Advertisement
ಹೌದು ಉಡುಪಿಯ ಕೊಡುಗೈ ದಾನಿ ಹಾಜಿ ಅಬ್ದುಲ್ಲಾ ಅವರು 1885ರಲ್ಲಿ ತನ್ನದೇ ಜಾಗದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿಕೊಟ್ಟಿದ್ದ ಈ ಶಾಲೆಯನ್ನು ಮುಚ್ಚಿ ಮಕ್ಕಳನ್ನು ಪಕ್ಕದ ನಾರ್ತ್ ಶಾಲೆಗೆ (ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ) ವರ್ಗಾಯಿಸಲಾಗಿದೆ. ಶಾಲಾ ಕಟ್ಟಡ ದುರ್ಬಲಗೊಂಡಿರುವ ಹಿನ್ನೆಲೆ ಹಾಗೂ ಹಳೆ ಕಾಲದ ಮಣ್ಣಿನ ಗೋಡೆಯಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿ ಕಲಿಯುತಿದ್ದ 50 ಮಕ್ಕಳು, ನಾಲ್ವರು ಶಿಕ್ಷಕರೊಂದಿಗೆ ಕಾರ್ಪೋರೇಷನ್ ಬ್ಯಾಂಕ್ ಬಳಿಯ ನಾರ್ತ್ ಶಾಲೆಗೆ ಶನಿವಾರ ವರ್ಗಾಯಿಸಲಾಗಿದೆ. ಸೋಮವಾರದಿಂದ ನಾರ್ತ್ ಶಾಲೆಯಲ್ಲಿ ಇವರೆಲ್ಲರಿಗೆ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ.
Related Articles
Advertisement
ಸುರಕ್ಷತೆ ದೃಷ್ಟಿಯಿಂದ ಸ್ಥಳಾಂತರಶಾಲೆಯ ಒಂದು ಬದಿಯ ಗೊಡೆ ಬೀಳುವ ಆತಂಕದಲ್ಲಿದ್ದುದರಿಂದ ಹಾಗೂ ಶಾಲೆಯ ಮೇಲ್ಛಾವಣಿ ಕೂಡ ಕುಸಿದು ಬೀಳುವ ಅಪಾಯವಿದ್ದುದರಿಂದ ಜಿಲ್ಲಾಧಿಕಾರಿಯ ಸೂಚನೆಯಂತೆ ಸುರಕ್ಷತೆ ದೃಷ್ಟಿಯಿಂದ ಸೋಮವಾರದಿಂದ ಶಾಲೆಯ ಎಲ್ಲ 50 ವಿದ್ಯಾರ್ಥಿಗಳನ್ನು ನಾರ್ತ್ ಶಾಲೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಅವರೆಲ್ಲರಿಗೂ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ ನಾಲ್ವರು ಶಿಕ್ಷಕಿಯರಿಗೂ ಇಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಪ್ರಭಾರ ಉಪ ನಿರ್ದೇಶಕ ಶೇಖರ್ ಕುಲಾಲ್ ಹೇಳಿದರು. ರಾಜ್ಯಾದ್ಯಂತ ಕನ್ನಡ ಶಾಲೆಗಳಿಗೆ ಕಂಡುಬಂದ ವಿದ್ಯಾರ್ಥಿಗಳ ಕೊರತೆ ಈ ಶಾಲೆಗೂ ಕಾಡಿತ್ತು. ಆದರೆ ಶಾಲೆಯ ಹಳೆ ವಿದ್ಯಾರ್ಥಿಗಳ ಹಾಗೂ ಸ್ಥಳೀಯರ ಸತತ ಪ್ರಯತ್ನದಿಂದ 1 ರಿಂದ 7ನೇ ತರಗತಿಯವರೆಗೆ 60 ರಿಂದ 70 ಮಕ್ಕಳು ಕಲಿಯುವಂತೆ ನೋಡಿಕೊಳ್ಳಲಾಗಿತ್ತು. ಇಲ್ಲಿ ಕಲಿಯುವವರು ಹೆಚ್ಚಿನವರು ವಲಸೆ ಕಾರ್ಮಿಕರ ಮಕ್ಕಳೆಂಬುದು ವಿಶೇಷ. ವಲಸೆ ಕಾರ್ಮಿಕರು ಉಡುಪಿಯಲ್ಲಿ ಇಲ್ಲದಿರುತ್ತಿದ್ದರೆ ಈ ಶಾಲೆ ಯಾವತ್ತೋ ಬಾಗಿಲು ಮುಚ್ಚಿರುತ್ತಿತ್ತು. ಈ ಶಾಲೆ ಶಾಶ್ವತವಾಗಿ ಮುಚ್ಚಿ ಹೋಗಲು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ. ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾದ ಇಲಾಖೆ ಎಲ್ಲ ಮೂಲಭೂತ ಸೌಕರ್ಯಗಳಿದ್ದರೂ, ಕೇವಲ ದುರಸ್ತಿ ಮಾಡುವ ನೆಪ ನೀಡಿ ಶಾಲೆಯನ್ನೇ ಮುಚ್ಚಲು ಹೊರಟಿರುವುದು ದುರಂತವೇ ಸರಿ. ಶಾಲೆಗೆ ಬಂದ ಹಣ ಬಿಇಒ ಕಚೇರಿಗೆ
ಕೆಲ ವರ್ಷಗಳ ಹಿಂದೆ ಈ ಶಾಲೆಯ ದುರಸ್ತಿಗೆಂದು ಸರ್ವ ಶಿಕ್ಷಣ ಅಭಿಯಾನದಡಿ ಹಣ ಬಿಡುಗಡೆಯಾಗಿತ್ತು. ಆದರೆ ಆಗ ಉಡುಪಿ ಬಿಇಒ ಆಗಿದ್ದವರೊಬ್ಬರು ಅದನ್ನು ಶಾಲೆಗೆ ನೀಡದೆ ಬಿಇಒ ಕಚೇರಿಗೆಯೇ ಆ ಹಣವನ್ನು ಬಳಕೆ ಮಾಡಿದ್ದರು. ಅದಲ್ಲದೆ ಅಲ್ಲಿನ ಶಿಕ್ಷಕರು ಹಲವು ಬಾರಿ ದುರಸ್ತಿಗೆ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದರೂ ಕೂಡ ಸಣ್ಣ – ಸಣ್ಣ ದುರಸ್ತಿ ಮಾತ್ರ ನಡೆದಿತ್ತು. ಕುಸಿದು ಬೀಳುವ ಅಪಾಯವಿದ್ದರೂ ದೊಡ್ಡ ಮಟ್ಟದ ದುರಸ್ತಿ ಈವರೆಗೆ ನಡೆದಿಲ್ಲ. ಶಾಲೆ ಶಾಶ್ವತವಾಗಿ ಮುಚ್ಚಲು ಶಿಕ್ಷಣ ಇಲಾಖೆಯ ನಿರ್ಲRಕ್ಷ್ಯವೇ ಕಾರಣ. ಮುಚ್ಚುವಷ್ಟೇನೂ ಶಾಲೆಯ ಪರಿಸ್ಥಿತಿ ಹದಗೆಟ್ಟಿರಲಿಲ್ಲ. ದುರಸ್ತಿಗೆ ಮನಸ್ಸು ಮಾಡಿದ್ದರೆ ಸಾಕಿತ್ತು ಎನ್ನುವುದು ನಿವೃತ್ತ ಶಿಕ್ಷಕರೋರ್ವರ ಅಭಿಪ್ರಾಯ. ಪೇಜಾವರ ಶ್ರೀಗಳು ಓದಿದ ಶಾಲೆ
ವಿಶೇಷವೆಂದರೆ ಪರ್ಯಾಯ ಶ್ರಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅವರ 6-7 ನೇ ವಯಸ್ಸಿನಲ್ಲಿ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. 8ನೇ ವರ್ಷಕ್ಕೆ ಆಶ್ರಮಕ್ಕೆ ಸೇರುವ ಮುನ್ನ ಕೇವಲ 2 ವರ್ಷದಲ್ಲಿ ರಾಮಕುಂಜದ ಸಂಸ್ಕೃತ ಹಿ. ಪ್ರಾ. ಶಾಲೆ, ಕಾಣಿಯೂರು ಶಾಲೆ, ರಾಮಕುಂಜದ ನೂರಂಕಿ ಶಾಲೆ ಹಾಗೂ ನಗರಸಭೆ ಎದುರಿರುವ ಈ ಗಾಂಧಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಶಿಕ್ಷಣ ಇಲಾಖೆಗೆ ಬಳಕೆ : ಡಿಸಿ
ಕುಸಿದು ಬೀಳುವ ಆತಂಕದಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಲ್ಲಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಬೇಕಾಯಿತು. ಅದರ ಜತೆಗೆ ಮಕ್ಕಳಿಗೆ ಮುಖ್ಯವಾಗಿ ಆಟವಾಡಲು ಬೇಕಾದ ಮೈದಾನವಿರಲಿಲ್ಲ. ನಾರ್ತ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕಟ್ಟಡವನ್ನು ದುರಸ್ತಿ ಮಾಡಿ ಶಾಲೆಯಾಗಿ ಬಳಕೆ ಮಾಡದಿದ್ದರೂ, ಶಿಕ್ಷಣ ಇಲಾಖೆಯ ಕಾರ್ಯಕ್ಕೆ ಬಳಸಲಾಗುವುದು.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ.