Advertisement

ಖಾಸಗಿ ಆಸ್ಪತ್ರೆ ಎಂದರೆ ಜನ ಸ್ವರ್ಗದಂತೆ ಆಡ್ತಾರೆ

11:08 AM Jun 10, 2017 | Team Udayavani |

ವಿಧಾನಸಭೆ: ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತರೆ ನರಕಕ್ಕೆ ಹೋಗ್ತಾರೆ… ಖಾಸಗಿ ಆಸ್ಪತ್ರೆಯಲ್ಲಿ ಸತ್ತರೆ ಮಾತ್ರ ನೇರವಾಗಿ ಸ್ವರ್ಗಕ್ಕೆ ಹೋಗ್ತಾರೆ… ಸರ್ಕಾರಿ ಶಾಲೇಲಿ ಓದಿದ್ರೆ ಜಾಣರಾಗಲ್ಲ… ಖಾಸಗಿ ಶಾಲೇಲಿ ಇಂಗ್ಲಿಷ್‌ ಕಲಿಸ್ತಾರೆ… ಹೀಗೆ ಆರೋಗ್ಯ ಸಚಿವ ರಮೇಶಕುಮಾರ್‌ ತಮ್ಮದೇ ಶೈಲಿಯಲ್ಲಿ ಖಾಸಗಿ ಆಸ್ಪತ್ರೆ ಹಾಗೂ ಶಾಲೆ ಮೇಲೆ ಜನರು ಹೊಂದಿರುವ ಒಲವಿನ ಕುರಿತು ವ್ಯಾಖ್ಯಾನ ಮಾಡಿದ್ದಾರೆ. ಶುಕ್ರವಾರ ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ
ಚರ್ಚೆ ವೇಳೆ, ಬಿಜೆಪಿ ಸದಸ್ಯ ನಾರಾಯಣಸ್ವಾಮಿ, ಬೆಂಗಳೂರು ನಗರದಲ್ಲಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಐಸಿಯು ಎಷ್ಟಿವೆ ಎಂದು ಪ್ರಶ್ನಿಸಿದರು. ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಶೇ.50ರಷ್ಟು ಮಾತ್ರ ಬೆಡ್‌ಗಳು ತುಂಬಿರುತ್ತವೆ ಎಂದು ಹೇಳಿದರು.

Advertisement

ಮಾ.ಹಿರಣ್ಣಯ್ಯ ಪರಿಣಾಮ: ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ರಮೇಶಕುಮಾರ್‌, ನಾಟಕಕಾರ ಮಾಸ್ಟರ್‌ ಹಿರಣ್ಣಯ್ಯ, ಸರ್ಕಾರಿ ಆಸ್ಪತ್ರೆಯಲ್ಲಿ ಒನ್‌ವೇ ಎಂದು ಫ‌ಲಕ ಇರುತ್ತೆ. ಹೀಗಾಗಿ ಅಲ್ಲಿಗೆ ಹೋಗಬೇಡಿ. ಒಳಗೆ ಹೋದರೆ ಹೊರಗೆ ಬರಲು ದಾರಿಯಿಲ್ಲ. ಅಲ್ಲಿಯೇ ಸತ್ತು ಬಿಡುತ್ತಾರೆ ಎಂದು ವ್ಯಂಗ್ಯವಾಡುತ್ತಿದ್ದರು. ಜನರಲ್ಲಿ ಕೂಡ ಸರ್ಕಾರಿ
ಆಸ್ಪತ್ರೆಗಳಿಗಿಂತಲೂ ಖಾಸಗಿ ಆಸ್ಪತ್ರೆಗಳೇ ಉತ್ತಮ ಎನ್ನುವ ಭಾವನೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸತ್ತರೆ ನರಕಕ್ಕೆ ಹೋಗುತ್ತೇವೆ ಎನ್ನುವ ಭಾವ ಬಂದಂತಿದೆ. ಅದೇ ವೇಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಸತ್ತರೆ ನೇರ ಯಾವುದೇ ವೀಸಾ ಇಲ್ಲದೇ ಸ್ವರ್ಗಕ್ಕೆ ಹೋಗುತ್ತೇವೆ ಎಂಬಂತೆ ಜನ ಆಡುತ್ತಿದ್ದಾರೆ. ಆರೋಗ್ಯ ಮಾತ್ರವಲ್ಲ, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಖಾಸಗಿ ಸಂಸ್ಥೆಗಳವರು ಬಲಾಡ್ಯರಾಗುತ್ತಿದ್ದಾರೆ. ವ್ಯಾಪಾರಿಗಳು ಜನಪ್ರತಿನಿಧಿಗಳಾಗುತ್ತಿದ್ದು, ಜನಪ್ರತಿನಿಧಿಗಳು ವ್ಯಾಪಾರಿಗಳಾಗುತ್ತಿದ್ದಾರೆಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next