Advertisement
ಹೌದು. ಕಳೆ ಕೀಳಲು ಆಳು ಸಿಕ್ಕುತ್ತಿಲ್ಲ ಎನ್ನುವ ಕೊರಗು ರೈತರನ್ನು ಕಾಡಿದ್ದು ಎಷ್ಟು ಸತ್ಯವೋ, ಕೃಷಿ ಜೀವಂತವಾಗಿಡಲು ರೈತರು ಹೆಣಗುತ್ತಿರುವುದು ಅಷ್ಟೇ ಸತ್ಯ. ಈವರೆಗೂ ಸೋಯಾ ಅವರೆ, ಹೆಸರು, ಉದ್ದು, ಶೇಂಗಾ, ಗೋವಿನ ಜೋಳಕ್ಕೆ ಮಾತ್ರ ಸೀಮಿತವಾಗಿದ್ದ ಕಳೆನಾಶಕಗಳು ಇದೀಗ ನೇರವಾಗಿ ಅನ್ನದ ಕಣ ಅಂದರೆ ಭತ್ತದ ಗದ್ದೆಗೆ ರೌಂಡಪ್ ಔಷಧಿ ಸಿಂಪರಿಸುವ ಮಟ್ಟಿಗೆ ಬೆಳೆದುನಿಂತಿದೆ.
Related Articles
Advertisement
ಮನ್ಸೂನ್ ಆಧಾರಿತ ಭತ್ತಕ್ಕೆ ಹೆಚ್ಚು:ಮನ್ಸೂನ್ ಮಳೆಯಾಧಾರಿತವಾಗಿ ಪಶ್ಚಿಮಘಟ್ಟದ ಮಲೆನಾಡು ಮತ್ತು ಅರೆಮಲೆನಾಡಿನ ಜಿಲ್ಲೆಗಳಲ್ಲಿ ಬಿತ್ತನೆ ಮೂಲಕ ಬೆಳೆಯುವ ದೇಶಿ ಭತ್ತಕ್ಕೆ ಈ ವರ್ಷ ಕಳೆನಾಶಕ ಬಳಕೆ ಆರಂಭವಾಗಿದೆ. ಈ ಮೊದಲು ಬರೀ ಗೊಬ್ಬರ ಮಾತ್ರ ಸಿಂಪರಣೆಯಾಗಿ, ಕಳೆಯನ್ನು ಹೆಚ್ಚು ರೈತರು ಕೂಲಿಯಾಳು ಆಧರಿಸಿ ಕಿತ್ತು ಹಾಕಿ ಭತ್ತ ಬೆಳೆಯುತ್ತಿದ್ದರು.
ಆದರೆ ಈ ವರ್ಷ ದೇಶಿ ಭತ್ತದ ಬುಡದಲ್ಲಿ ಹುಟ್ಟುವ ಪರಿಸರಕ್ಕೆ ಅನುಕೂಲವೇ ಆಗಿರುವ ಕರಿಹುಲ್ಲು, ಇಗಳಿ, ಕಣಮುಚಕ್, ಮಾಣಿ ಜಿಬ್ಬು, ಜೇಕು ಕಸದ ನಾಶಕ್ಕೆ ನೇರವಾಗಿ ಕಳೆನಾಶಕ ಬಳಕೆಯಾಗುತ್ತಿದೆ. ಈ ಎಲ್ಲ ಕಸಗಳು ಹುಟ್ಟಿದರೂ ಇವು ಪರಿಸರ ಮತ್ತು ಜೀವಿ ಸಂಕುಲಕ್ಕೆ ಯಾವುದೇ ಹಾನಿ ಮಾಡಿರಲಿಲ್ಲ. ಕಿತ್ತ ಕಸ ಗುಡ್ಡೆ ಹಾಕಿದಲ್ಲಿಯೇ ಕೊಳೆತು ಮತ್ತೆ ಗೊಬ್ಬರವಾಗಿ ರೂಪುಗೊಳ್ಳುತ್ತಿತ್ತು.
ತೆನೆಯಲ್ಲೆ ಕೆನೆಯಂತೆ: ಭತ್ತದ ಗದ್ದೆಗಳ ಸ್ಥಿತಿ ಒಂದೆಡೆಯಾದರೆ, ಈ ವರ್ಷ ಗೋವಿನ ಜೋಳದಲ್ಲಿನ ಕಳೆ ನಿರ್ವಹಣೆಗೆ ಸಿಂಪರಿಸಿದ ಕ್ರಿಮಿನಾಶಕಗಳು ಬುಡದಲ್ಲಿ ಒಂದೇ ಒಂದು ಕಡ್ಡಿ ಹುಲ್ಲು, ಒಂದೇ ಒಂದು ಜೀವಾಣುಗಳು ಬದುಕಿ ಉಳಿಯದಂತೆ ಮಾಡಿಟ್ಟಿವೆ. ಇದೇ ಅರೆಮಲೆನಾಡು ಪ್ರದೇಶದಲ್ಲಿ 7.8 ಲಕ್ಷ ಹೆಕ್ಟೆರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆಯುವ ಗೋವಿನಜೋಳದ ಹೊಲಗಳು ಈ ಬಾರಿ ಪೊಗರುದಸ್ತಾಗಿ ಬೆಳೆದು ನಿಂತಿವೆ. ಉತ್ತಮ ಫಸಲು ತೆನೆ ಕಟ್ಟಿದ್ದು, ಹೊಲದ ಬುಡ ಮಾತ್ರ ಮರಭೂಮಿಯಂತೆ ಗೋಚರವಾಗುತ್ತಿದೆ. ಈ ಬಾರಿ ಸಿಂಪಡಣೆ ಮಾಡಿದ ಎಲ್ಲಾ ಕೀಟ ಮತ್ತು ಕಳೆನಾಶಕಗಳ ವಿಷ ಗೋವಿನ ಜೋಳದ ತೆನೆಯಲ್ಲೆ ಕೆನೆಯಂತೆ ಕುಳಿತಿದೆ ಎನ್ನುತ್ತಿದ್ದಾರೆ ವೈದ್ಯರು.
ರೈತನ ಮಿತ್ರ ಜೀವಿಗಳಿಗೂ ಕಂಟಕ ಮಣ್ಣಿನಲ್ಲಿ ವಿಷ ಸೇರುವುದಕ್ಕೆ ಸಮಯ ಬೇಕಾಗಬಹುದು. ಆದರೆ ನೀರಿಗೆ ವಿಷ ಸೇರಿದರೆ ಇದರ ದುಷ್ಪರಿಣಾಮಗಳು ಬಹಳ ಬೇಗನೆ ಗೋಚರಿಸುತ್ತವೆ. ಸದ್ಯಕ್ಕೆ ಈ ವರ್ಷ ಭತ್ತದ ಬೆಳೆಗೆ ಸಿಂಪರಣೆಯಾದ ಕಳೆನಾಶಕ ಕಾರ್ಕೋಟಕ ವಿಷ ಈಗಾಗಲೇ ತನ್ನ ಪರಿಣಾಮ ಆರಂಭಿಸಿದೆ. ಅಧಿಕ ಮಳೆ ಸುರಿದು ಹೊಲದಿಂದ ಹೊರಬಂದ ನೀರು ಕಾವಲಿಗಳಲ್ಲಿ ಹರಿದು ಹೋದ ಜಾಗದಲ್ಲಿನ ಹುಲ್ಲು ಸುಟ್ಟು ಬಿದ್ದಿದೆ. ನಿಂತ ಕಡೆಯಲ್ಲಿ ಹರಿ ಬಣ್ಣಕ್ಕೆ ತಿರುಗಿದ್ದು, ಕೆಟ್ಟ ವಾಸನೆ ಹೊಡೆಯುತ್ತಿದೆ. ರೈತನ ಮಿತ್ರ ಸೂಕ್ಷ್ಮಾತೀಸೂಕ್ಷ್ಮ ಜೀವಿಗಳಿಗೂ ಕಂಟಕವಾಗಿ ಪರಿಣಮಿಸುತ್ತಿದೆ.
ಭತ್ತದ ಗದ್ದೆಗಳಿಗೆ ಕ್ರಿಮಿನಾಶಕ ಬಳಕೆ ಕೃಷಿಯ ಅಧಃಪತನದ ಸಂಕೇತ. ಅನ್ನದ ಬಟ್ಟಲೇ ವಿಷವಾಗಿದ್ದರಿಂದ ಭಯಂಕರ ರೋಗ ರುಜಿನಗಳು ಬರಲಿವೆ. ರೈತರು, ಅಕ್ಕಿ ಕೊಳ್ಳುವ ಗ್ರಾಹಕರು ಜಾಗೃತರಾಗಬೇಕು. ದೇಶಿ ಮಜಲುಗಳು ಮತ್ತೆ ಮರುಕಳಿಸಿ ಪರಿಸರ ಸ್ನೇಹಿ ಕೃಷಿ, ಸಾವಯವ ಕೃಷಿ ಮುನ್ನೆಲೆಗೆ ಬರುವಂತೆ ಸರ್ಕಾರ ಮಾಡಬೇಕು.-ಡಾ| ಸಂಜೀವ ಕುಲಕರ್ಣಿ, ಪ್ರಗತಿಪರ ಕೃಷಿಕರು ಮತ್ತು ವೈದ್ಯರು ಕಳೆ ತೆಗೆಸಲು ಆಳುಗಳ ಕೊರತೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಖರ್ಚು ನೀಗಿಸಿ ಕೃಷಿ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಕಳೆನಾಶಕ ಬಳಕೆ ಮಾಡುತ್ತಿದ್ದೇವೆ. ಸರ್ಕಾರ ಸಾವಯವ ಕೃಷಿಗೆ ಅನುಕೂಲ ಮಾಡಿಕೊಟ್ಟರೆ ಖಂಡಿತವಾಗಿಯೂ ರಾಸಾಯನಿಕ ಮುಕ್ತ ಕೃಷಿ ಸಾಧ್ಯ.
-ನಾಗಪ್ಪ ಉಂಡಿ, ರೈತ ಮುಖಂಡ -ಬಸವರಾಜ್ ಹೊಂಗಲ್