ಎಚ್.ಡಿ.ಕೋಟೆ: ಕಳೆದ ನಾಲ್ಕೈದು ದಿನಗಳ ಹಿಂದೆ ಕೊಂಚ ದೂರದಲ್ಲಿ ನಡೆಯುತ್ತಿದ್ದ ಬಾಂಬ್‌ದಾಳಿ ಹಾಗೂ ಫೈರಿಂಗ್ ಈಗ ಹತ್ತಿರ ಸಮೀಪಿಸಿದೆ. ಕುಡಿಯಲು ನೀರಿಲ್ಲ, ಸೇವಿಸಲು ಆಹಾರವಂತೂ ಇಲ್ಲವೇ ಇಲ್ಲ. ವಾಸ್ತವ್ಯದ ಜಾಗದಿಂದ ಹೊರಬಂದು ವಾರವೇ ಕಳೆಯುತ್ತಿದೆ. ಈಗಿನ ಸ್ಥಿತಿಯಲ್ಲಿ ನಾವು ಬದುಕಿ ಬರುವೇ ಕಷ್ಟಕರವಾಗಿದೆ ನಿಮ್ಮ ದಮ್ಮಯ್ಯ ದಯವಿಟ್ಟು ನಮ್ಮನ್ನು ತಾಯ್ನಾಡಿಗೆ ಕರೆಸಿಕೊಳ್ಳಿ.
ಇದು ಜೀವ ಉಳಿಸಿಕೊಳ್ಳಲು ಜೀವನೋಪಾಯಕ್ಕಾಗಿ ಸುಡಾನ್ ದೇಶದಲ್ಲಿ ಆರ್ಯವೇದಿಕ್ ಔಷಧ ಮಾರಾಟ ಮತ್ತು ಮಸಾಜ್ ಮಾಡುವ ಸಲುವಾಗಿ ತಾಲೂಕಿನ ಟೈಗರ್ ಬ್ಲಾಕ್‌ನಿಂದ ತೆರಳಿರುವ ನೂರಾರು ಮಂದಿ ಹಕ್ಕಿಪಿಕ್ಕಿ ಸಮುದಾಯದ ಮಹಿಳೆಯರು ಮನದಾಳದ ಮಾತುಗಳಿಂದ ಪರಿಪರಿಯಾಗಿ ಕೈಮುಗಿದು ಬೇಡಿಕೊಳ್ಳುತ್ತಾ ತಾಯ್ನಾಡು ಸೇರಿಸುವಂತೆ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಸಹಾಯಕ್ಕಾಗಿ ಸರ್ಕಾರದ ಮೊರೆ ಹೋಗಿರುವ ಮನಕಲಕುವ ಕಥೆ ಇದು.
ಯುದ್ಧ ಪೀಡಿತ ಸುಡಾನ್ ದೇಶದಲ್ಲಿ ಕನ್ನಡಿಗರ ಸ್ಥಿತಿ: ತಾಲೂಕಿನ ಟೈಗರ್ ಬ್ಲಾಕ್‌ನಲ್ಲಿ ವಾಸವಾಗಿರುವ ಹಕ್ಕಿಪಿಕ್ಕಿ ಸಮುದಾಯ ಪ್ರತಿವರ್ಷ ಜೀವನೋಪಾಯಕ್ಕಾಗಿ ನೆರೆಯ ರಾಷ್ಟ್ರಗಳಿಗೆ ಗುಳೆ ಹೋಗಿ ಅಲ್ಲಿ ಆರ್ಯುವೇದಿಕ ಔಷಧ ಮಾರಾಟ ಮತ್ತು ಮಸಾಜ್ ಮಾಡಿ 8-10 ತಿಂಗಳ ಬಳಿಕ ಮರಳಿ ತಾಯ್ನಾಡಿಗೆ ವಾಪಸ್ಸಾಗುವುದು ಪ್ರತಿವರ್ಷದ ವಾಡಿಕೆ. ಅದರಂತೆಯೇ ಈ ಬಾರಿಯೂ ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ಮತ್ತು ನೆರೆಯ ಹುಣಸೂರು ತಾಲೂಕಿನ ಪಕ್ಷಿರಾಜಪುರದ ಹಲವು ಮಂದಿ ಹಕ್ಕಿಪಿಕ್ಕಿ ಸಮುದಾಯದ ಮಂದಿ ಸುಡಾನ್‌ಗೆ ತೆರಳಿ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಕಳೆದ ವಾರ ಏಕಾಏಕಿ ಯುದ್ಧ ಪೀಡಿತ ದೇಶವಾಗುತ್ತಿದ್ದಂತೆಯೇ ಜೀವನೋಪಾಯಕ್ಕಾಗಿ ಗುಳೆ ಹೋಗಿದ್ದ ಕನ್ನಡಿಗರ ಸ್ಥಿತಿಗತಿ ಹೇಳ ತೀರದಾಗಿದೆ. ಮನೆಯಿಂದ ಹೊರಬಂದರೆ ಬಾಂಬ್ ಮತ್ತು ರೈಫಲ್ ನಿಂದ ಗುಂಡಿನ ದಾಳಿ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಭಯಭೀತರಾಗಿ ಖಾಸಗಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.
ಹೋಟೆಲ್ ಕೊಠಡಿಗಳಿಂದ ಹೊರಬರುವಂತಿಲ್ಲ: ಯುದ್ಧ ಪೀಡಿತ ಸುಡಾನ್‌ನಲ್ಲಿ ಕಳೆದ 1 ವಾರದ ಹಿಂದೆ ಭಾರತೀಯರು ವಾಸ್ತವ್ಯ ಹೂಡಿರುವ ಹೋಟೆಲ್ ನಿಂದ
ಬಹುದೂರದಲ್ಲಿ ಬಾಂಬ್ ದಾಳಿ ಮತ್ತು ರೈಫಲ್ ದಾಳಿ ನಿರಂತರವಾಗಿ ನಡೆಯುತ್ತಿತ್ತು. ಸದ್ಯ ಭಾರತೀಯರು ವಾಸ್ತವ್ಯ ಹೂಡಿರುವ ಸ್ಥಳದಲ್ಲಿ ಯಾವುದೇ ಅಚರಣೆ ಇಲ್ಲದೆ ಹಾರಾಗಿದ್ದರು. ಆದರೆ ಕಳೆದ 1 ವಾರದ ಹತ್ತಿರದಲ್ಲಿ ದಾಳಿ ಭಾರತೀಯರಿರುವ ಹೋಟೆಲ್ ಸಮೀಪಸುತ್ತಿದೆ. ಇದರಿಂದ ಭಾರತೀಯರು ಬದುಕು ಬರುತ್ತೇವೆ ಅನ್ನುವ ನಂಬಿಕೆ ಇಲ್ಲ. ವಾಸ್ತವ್ಯ ಹೂಡಿರುವ ಕೊಠಡಿ ಬಿಟ್ಟು ಹೊರಬಂದರೂ ಬಾಂಬ್ ದಾಳಿ ನಡೆದು ಜೀವ ಹಾನಿಯಾಗುವ ಭೀತಿ ಇದೆ.
ನೀರು, ಆಹಾರಕ್ಕೂ ಕೊರತೆ: ಕಳೆದ 1 ವಾರದ ಹಿಂದಿನಿಂದ ನಿರಂತರವಾಗಿ ದಾಳಿ ನಡೆಯುತ್ತಿರುವುದ ರಿಂದ ಅನ್ನ ಆಹಾರ ಅಷ್ಟೇ ಏಕೆ ಕುಡಿಯುವ ನೀರಿಗೂ ಹಾಹಾಕಾರ ಪಡುವಂತಾಗಿದೆ. ಸದ್ಯದ ಸ್ಥಿತಿಯಲ್ಲಿ ವಾಸ್ತವ್ಯಕ್ಕೆಂದು ಹೋಟೆಲ್ ಒಂದರ ರೂಂನಲ್ಲಿದ್ದೇವೆ. ಆದರೆ ಕೊಠಡಿಯಿಂದ ಹೊರಬರುವಂತಿಲ್ಲ, ಸೇವಿಸಲು ಆಹಾರ ಇಲ್ಲ, ಕುಡಿಯಲು ನೀರಿಲ್ಲ, ಶೌಚಾಲಯ, ಮಹಿಳೆಯರ ತಿಂಗಳ ಸ್ನಾನಕ್ಕಂತೂ ಪ್ರಯಾಸ ಪಡಬೇಕಿದೆ. ಕುಡಿಯುವ ನೀರಿಗಾಗಿ 1 ಕಿ.ಮೀ. ಹೋಗಿ ಬರಬೇಕು, ಬಂದರೆ ಗುಂಡು ಹಾರಿಸುವ ಭೀತಿ ಕಾಡುತ್ತಿದೆ. ಹೋಟೆಲ್ ಮಾಲೀಕರಲ್ಲಿ ಅನ್ನ ಆಹಾರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿಕೊಂಡಂತೆ ಈಗಿರುವ ನಿಮ್ಮ ಸ್ಥಿತಿಯೇ ನಮ್ಮನ್ನೂ ಕಾಡುತ್ತಿದೆ. ಸದ್ಯಕ್ಕೆ ಕೊಠಡಿಯಿಂದ ಹೊರಬಾರದೆ ಒಳಗೆ ಇರಿ ಅನ್ನುವ ಉತ್ತರ ಬಿಟ್ಟರೆ ಬೇರೇನೂ ಲಭ್ಯವಾಗುತ್ತಿಲ್ಲ.
ಪ್ರತಿ ಕ್ಷಣ ಜೀವ ಭಯ: ಪ್ರತಿದಿನ, ಪ್ರತಿ ಕ್ಷಣ ಗುಂಡಿನ ದಾಳಿ, ಗುಂಡುಗಳ ಸುರಿಮಳೆಯ ಸದ್ದು ಕೇಳಿ ಕೇಳಿ ನಾವು ಬದುಕುಳಿಯುತ್ತೇವೆ ಅನ್ನುವ ಭರವಸೆಯೇ ನಮ್ಮಿಂದ ದೂರವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ನಿಮ್ಮ ದಮ್ಮಯ್ಯ ಕೂಡಲೆ ಇತ್ತ ಗಮನ ಹರಿಸಿ ನಮ್ಮನ್ನು ರಕ್ಷಣೆ ಮಾಡಿ ನಮಗೆ ಜೀವ ದಾನ ನೀಡುವ ಮೂಲಕ ಜೀವ ಭಯದಿಂದ ಮುಕ್ತಿ ನೀಡಿ ಎಂದು ವಾಸ್ತವ್ಯ ಹೂಡಿರುವ ನೂರಾರು ಮಂದಿ ಮನವಿ ಮಾಡಿದ್ದಾರೆ.
ಟೈಗರ್‌ಬ್ಲಾಕ್‌ಗೆ ಜಿಲ್ಲಾಧಿಕಾರಿ ಭೇಟಿ: ಇತ್ತ ಟೈಗರ್ ಬ್ಲಾಕ್ ಮತ್ತು ಹುಣಸೂರು ಪಕ್ಷಿರಾಜಪುರಕ್ಕೆ ಮೈಸೂರು ಜಿಲ್ಲಾಧಿಕಾರಿ ರಾಜೇಂದ್ರ ಮತ್ತು ಅಧಿಕಾರಿಗಳ ತಂಡ ಕಳೆದ 2 ದಿನಗಳ ಹಿಂದೆ ಭೇಟಿ ನೀಡಿ ಹೊರದೇಶದ ಭಾಷೆಯ ತೊಡಕ್ಕಿದ್ದರೂ ಜೀವನಕ್ಕಾಗಿ ಗುಳೆ ಹೋಗಿರುವ ಹಕ್ಕಿಪಿಕ್ಕಿ ಸಮುದಾಯದ ರಕ್ಷಣೆಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು ಸುಡಾನ್ ನಲ್ಲಿರುವ ಕನ್ನಡಿಗರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರುವ ಭರವಸೆ ನೀಡಿ, ಹಿಂದಿರುಗಿರುವುದು ಸ್ವಗ್ರಾಮದಲ್ಲಿರುವ ಸಂಬಂಧಿಕರಿಗೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
– ಎಚ್.ಬಿ.ಬಸವರಾಜು