ಬೆಂಗಳೂರು: ಆರ್‌ಟಿಒ ಕಚೇರಿಗೆ ಅಲೆದಾಟ ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಜೂನ್ 1ರಿಂದ ಖಾಸಗಿ ಡ್ರೈವಿಂಗ್ ಸ್ಕೂಲ್‌ಗಳಲ್ಲೇ ಪರೀಕ್ಷೆ ನಡೆಸಿ ಚಾಲನ ಅನುಜ್ಞಾ ಪತ್ರಕ್ಕೆ (ಡ್ರೈವಿಂಗ್ ಲೈಸನ್ಸ್) ಅಗತ್ಯ ಅರ್ಹತಾ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆ ಜಾರಿಗೊಳಿಸಿದ್ದು, ಯಲಹಂಕದ ವ್ಯಕ್ತಿಯೊಬ್ಬರು ತಮಗೆ ಅನುಮತಿ ಕೊಡುವಂತೆ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.
ಅವರು ತಮ್ಮ 2 ಎಕರೆ ಜಾಗದಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಿಸಿ, ಅಗತ್ಯ ಮಾನದಂಡ
ಗಳೊಂದಿಗೆ ಡ್ರೈವಿಂಗ್ ಲೈಸನ್ಸ್‌ಗೆ ಅರ್ಹತಾ ಪ್ರಮಾಣಪತ್ರ ವಿತರಿಸಲು ಮುಂದಾಗಿದ್ದಾರೆ.
ಅವರಿಗೆ ಅನುಮತಿ ಸಿಕ್ಕಿದರೆ ಖಾಸಗಿ ಸಂಸ್ಥೆಯಿಂದ ಪ್ರಮಾಣ ಪತ್ರ ವಿತರಿಸುವ ರಾಜ್ಯದ ಮೊದಲ ಎಡಿಟಿಸಿ (Automated Driving Test Centre) ಇದಾಗಲಿದೆ.
ಅರ್ಜಿಯನ್ನು ಆ ಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಪರಿಶೀಲನೆಗಾಗಿ ಕಳುಹಿಸಿಕೊಡಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನೀಡಿದ ಮಾರ್ಗಸೂಚಿ ಹಾಗೂ ಸಾರಿಗೆ ಇಲಾಖೆ ನಿಯಮಗಳನ್ನು ಅನುಸರಿಸಿದ್ದರೆ ಅನುಮತಿ ನೀಡಲಾಗುತ್ತದೆ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ (ಆಡಳಿತ) ಬಿ.ಪಿ. ಉಮಾಶಂಕರ್ ತಿಳಿಸಿದ್ದಾರೆ.
ಮಾನದಂಡಗಳು ಏನು?
2 ಎಕರೆ ಜಾಗ ಇರಬೇಕು. 8 ಸಂಖ್ಯೆ ಆಕೃತಿಯ ಡ್ರೈವಿಂಗ್ ಟ್ರ್ಯಾಕ್ ಜತೆಗೆ ನಿರ್ದಿಷ್ಟ ಜಾಗಗಳಲ್ಲಿ ಸಿಸಿಟಿವಿ ಅಳವಡಿಸಿರಬೇಕು. ಅಭ್ಯರ್ಥಿಗಳಿಗೆ 1 ತಿಂಗಳು ತರಗತಿಗಳನ್ನು ತೆಗೆದುಕೊಂಡು, ಸಾರಿಗೆ ನಿಯಮಗಳ ಬಗ್ಗೆ ಮಾಹಿತಿ ನೀಡಿರಬೇಕು ಎನ್ನುವುದು ಸೇರಿದಂತೆ ಹಲವು ನಿಯಮಾ ವಳಿಗಳನ್ನು ರೂಪಿಸಲಾಗಿದೆ. ಅಂತಹವರು ಮಾತ್ರ ಈ ಅರ್ಹತಾ ಪ್ರಮಾಣಪತ್ರ ವಿತರಿಸಬಹುದು. ಅದರ ಆಧಾರದಲ್ಲಿ ಪರವಾನಿಗೆ ನೀಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
– ವಿಜಯಕುಮಾರ ಚಂದರಗಿ