ಅಹಮದಾಬಾದ್: ಆ ವಿಮಾನ ಇನ್ನೇನು ರನ್ ವೇನಲ್ಲಿ ವೇಗವಾಗಿ ಸಾಗಿ ಬಾನಿಗೆ ನೆಗೆಯಬೇಕಿತ್ತು ಆದರೆ ಇದ್ದಕ್ಕಿದ್ದಂತೆ ವಿಮಾನ ಹಾರಲೇ ಇಲ್ಲ. ವಿಮಾನದ ಒಳಗಿದ್ದವರೆಲ್ಲಾ ಏನಾಯಿತೆಂದು ನೋಡುವಷ್ಟರಲ್ಲಿ ಪಾರಿವಾಳವೊಂದು ವಿಮಾನದ ಒಳಗೆ ಅತ್ತಿಂದಿತ್ತ ಹಾರಾಡುತ್ತಿರುವುದು ಕಾಣಿಸಿತು.
ಇದು ನಡೆದದ್ದು ಶನಿವಾರದಂದು ಅಹಮದಾಬಾದ್ ನಿಂದ ಜೈಪುರಕ್ಕೆ ಹೊರಟಿದ್ದ ಗೋ ಏರ್ ವಿಮಾನದಲ್ಲಿ. ವಿಮಾನ ಇನ್ನೇನು ಟೇಕಾಫ‍್ ಆಗಬೇಕೆನ್ನುವಷ್ಟರಲ್ಲಿ ವಿಮಾನದೊಳಗೆ ಪಾರಿವಾಳದ ಇರುವಿಕೆ ಪತ್ತೆಯಾಗುತ್ತದೆ. ತಕ್ಷಣವೇ ವಿಮಾನ ಟೇಕಾಫ್ ಆಗುವುದನ್ನು ತಡೆಹಿಡಿಯಲಾಗುತ್ತದೆ ಮತ್ತು ಪಾರಿವಾಳವನ್ನು ಹಿಡಿದು ಹೊರಹಾಕುವ ಪ್ರಯತ್ನ ಸಾಗುತ್ತದೆ.
ಇದನ್ನು ವಿಮಾನ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕೆಮರಾದಲ್ಲಿ ಸೆರೆ ಹಿಡಿದಿದ್ದು ವಿಮಾನದೊಳಗೆ ಪಾರಿವಾಳ ಹಾರಾಡುತ್ತಿರುವ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ರಾಕೇಶ್ ಭಗತ್ ಎಂಬುವವರು ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ‘ಇದು ದೊಡ್ಡ ಹಕ್ಕಿಯೊಳಗೆ ಹಕ್ಕಿಯೊಂದು ಹಾರುತ್ತಿರುವ ನೈಜ ಘಟನೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ.
30 ಸೆಕೆಂಡಿನ ಈ ವಿಡಿಯೋದಲ್ಲಿ ಪಾರಿವಾಳ ವಿಮಾನದೊಳಗೆ ಹಾರುತ್ತಿರುವ ದೃಶ್ಯವಿದೆ ಮತ್ತು ಕೆಲವು ಪ್ರಯಾಣಿಕರು ಅದನ್ನು ಹಿಡಿಯಲು ಪ್ರಯತ್ನಿಸುವುದೂ ಸಹ ಇದರಲ್ಲಿ ದಾಖಲಾಗಿದೆ. ಇನ್ನು ಕೆಲವು ಪ್ರಯಾಣಿಕರು ವಿಮಾನದ ಹಿಂಬದಿ ಬಾಗಿಲನ್ನು ತೆರೆದು ಪಾರಿವಾಳಕ್ಕೆ ಹೊರ ಹೋಗಲು ಅವಕಾಶ ಮಾಡಿಕೊಡುವಂತೆ ವಿಮಾನ ಸಿಬ್ಬಂದಿಗೆ ಸಲಹೆಯನ್ನೂ ಮಾಡುತ್ತಾರೆ.