಳಸಿಕೊಳ್ಳಲಿಲ್ಲ. ಎಚ್. ವೈ. ಶಾರದಾಪ್ರಸಾದರಿಗೆ ಶಾಲಾ ದಿನಗಳಿಂದಲೂ ಆಪ್ತರಾಗಿದ್ದ ಎಲ್. ಎಸ್. ಶೇಷಗಿರಿ ರಾವ್ ಅಂಥವರ ಪ್ರಭಾವವನ್ನು ಕೂಡ ಎಲ್ಲೂ ಉಪಯೋಗಿಸಿಕೊಳ್ಳಲಿಲ್ಲ. “ಶಾರದಾ ಪ್ರಸಾದರಂತಹ ಕನ್ನಡಿಗರ ಬಗ್ಗೆ ಕೂಡ ಒಂದು ಜೀವನಚರಿತ್ರೆ ಕನ್ನಡದಲ್ಲಿಲ್ಲ, ಅದನ್ನು ಬರೆಯುವಷ್ಟು ಆರೋಗ್ಯ ಈಗ ನನಗಿಲ್ಲ ‘ ಎಂದು ಪರಿತಪಿಸುತ್ತಿದ್ದ ಎಲ್‌ಎಸ್‌ಎಸ್ ಉದಯಭಾನು ಕಲಾಸಂಘಕ್ಕೆ ಶಾರದಾ ಪ್ರಸಾದರ ಜೀವನ ಚರಿತ್ರೆಯನ್ನೂ ಬರೆಯಲು ನನ್ನನ್ನು ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಿದರು.
ಯಾವುದೂ ಅಮುಖ್ಯವಲ್ಲಆಕಾಶವಾಣಿಯವರು ಒಮ್ಮೆ ಅವರ ಉಪನ್ಯಾಸವನ್ನು ಧ್ವನಿಮುದ್ರಣ ಮಾಡಿಕೊಳ್ಳಲು ಆಹ್ವಾನಿಸಿದ್ದರಂತೆ. ಇವರು ಸಮಯಕ್ಕೆ ಸರಿಯಾಗಿ ಹೋದಾಗ, “ನೀವು ಸ್ವಲ್ಪ ಕಾಯಬೇಕು. ಈಗ ಸಚಿವರೊಬ್ಬರು ಬರುತ್ತಿದ್ದಾರೆ. ಅವರ ಸಂದರ್ಶನದ ಧ್ವನಿಮುದ್ರಣವಾದ ಮೇಲೆ ನಿಮ್ಮ ಸರದಿ’ ಎಂದರಂತೆ. ಇವರು ಮರುಮಾತಾಡದೆ ಆಕಾಶವಾಣಿಯಿಂದ ಹೊರಗೆ ಬಂದು ಎದುರುಗಡೆಯಿದ್ದ ತೋಟದಲ್ಲಿ ಓಡಾಡುತ್ತಿದ್ದರಂತೆ. ಇವರ ಸಮೀಪವೇ ಹಿಂದುಗಡೆಯೇ ಒಂದು ಕಾರು ಬಂತು. ಇವರು ಪಕ್ಕಕ್ಕೆ ಹೋದರು. ಕಾರು ಹಿಂಬಾಲಿಸಿತು. ಮತ್ತೂ ಪಕ್ಕಕ್ಕೆ ಹೋದರು. ಕಾರು ಹಿಂಬಾಲಿಸುತ್ತಲೇ ಇತ್ತು. ಗಾಬರಿಯಾದ ಇವರು ಇನ್ನೂ ದೂರ ಸರಿಯಬೇಕೆಂದಿದ್ದಾಗ ಕಾರಿನಿಂದ ಇಳಿದವರು, “ಸಾರ್, ನಾನು ನಿಮ್ಮನ್ನ ಭೇಟಿ ಮಾಡಲೆಂದೇ ಕಾರನ್ನು ನಿಧಾನ ಮಾಡಿಸಿಕೊಂಡು ಬರುತ್ತಿದ್ದೇನೆ. ನೀವೇಕೆ ಹಾಗೆ ದೂರ ದೂರ ಹೋಗುತ್ತಿದ್ದೀರಿ’ ಎಂದು ಕೇಳಿದರಂತೆ. ನನ್ನ ನೆನಪು ಸರಿಯಾಗಿದ್ದರೆ ಹಾಗೆ ಕಾರಿನಿಂದ ಇಳಿದವರು ಸಚಿವ ಕೆ. ಎಲ್. ರಂಗನಾಥ್. ಕಾಲೇಜಿನಲ್ಲಿ ಇವರ ವಿದ್ಯಾರ್ಥಿಯಾಗಿದ್ದರಂತೆ. ಕುಶಲೋಪರಿ ನಡೆದ ಮೇಲೆ ಎಲ್‌ಎಸ್‌ಎಸ್, “ನನ್ನದೊಂದು ಉಪನ್ಯಾಸದ ಧ್ವನಿ ಮುದ್ರಣವಿತ್ತು. ಅದಕ್ಕಾಗಿ ಬಂದೆ. ಸಚಿವರು ಬರುತ್ತಾರೆ. ನಂತರ ನಿಮ್ಮ ಸರದಿ ಎಂದರು. ಅದಕ್ಕಾಗಿ ಕಾಯುತ್ತಿರುವೆ’ ಎಂದರಂತೆ. ರಂಗನಾಥ್ “ಸಾರ್, ಬನ್ನಿ ನಾನೇ ಆ ಸಚಿವ’ ಎಂದು ಒಳಗಡೆ ಕರೆದುಕೊಂಡು ಹೋಗಿ, ಅಧಿಕಾರಿಗಳಿಗೆ ಹೇಳಿ ಇವರ ಉಪನ್ಯಾಸವನ್ನು ಮೊದಲು ಧ್ವನಿಮುದ್ರಿಸಿಕೊಳ್ಳಲು ಸೂಚಿಸಿದರಂತೆ. ಆರ್. ಗುಂಡೂರಾವ್ ಅವರ ಪತ್ರಿಕಾ ಕಾರ್ಯದರ್ಶಿಯಾಗಿ, ಇಂದಿರಾಗಾಂಧಿಯವರಿಗಾಗಿ ಒಂದು ಭಾಷಣದ ಕರಡನ್ನು ತಯಾರಿಸುವಂತೆ ಸೂಚನೆ ಬಂದಿತ್ತು. “ಆಕೆಯ ಬಗ್ಗೆ ನನಗೆ ಗೌರವವಿಲ್ಲ. ನಾನು ಭಾಷಣವನ್ನು ಬರೆದು ಕೊಡುವುದಿಲ್ಲ’ ಎಂದು ವಾದಿಸಿದಾಗ, ಗುಂಡೂರಾವ್ ಸರಿಯಾದ ಬುದ್ಧಿಮಾತನ್ನು ಹೇಳಿದರು ಎಂದು ಒಮ್ಮೆ ಎಲ್‌ಎಸ್‌ಎಸ್ ನೆನೆಸಿಕೊಂಡಿದ್ದರು. ಕನ್ನಡದ ಯಾವುದೇ ಲೇಖಕನು ಎಲ್‌ಎಸ್‌ಎಸ್ ಬಗ್ಗೆ ಬರೆಯುವಾಗ, ತಾನು ಅವರಿಂದ ಪಡೆದ ಪ್ರೋತ್ಸಾಹದ ಬಗ್ಗೆ ಪ್ರಸ್ತಾಪಿಸಲೇಬೇಕಾಗುತ್ತದೆ. 1988ರಲ್ಲಿ ನನ್ನ ಮೊದಲ ಪ್ರಬಂಧ ಸಂಕಲನ ನಮ್ಮ ಪ್ರೀತಿಯ ಕ್ರಿಕೆಟ್‌ಗೆ ಮುನ್ನುಡಿ ಬರೆದುಕೊಡಲು ಕೋರಿಕೊಂಡಾಗ, ಅವರ ವೈಯಕ್ತಿಕ ಪರಿಚಯವಿಲ್ಲದಿದ್ದರೂ ಕೇಳಿದ ಸಮಯಕ್ಕೆ ಸರಿಯಾಗಿ ಬರೆದುಕೊಟ್ಟು ಶುಭ ಕೋರಿದರು. 1995ರಲ್ಲಿ ಅಭಿನವ ಪ್ರಕಾಶನದಿಂದ ಹೊರಬಂದ ನನ್ನ ಎರಡನೆಯ ಪ್ರಬಂಧ ಸಂಕಲನ ದಾಂಪತ್ಯಕ್ಕೊಂದು ಶೀಲ ಪ್ರಕಟವಾದಾಗ, ಬಿಡುಗಡೆ ಮಾಡಿದರು. ಆವಾಗ ಅವರು ಪ್ರೀತಿಯಿಂದ ಗದರಿಸಿ ಹೇಳಿದ ಒಂದು ಮಾತು ನೆನಪಿದೆ. ನನ್ನ ಬರಹದಲ್ಲೊಂದು ಕಡೆ “ಕೆಲವು ಸಾವಿರ ರೂಪಾಯಿಗಳ ಜುಜುಬಿ ಮಾತ್ರವನ್ನು ಒಬ್ಬ ಪುಢಾರಿ ವಕೀಲ ಸಂಪಾದಿಸುತ್ತಿದ್ದ’ ಎಂಬ ಉಡಾಫೆಯ ಮಾತನ್ನು ನಾನು ಬರೆದಿದ್ದೆ. “ಹಣ ಎಷ್ಟೇ ಸಣ್ಣ ಮೊತ್ತವಾಗಿರಲಿ, ಹೇಗೆ ಅದು ಜುಜುಬಿಯಾಗುತ್ತದೆ. ಏಕೆ ಹೀಗೆ ಬೇಜವಾಬ್ದಾರಿಯಾಗಿ ಬರೆಯುತ್ತೀರಿ?’ ಎಂದು ಗದರಿದರು. ಈಚಿನ ವರ್ಷಗಳಲ್ಲಿ ಇವರ ಹುಟ್ಟುಹಬ್ಬವನ್ನು ಮನೆಯಲ್ಲೇ ಭಾರತಿಯವರು ಆಚರಿಸುತ್ತಿದ್ದರು. ಸಮಾಜದ ನಾನಾ ವೃತ್ತಿಗಳಿಂದ, ಹಿನ್ನಲೆಯಿಂದ, ಬೇರೆ ಬೇರೆ ತಲೆಮಾರುಗಳಿಂದ ಎಷ್ಟೊಂದು ಜನ ಸೇರುತ್ತಿದ್ದರು. ಸಭಿಕರಿಗೆ ಕೂರಲು ಸ್ಥಳ ಕೂಡ ಇರುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡ ಸಂಘಟನೆಗಳಿಗೆ, ದತ್ತಿನಿಧಿಗಳಿಗೆ, ಪ್ರೋತ್ಸಾಹವನ್ನು ಹಿತೈಷಿಗಳ ಮೂಲಕ ಪ್ರಕಟಿಸಿ, ತಮಗೆ ಒಪ್ಪಿಸಿದ ಕಾಣಿಕೆಯನ್ನು ಸಮಾಜಕ್ಕೆ ಮರುಸಲ್ಲಿಸಿಬಿಡುತ್ತಿದ್ದರು. ಕೆ. ಸತ್ಯನಾರಾಯಣ