Advertisement

ಜನಮನ ರಂಜಿಸಿದ ಗಿರಿಜನ ಉತ್ಸವ; ಜೋಗುತಿ ನೃತ್ಯ ಪ್ರದರ್ಶನ

04:11 PM Sep 03, 2022 | Team Udayavani |

ಗದಗ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತಾಲೂಕಿನ ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಮುದಾಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ
ಇಲಾಖೆ ವತಿಯಿಂದ ಜರುಗಿದ ಗಿರಿಜನ ಉತ್ಸವ ಸ್ಥಳೀಯರನ್ನು ಮನರಂಜಿಸುವಲ್ಲಿ ಯಶಸ್ವಿಯಾಯಿತು.

Advertisement

ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡ ಜೋಗುತಿ ನೃತ್ಯ ಪ್ರದರ್ಶಿಸಿದ ಕೊತಬಾಳ ಗ್ರಾಮದ ಅರಣೋದಯ ಕಲಾ ತಂಡ ನೂರಾರು ಜನರನ್ನು ಮಂತ್ರ ಮುಗ್ಧರನ್ನಾಗಿಸಿತು. ಅಡವಿಸೋಮಾಪೂರದ ಸಿದ್ಧಲಿಂಗೇಶ್ವರ ಜಾನಪದ ಕಲಾ ತಂಡದ ಸುಗ್ಗಿ ಕುಣಿತ, ಹಿರೇಮಣ್ಣೂರಿನ ಹನುಮಂತ ತಳವಾರ ಕಲಾ ತಂಡದ ದೀಪ ನೃತ್ಯ, ಪಾಪನಾಶಿ ತಾಂಡಾದ ಸಾವಿತ್ರಿ ತಳವಾರ ತಂಡದ ಲಂಬಾಣಿ ನೃತ್ಯ ಜನಾಕರ್ಷಿಸಿತು.

ಇನ್ನು ಮುಂಡರಗಿಯ ಕರ್ನಾಟಕ ಜಾನಪದ ಕಲಾ ತಂಡದ ನಾಡಗೀತೆ ಹಾಗೂ ಜನಪದ ಸಂಗೀತ, ಲಕ್ಕುಂಡಿಯ ನೂಲಿ ಚಂದಯ್ಯ ಜಾನಪದ ಕಲಾ ತಂಡದ ಶರೀಫ್‌ ಸಾಹೇಬರ ತತ್ವ ಪದಗಳು, ಬಸವರಾಜ ಹಡಗಲಿಯವರ ಕಲಾ ತಂಡದ ಗೀಗೀ ಪದ, ಡೋಣಿಯ ಬೀರಲಿಂಗೇಶ್ವರ ಜಾನಪದ ಕಲಾ ತಂಡದ ಡೊಳ್ಳಿನ ಪದಗಳು, ಎಚ್‌. ಎಸ್‌. ವೆಂಕಟಾಪೂರ ಗ್ರಾಮದ ಗೌಡಪ್ಪ ಬೊಮ್ಮಪ್ಪನವರ ತಂಡದ ತತ್ವಪದಗಳು ಗಮನ ಸೆಳೆದವು. ಕೊತಬಾಳ ತಂಡದ ಕಲಾವಿದರ ಜಾನಪದ ಹಾಸ್ಯವುಳ್ಳ ಹಾಡು ಜನರನ್ನು ನಗೆಗಡಲಲ್ಲಿ ತೇಲಿಸಿತು.

ಇದಕ್ಕೂ ಮುನ್ನ ಗಿರಿಜನ ಉತ್ಸವ ಉದ್ಘಾಟಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಲಲಿತಾ ಗದಗಿನ, ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗುವ ನಾಡಿನ ಜಾನಪದ ಕಲೆಯ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಮುಂದಿನ ಪೀಳಿಗೆಗೆ ಈ ಕಲೆ ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ರೇವಣಸಿದ್ದಪ್ಪ
ಮುಳಗುಂದ, ಸದಸ್ಯರಾದ ವಿರೂಪಾಕ್ಷಪ್ಪ ಬೆಟಗೇರಿ, ಬಸವರಾಜ ಹಟ್ಟಿ, ಲಕ್ಷ್ಮವ್ವ ಭಜಂತ್ರಿ, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ, ಮುತ್ತಪ್ಪ ನೋಟಗಾರ
ಇದ್ದರು. ಅಂಬರೀಶ ಕರೆಕಲ್ಲ ನಿರೂಪಿಸಿ, ಕಲಾವಿದ ಶಿವು ಭಜಂತ್ರಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next