ಚಿಂತಾಮಣಿ: ತಾಲೂಕಿನಲ್ಲಿ ಇತ್ತೀಚಿಗೆ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ದಬ್ಟಾಳಿಕೆ ವಿರೋಧಿಸಿ, ದುರ್ಗೇಶ್ ಕೊಲೆ ಸಂಬಂಧ ಕುಮಾರರೆಡ್ಡಿ ಗಡಿಪಾರು ಮಾಡಿ, ಜಾತಿನಿಂಧನೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಒತ್ತಾಯಿಸಿ ತಾಲೂಕು ದಲಿತ ಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು.
ನಗರದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು, ತಾಲೂಕಿನಲ್ಲಿ ದಲಿತರ ಮೇಲಿನ ಕೊಲೆಗಡುಕ ಸಂಸ್ಕೃತಿ ಮರುಕಳಿಸದಂತೆ ಜಿಲ್ಲಾಡಳಿತ, ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು, ಇತ್ತೀಚಿಗೆ ದಲಿತ ಯುವಕ ದುರ್ಗೇಶ್ ಕೊಲೆ ಆರೋಪಿಗಳನ್ನು ಗಡಿ ಪಾರು ಮಾಡಬೇಕು, ಜಾತಿನಿಂದನೆ ಅಡಿ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ವಿಶೇಷ ತಂಡ ರಚಿಸಿ: ದುರ್ಗೇಶ್ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು, 25 ಲಕ್ಷ ರೂ. ಪರಿಹಾರ ಕೊಡಬೇಕು, ತನಿಖೆಗೆ ಕೂಡಲೇ ವಿಶೇಷ ತಂಡ ರಚಿಸಬೇಕು, ತಾಲೂಕಿನ ಕೆಂಪದೇನಹಳ್ಳಿಯಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕನ ಮೇಲೆ ಕಳ್ಳತನ ಆರೋಪಿಸಿ, ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವವರನ್ನು ಶಿಕ್ಷಿಸಬೇಕು, ಪಾಲೇಪಲ್ಲಿ ಗ್ರಾಮದಲ್ಲಿ ಜಾತ್ರೆ ಸಮಯದಲ್ಲಿ ಕ್ಷುಲ್ಲಕ ಕಾರಣಕ್ಕೆ ವಾಲ್ಮೀಕಿ ಯುವಕನ ಮೇಲೆ ಸವರ್ಣೀಯರು ಚಾಕುವಿನಿಂದ ಹಲ್ಲೆ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಡೀಸಿಗೆ ಮನವಿ ಸಲ್ಲಿಕೆ: ದಲಿತರ ಮೇಲೆ ನಡೆಯು ತ್ತಿರುವ ದೌರ್ಜನ್ಯ ಪ್ರಕರಣಗಳು ದಾಖಲಾದ ಕೂಡಲೇ ಆರೋಪಿಗಳನ್ನು ಬಂಧಿಸಿ, ನೊಂದವರಿಗೆ ರಕ್ಷಣೆ, ಪರಿಹಾರ ನೀಡಬೇಕು, ದೌರ್ಜನ್ಯ ಪ್ರಕರಣ ಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕೆಂದು ಒತ್ತಾಯಿಸಿ, ದಲಿತಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಜಾಥಾವೂ ನಗರದ ಎಪಿಎಂಸಿ ಟೊಮೆಟೋ ಮಾರುಕಟ್ಟೆ ಬಳಿಯಿಂದ ಆರಂಭವಾಗಿ, ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ, ಉಪತಹಶೀಲ್ದಾರ್ ಶೋಭಾ ಮೂಲಕ ಡೀಸಿಗೆ ಮನವಿ ಸಲ್ಲಿಸಿತು. ದಲಿತ ಹಿರಿಯ ಮುಖಂಡ ಗಡ್ಡಂ ವೆಂಕಟೇಶ್, ಕವಾಲಿ ವೆಂಕಟರವಣಪ್ಪ ಮಾತನಾಡಿ, ಇತ್ತೀಚಿಗೆ ಚಿಂತಾಮಣಿ ತಾಲೂಕಿನಲ್ಲಿ ದಲಿತರ ಮೇಲಿನ ದೌರ್ಜನ್ಯ, ದಬ್ಟಾಳಿಕೆ, ಕೊಲೆ ಪ್ರಕರಣಗಳು ಹೆಚ್ಚಾಗು ತ್ತಿದ್ದು, ಇಂತಹ ಸಂಸ್ಕೃತಿಯು ಮರುಕಳಿಸದಂತೆ ಜಿಲ್ಲಾಡಳಿತ, ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಇನ್ನೂ ಪ್ರತಿಭಟನಾ ವೇಳೆ ಅಹಿತಕರ ಘಟನೆ ನಡೆಯದಂತೆ ಚಿಂತಾಮಣಿ ನಗರ ಸಿಐ ರಂಗಸ್ವಾಮಯ್ಯ ಬಿಗಿ ಬಂದೋಬಸ್ತ್ ಮಾಡಿದ್ದರು. ದಲಿತ ಮುಖಂಡರಾದ ಜನನಾಗಪ್ಪ, ಟಾಟಾಸುಮೋ ನರಸಿಂಹಪ್ಪ, ದೇವಮ್ಮ, ಜನಾರ್ದನ್, ಊಲವಾಡಿ ರಾಮಪ್ಪ, ವಿನೋಭಾ ಕಾಲೋನಿ ಸುಬ್ರಮಣಿಯಪ್ಪ, ಶ್ರೀರಾಮಪ್ಪ, ರಾಮಾಂಜಿ, ಶಂಕರ, ಪಿ.ವಿ.ಮಂಜುನಾಥ್, ಆಶೋಕ್, ವಿಜಿ ನಾಗಾ, ಆನಂದ್, ರಾಮಕೃಷ್ಣ, ವೆಂಕಟಗಿರಿಕೋಟೆ ರವಿ, ಲೋಹಿತ್ ತೇಜ್, ಬದ್ರಿ, ಆಕುಲಸುಧಾಕರ್, ಫಯಾಜ್ ಪಾಲ್ಗೊಂಡಿದ್ದರು.