Advertisement

Jagadish Shettar ಸ್ಥಾನಕ್ಕೆ ಜು. 12ಕ್ಕೆ ಚುನಾವಣೆ

12:27 AM Jun 19, 2024 | Team Udayavani |

ಬೆಂಗಳೂರು: ಅತ್ಯಲ್ಪ ಕಾಲದವರೆಗೆ ಕಾಂಗ್ರೆಸ್‌ನಿಂದ ವಿಧಾನಪರಿಷತ್‌ ಸದಸ್ಯರಾಗಿದ್ದ ಜಗದೀಶ್‌ ಶೆಟ್ಟರ್‌ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಜು. 12ರಂದು ಮತದಾನ ನಡೆಸುವುದಾಗಿ ಚುನಾವಣ ಆಯೋಗ ಘೋಷಣೆ ಮಾಡಿದೆ.

Advertisement

2023ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯಿಂದ ಟಿಕೆಟ್‌ ಕೈತಪ್ಪಿದ ಕಾರಣಕ್ಕೆ ಕಾಂಗ್ರೆಸ್‌ ಸೇರಿದ್ದ ಶೆಟ್ಟರ್‌ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಲಾಗಿತ್ತು. ಶೆಟ್ಟರ್‌ ಅವರ ಸದಸ್ಯತ್ವದ ಅವಧಿಯು 2028ರ ಜೂ.14 ವರೆಗೆ ಇತ್ತು. ಆದರೆ, ಕಾಂಗ್ರೆಸ್‌ ಸೇರಿದ ಕೆಲವೇ ತಿಂಗಳಲ್ಲಿ ಅಂದರೆ 2024ರ ಜ. 25ರಂದು ಕಾಂಗ್ರೆಸ್‌ ಮತ್ತು ವಿಧಾನಪರಿಷತ್‌ ಸದಸ್ಯ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದರು.

ಪ್ರಸ್ತುತ ಬಿಜೆಪಿ ಸೇರಿರುವ ಶೆಟ್ಟರ್‌ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಂಸದರೂ ಆಗಿದ್ದಾರೆ. ಆದರೆ, ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆಯಬೇಕಿದ್ದು, ಜೂ. 25ರಂದು ಚುನಾವಣಾಧಿಕಾರಿಯಿಂದ ಅಧಿಕೃತ ಅಧಿಸೂಚನೆ ಹೊರಬೀಳಲಿದೆ. ಅಂದಿನಿಂದ ಜು. 2ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವನ್ನೂ ಕೊಡಲಾಗುತ್ತದೆ.

ಜು. 12ಕ್ಕೆ ಮತದಾನ, ಅಂದೇ ಫ‌ಲಿತಾಂಶ
ಜು. 3ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಹಿಂಪಡೆಯಲು ಜು. 5ರ ವರೆಗೆ ಕಾಲಾವಕಾಶ ಇರಲಿದೆ. ಜು. 12ರಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಅದೇ ಸಂಜೆ 5 ಗಂಟೆಯಿಂದ ಮತ ಎಣಿಕೆ ನಡೆದು ಫ‌ಲಿತಾಂಶ ಕೂಡ ಹೊರಬೀಳಲಿದೆ.

ಈಗಾಗಲೇ ಕಾಂಗ್ರೆಸ್‌ನಿಂದ ಬಸವನಗೌಡ ಬಾದರ್ಲಿ ಅವರನ್ನು ಈ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಿಸಿದ್ದು, ಅವರು ನಾಮಪತ್ರ ಸಲ್ಲಿಸುವುದೊಂದೇ ಬಾಕಿ ಉಳಿದಿದೆ. ವಿಧಾನಸಭೆಯಲ್ಲಿ 135 ಸ್ಥಾನ ಹೊಂದಿರುವ ಕಾಂಗ್ರೆಸ್‌ ಎದುರು ಬಿಜೆಪಿ ಅಥವಾ ಜೆಡಿಎಸ್‌ನಿಂದ ಯಾವುದೇ ಅಭ್ಯರ್ಥಿ ಕಣಕ್ಕಿಳಿಯುವುದು ಅನುಮಾನವಾಗಿದೆ. ಹೀಗಾಗಿ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಜು. 5ರಂದೇ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಿಸುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next