ಸಾಗರ: ನಾಗರಿಕ ಸಮಾಜ ಮತ್ತು ಅರಣ್ಯ ಇಲಾಖೆ ನಡುವೆ ಸಂಘರ್ಷಗಳು ದಿನೇ ದಿನೇ ಹೆಚ್ಚುತ್ತಿದ್ದು, ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಕಾರ್ಯದೊಂದಿಗೆ ಅರಣ್ಯ ವಾಸಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ತಿಳಿಸಿದರು.
ಕರೂರು ಭಾರಂಗಿ ಹೋಬಳಿಯ ರೈತರು ಮತ್ತು ಅರಣ್ಯವಾಸಿಗಳು ಅರಣ್ಯ ಇಲಾಖೆಯ ದೌರ್ಜನ್ಯ ಖಂಡಿಸಿ ಈಚೆಗೆ ಪ್ರತಿಭಟನೆ ನಡೆಸಿದ್ದರು. ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ಕುಗ್ರಾಮ ಉರುಳುಗಲ್ಲು ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು. ಕುಗ್ರಾಮಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ಇಲಾಖೆಗೆ ಕೂಡಲೇ ಆದೇಶಿಸಲಾಗುವುದು. ಅರಣ್ಯವಾಸಿಗಳು ಅನಗತ್ಯವಾಗಿ ಭಯ ಮತ್ತು ಆತಂಕ ಪಡಬೇಕಾಗಿಲ್ಲ ಎಂದರು.
ಅರಣ್ಯವಾಸಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಭೂಗತ ವಿದ್ಯುತ್ ಕೇಬಲ್ ಜಾಲಗಳ ಮೂಲಕ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿ, ಪಾರಂಪರಿಕ ಅರಣ್ಯವಾಸಿಗಳಿಗೆ ನೀಡಬೇಕಾದ ಭೂಮಿ ಹಕ್ಕಿನ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಲು ಉಪವಿಭಾಗಾಧಿಕಾರಿಗೆ ಸೂಚಿಸಲಾಗುವುದು. ರಸ್ತೆ ಮತ್ತು ಸಂಪರ್ಕಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಜಿಲ್ಲಾ ಕೇಂದ್ರದಲ್ಲಿ ಸಭೆ ನಡೆಲಾಗುವುದು. ಉರುಳುಗಲ್ಲು ಗ್ರಾಮದಲ್ಲಿ ಶರಾವತಿ ವನ್ಯಜೀವಿ ಅಭಯಾರಣ್ಯದ ಅಧಿಕಾರಿಗಳು ನಡೆಸಿದ ದೌರ್ಜನ್ಯ ಪ್ರಕರಣದ ಆರೋಪ ಸಂಬಂಧ ತನಿಖೆಗೆ ಆದೇಶಿಸಲಾಗುವುದು. ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ 20 ದಿನಗಳೊಳಗೆ ವರದಿ ಪಡೆಯಲಾಗುವುದು. ಉಪಅರಣ್ಯಾಧಿಕಾರಿ ಪ್ರಮೋದ್ ಕುಂಬಾರ್ ಅವರು ಕಾನೂರು ಅರಣ್ಯದೊಳಗೆ ಬೆಂಕಿ ಹಚ್ಚಿದ ಪ್ರಕರಣ ಮತ್ತು ಬಿಳಿಗಾರು ಗ್ರಾಮದಲ್ಲಿ 3 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಸಂಬಂಧ ತಹಶೀಲ್ದಾರ್ ಅವರಿಂದ ವರದಿ ಪಡೆಯಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಅರಣ್ಯವಾಸಿಗಳ ಬೇಡಿಕೆ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜನಪರ ಹೋರಾಟ ವೇದಿಕೆ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಕರೂರು, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಪ್ರಭಾವತಿ ಚಂದ್ರಕಾಂತ, ಅಶೋಕ ಬರದವಳ್ಳಿ, ತ್ಯಾಗಮೂರ್ತಿ ಬಿಲ್ಕಂದೂರು, ಆರೋಡಿ ಚಂದ್ರಕಾಂತ ಗಣೇಶ ಜಾಕಿ, ರೈತ ಸಂಘಟನೆಯ ಶಿವಾನಂದ ಕುಗ್ವೆ, ದಿನೇಶ ಶಿರವಾಳ, ದೇವರಾಜ್, ವಿಜಯಕುಮಾರ್, ಗಣೇಶ ಹಾರಿಗೆ, ನಾಗರಾಜ ಸಾಲ್ಕೋಡು ಮಾತನಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಸಿಪಿಐ ಕೃಷ್ಣಪ್ಪ, ಸಬ್‌ಇನ್‌ಸ್ಪೆಕ್ಟರ್ ತಿರುಮಲೇಶ್, ಭಾನ್ಕುಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೋಮರಾಜ್ ಕೋಮಿನಕುರಿ, ಪಿಡಿಓ ಮುಕ್ತಾ ಇದ್ದರು.