Advertisement

ಕಟ್ಟೆ ಬಳಗದಿಂದೊಂದು ಚಿತ್ರ

11:21 AM Jan 26, 2018 | Team Udayavani |

ರಾಘು ಶಿವಮೊಗ್ಗ ಅವರನ್ನು ಶರತ್‌ ಲೋಹಿತಾಶ್ವ ಮೊದಲ ಬಾರಿಗೆ ನೋಡಿದಾಗ, ಆತ ಒಬ್ಬ ಒಳ್ಳೆಯ ನಟನಾಗುತ್ತಾನೆ ಅಂತಂದುಕೊಂಡಿದ್ದರಂತೆ. ಅದಾಗಿ ಕೆಲವು ವರ್ಷಗಳ ನಂತರ ಶರತ್‌ಗೆ ಅನಿಸಿರುವುದೇನೆಂದರೆ, ರಘು ಒಳ್ಳೆಯ ನಿರ್ದೇಶಕರಾಗುತ್ತಾರೆ ಎಂದು.

Advertisement

“ಬಹಳಷ್ಟು ಜನ ಯಾವುದೇ ತಯಾರಿ ಇಲ್ಲದೆ ಚಿತ್ರ ಮಾಡೋದಿದೆ. ತಾಲೀಮು ತಗೊಂಡು, ಅನುಭವ ಪಡೆದೇ ಸಿನಿಮಾ ಮಾಡೋಕೆ ಬಂದಿದ್ದಾರೆ ರಾಘು. ಆತನನ್ನ ಮೊದಲ ಬಾರಿಗೆ ಭೇಟಿ ಆದಾಗ, ಆತ ಒಳ್ಳೆಯ ನಟನಾಗುತ್ತಾನೆ ಎಂತಂದುಕೊಂಡೆ. ಕ್ರಮೇಣ ರಾಘು ರೂಟ್‌ ಬದಲಾಯಿಸಿ ನಿರ್ದೇಶಕರಾದರು. ಈಗ ಅವರ ಸಿನಿಮಾದಲ್ಲೇ ನಟಿಸುವಂತಾಯಿತು. ಚಿತ್ರ ಹಿಟ್‌ ಆಗುತ್ತೋ, ಇಲ್ಲವೋ ಎನ್ನುವುದು ಬೇರೆ ಮಾತು. ಒಂದೊಳ್ಳೆಯ ಚಿತ್ರವನ್ನಂತೂ ರಾಘು ಮಾಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಘು ಕನ್ನಡದ ಭರವಸೆಯ ನಿರ್ದೇಶಕರಾಗುತ್ತಾರೆ ಎಂಬ ವಿಷಯದಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಶರತ್‌ ಖುಷಿಯಾದರು.

ಶರತ್‌ ಲೋಹಿತಾಶ್ವ ಹಾಗೆ ಮಾತನಾಡಿದ್ದು, “ಚೂರಿಕಟ್ಟೆ’ ಚಿತ್ರದ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ. ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಮಾತನಾಡುವ, ಚಿತ್ರದ ಬಗ್ಗೆ ಪ್ರಚಾರ ಮಾಡುವ ಎಂದು ರಾಘು ತಮ್ಮ ತಂಡವನ್ನು ಕಟ್ಟಿಕೊಂಡು ಮಾಧ್ಯಮದವರೆದುರು ಬಂದಿದ್ದರು. ಆ ತಂಡದಲ್ಲಿ ನಾಯಕ ಪ್ರವೀಣ್‌, ನಾಯಕಿ ಪ್ರೇರಣ, ಸಂಗೀತ ನಿರ್ದೇಶಕ ವಾಸುಕಿ ವೈಭವ್‌, ಛಾಯಾಗ್ರಾಹಕ ಅದ್ವೆ„ತ ಗುರುಮೂರ್ತಿ, ಕಲಾವಿದರಾದ ಶರತ್‌ ಲೋಹಿತಾಶ್ವ, ಮಂಜುನಾಥ ಹೆಗಡೆ, ಬಾಲಾಜಿ ಮನೋಹರ್‌, ನಿರ್ಮಾಪಕ ನಯಾಜ್‌ ಮುಂತಾದವರು ಇದ್ದರು.

“ಚೂರಿಕಟ್ಟೆ’ ಬಗ್ಗೆ ವಿಶೇಷವಾಗಿ ಮಾತನಾಡುವಂತದ್ದೇನೂ ಅಂದು ಇರಲಿಲ್ಲ. ಈಗಾಗಲೇ ಚಿತ್ರತಂಡದವರು ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇದೊಂದು ಟಿಂಬರ್‌ ಮಾಫಿಯ ಕುರಿತಾದ ಚಿತ್ರ, ಮಲೆನಾಡಿನ ಕಾಡುಗಳಲ್ಲಿ ಚಿತ್ರೀಕರಣ ಮಾಡಿರುವ ಚಿತ್ರ, ಭ್ರಷ್ಟ ವ್ಯವಸ್ಥೆಯ ಕಥೆ ಹೇಳುವ ಚಿತ್ರ ಎಂದೆಲ್ಲಾ ಹೇಳಿದ್ದಾಗಿದೆ. ಹಾಗಾಗಿ ವೇದಿಕೆ ಮೇಲೆ ಕುಳಿತಿದ್ದವರೆಲ್ಲಾ ಭಯ, ಖುಷಿ, ತೃಪ್ತಿ ಸಹಕಾರ, ಪ್ರೋತ್ಸಾಹ, ಹಾರೈಕೆ, ಆಶೀರ್ವಾದಗಳ ಕುರಿತೇ ಹೆಚ್ಚು ಮಾತನಾಡಿದರೇ ಹೊರತು, ಚಿತ್ರದ ಬಗ್ಗೆ ವಿಶೇಷವಾಗೇನೂ ಮಾತನಾಡಲಿಲ್ಲ. ಒಂದಿಷ್ಟು ಬೇರೆ ಮಾತುಗಳನ್ನಾಡಿದ್ದು ಎಂದರೆ ಅದು ಶರತ್‌ ಲೋಹಿತಾಶ್ವ ಮತ್ತು ಮಂಜುನಾಥ ಹೆಗಡೆ ಮಾತ್ರ. ಈಗಾಗಲೇ ಶರತ್‌ ಅವರ ಮಾತುಗಳನ್ನು ಓದಿದ್ದೀರಿ. ಈಗ ಹೆಗಡೆಯವರ ಮಾತುಗಳನ್ನು ಕೇಳುವಂತವರಾಗಿ.

“ಸಾಮಾನ್ಯವಾಗಿ ಒಂದೊಂದು ಚಿತ್ರದಲ್ಲಿ ಅಭಿನಯ ಚೆನ್ನಾಗಿರುತ್ತದೆ, ನಿರೂಪಣೆ ಚೆನ್ನಾಗಿರುತ್ತದೆ, ಕಥೆ, ನಿರ್ದೇಶನ ಚೆನ್ನಾಗಿರುತ್ತದೆ. ಆದರೆ, ಇಲ್ಲಿ ಎಲ್ಲವೂ ಚೆನ್ನಾಗಿದೆ. ದುಡ್ಡು ಕೊಟ್ಟು ಬರುವ ಪ್ರೇಕ್ಷಕರಿಗೆ ಮೋಸ ಆಗುವುದಿಲ್ಲ. ಎಲ್ಲರಿಗೂ ರುಚಿಯಾದ ಔತಣ ಕೊಟ್ಟಿದ್ದಾರೆ ರಾಘು. ಜನ ಬಂದು ಸ್ವೀಕರಿಸಬೇಕು ಅಷ್ಟೇ. ಈ ಚಿತ್ರದಲ್ಲಿ ಭ್ರಷ್ಟ ಪೊಲೀಸ್‌ ಅಧಿಕಾರಿಯ ಪಾತ್ರ ಮಾಡಿದ್ದೇನೆ. ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ಸಾಧ್ಯವಾದಷ್ಟೂ ಚೆನ್ನಾಗಿ ಮಾಡಿದ್ದೀನಿ’ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next