Advertisement

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ರಾತ್ರಿ ಆಸ್ಪತ್ರೆಯಿಂದ ಪರಾರಿ

11:45 AM Aug 03, 2017 | Team Udayavani |

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೈದಿಯೊಬ್ಬ ಮಂಗಳವಾರ ರಾತ್ರಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಸ್ತಿಕುಮಾರ್‌ (35) ಪರಾರಿಯಾದವ. ಈ ಸಂಬಂಧ ವಿವಿ ಪುರಂ ಠಾಣೆಯಲ್ಲಿ ಜೈಲು ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

Advertisement

ಪತ್ನಿಯ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಾಸ್ತಿಕುಮಾರ್‌ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿದ್ದ. ಜು.29 ರಂದು ಜೈಲಿನಲ್ಲಿ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಆತನಿಗೆ, ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಜೈಲಿನ ಇಬ್ಬರು ಸಿಬ್ಬಂದಿಯನ್ನು ಈತನ ಕಾವಲಿಗೆ ಇರಿಸಲಾಗಿತ್ತು.

ಕಾವಲಿಗಿದ್ದ ಭದ್ರತಾ ಸಿಬ್ಬಂದಿ ಪಾಳಿ ಬದಲಾವಣೆ ಸಂದರ್ಭದಲ್ಲಿ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮಾಸ್ತಿ ಕೊಳ ಕಳಚಿಕೊಂಡು ಪರಾರಿಯಾಗಿದ್ದಾನೆ. ಕೂಡಲೇ ಭದ್ರತಾ ಸಿಬ್ಬಂದಿ ಆಸ್ಪತ್ರೆ ಸುತ್ತಮುತ್ತ ಎಲ್ಲೆಡೆ ಹುಡುಕಾಡಿದ್ದಾರೆ. ಸಿಗದಿದ್ದಾಗ ಬಳಿಕ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿ ವಿವಿ ಪುರಂ ಠಾಣೆಗೆ ದೂರು ನೀಡಿದ್ದಾರೆ ಎಂದು ಡಾ.ಎಸ್‌.ಡಿ.ಶರಣಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next