Advertisement

ಹಕ್ಕುಪತ್ರಕ್ಕಾಗಿ ಬಡಕುಟುಂಬದ ಅಲೆದಾಟ : ತಿಂಗಳ ಹಿಂದೆ ಆತ್ಮಹತ್ಯೆ ಯತ್ನ

09:50 PM Nov 11, 2022 | Team Udayavani |

ಕೊಟ್ಟಿಗೆಹಾರ:ಬಿ ಹೊಸಹಳ್ಳಿ ಗ್ರಾಮದ ಬಡಕುಟುಂಬವೊಂದು ಹಕ್ಕುಪತ್ರಕ್ಕಾಗಿ ಅಲೆದಾಡಿ ತಿಂಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ ಕತೆ ಇದು.

Advertisement

ಬಿ ಹೊಸಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಪ್ರಸನ್ನ ಎಂಬುವವರ ಕುಟುಂಬವು ಗುಡಿಸಿಲಿನಲ್ಲಿ ವಾಸ ಮಾಡಿಕೊಂಡಿದ್ದು ಬಿ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯ ಸರ್ವೆ ನಂ 38 ರಲ್ಲಿ ಆಶ್ರಯ ನಿವೇಶನಕ್ಕಾಗಿ ಮೀಸಲಿಟ್ಟ ಜಾಗದಲ್ಲಿರುವ ನಿವೇಶನದ ಹಕ್ಕುಪತ್ರ ಬಿ ಹೊಸಹಳ್ಳಿ ಗ್ರಾ.ಪಂಯಲ್ಲಿ 2019 ರಿಂದ ಇದ್ದರೂ ಕೂಡ ಹಕ್ಕುಪತ್ರ ನೀಡುತ್ತಿಲ್ಲ ಎಂಬುದು ಪ್ರಸನ್ನ ಅವರ ಆರೋಪ.

2022ರ ಸೆಪ್ಟೆಂಬರ್ 6 ರಂದು ಬಿ ಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಗಣೇಶ ವಿಸರ್ಜನೆಯ ಟ್ರ್ಯಾಕ್ಟರ್ ಗೆ ವಿದ್ಯುತ್ ತಂತಿ ತಗುಲಿ ಪ್ರಸನ್ನ ಅವರ ಪತ್ನಿ ಪಾರ್ವತಿ ಅವರು ಮೃತಪಟ್ಟಿದ್ದರು. ಪ್ರಸ್ತುತ ಪ್ರಸನ್ನ ಅವರು ತಮ್ಮ 10 ವರ್ಷದ ಮಗನೊಂದಿಗೆ ಗುಡಿಸಿಲಿನಲ್ಲಿ ವಾಸವಾಗಿದ್ದಾರೆ.

ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ಹಲವು ಬಾರಿ ಹಕ್ಕುಪತ್ರ ನೀಡುವಂತೆ ಮನವಿ ಮಾಡಿಕೊಂಡರೂ ಕೂಡ ಹಕ್ಕುಪತ್ರ ನೀಡದೇ ಇರುವುದರಿಂದ ಪ್ರಸನ್ನ ಅವರು ಅಕ್ಟೋಬರ್ 28 ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಸಂಬಂಧಿಕರಾದ ದೇವರಾಜ್ ಹಾಗೂ ಜ್ಯೋತಿ ಎಂಬುವವರು ಪ್ರಸನ್ನ ಅವರನ್ನು ಮೂಡಿಗೆರೆ ಹಾಗೂ ಹಾಸನದ ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸಿದ್ದರು. ಜಿಲ್ಲಾಧಿಕಾರಿಗಳು, ಶಾಸಕರ ಬಳಿ ಹೋಗಿ ಹಕ್ಕು ಪತ್ರದ ಬಗ್ಗೆ ಮನವಿ ಮಾಡಿದೆ ಈ ಕುಟುಂಬ. ಆದರೂ ಕೂಡ ಹಕ್ಕುಪತ್ರ ನೀಡಲಾಗಿಲ್ಲ. ಪತ್ನಿಯನ್ನು ಕಳೆದುಕೊಂಡು ಮಗನೊಂದಿಗೆ ಗುಡಿಸಿಲಲ್ಲಿ ವಾಸಿಸುತ್ತಿರುವ ಪ್ರಸನ್ನ ಅವರ ಕುಟುಂಬ ಹಕ್ಕುಪತ್ರದ ನಿರೀಕ್ಷೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಕೆಲ ತಿಂಗಳ ಹಿಂದೆ ಹಕ್ಕುಪತ್ರ ವಿತರಣೆ ಸಂದರ್ಭದಲ್ಲಿ ಗಲಾಟೆಯಾಗಿದ್ದರಿಂದ ಹಕ್ಕುಪತ್ರ ವಿತರಣೆಯಾಗಲಿಲ್ಲ. ನಿವೇಶನಕ್ಕೆ ಗುರುತಿಸಿದ್ದ ಜಾಗದ ಸರ್ವೆ ಕಾರ್ಯ ನಡೆಯಬೇಕಿದ್ದು ಸರ್ವೆ ಕಾರ್ಯ ಆದೊಡನೇ ಹಕ್ಕುಪತ್ರ ವಿತರಿಸಲಾಗುವುದು ಎನ್ನುತ್ತಾರೆ ಬಿ ಹೊಸಹಳ್ಳಿ ಪಿಡಿಓ ಸಿಂಚನಾ.

Advertisement

‘ಸೋಮವಾರ ಸರ್ವೇ ಕಾರ್ಯ ನಡೆಯಲಿದ್ದು ಸರ್ವೇ ಕಾರ್ಯ ಪೂರ್ಣಗೊಂಡ ಮೇಲೆ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು’ನಾಗರಾಜು, ತಹಶೀಲ್ದಾರ್ ಮೂಡಿಗೆರೆ

‘ವಿದ್ಯುತ್ ಅವಘಡದಲ್ಲಿ ಹೆಂಡತಿಯನ್ನು ಕಳೆದುಕೊಂಡಿದ್ದೇನೆ. ಹಕ್ಕುಪತ್ರ ನೀಡದೇ ಇರುವುದರಿಂದ ಈ ಹಿಂದೆ ಆತ್ಮಹತ್ಯೆ ಯತ್ನ ಮಾಡಿದ್ದೆ. ಆದರೆ ಸಂಬಂಧಿಕರು ನನ್ನನ್ನು ಉಳಿಸಿದರು. ಮುಂದೆ ಇಂತಹ ಘಟನೆ ನಡೆದರೆ ಅದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳೆ ಹೊಣೆಯಾಗಿರುತ್ತಾರೆ.’-ಪ್ರಸನ್ನ, ಬಿ ಹೊಸಳ್ಳಿ ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next