ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಕೇರಳ ಮೂಲದ ಶಿಹಾಬ್ ಮತ್ತು ಪಾಕಿಸ್ತಾನ ಪ್ರಜೆಗಳ ವಿಚಾರಣೆ ವೇಳೆ ಮತ್ತೂಂದು “ಮದುವೆ ಪ್ರಸಂಗ’ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಕೇರಳದ ಮೊಹಮದ್ ಶಿಹಾಬ್‌ಗ ಈ ಮೊದಲು ಕೇರಳದಲ್ಲಿ ಯುವತಿಯೊಬ್ಬಳನ್ನು ವಿವಾಹವಾಗಿದ್ದ ಎಂಬುದು ಗೊತ್ತಾಗಿದೆ.
ಕೇಂದ್ರ ತನಿಖಾ ಸಂಸ್ಥೆಗಳ ಜತೆಗೆ ಕೇರಳ ಪೊಲೀಸರು ಕೂಡ ಬೆಂಗಳೂರಿಗೆ ಧಾವಿಸಿ ವಿಚಾರಣೆ ನಡೆಸುತ್ತಿದ್ದು, ಇವರೊಂದಿಗೆ ಶಿಹಾಬ್ ಸಹೋದರ ಶಿಬ್ಲಿನ್ ಕೂಡ ಕೇರಳ ಪೊಲೀಸರ ಜತೆಗೆ ಬೆಂಗಳೂರಿಗೆ ಬಂದಿದ್ದಾನೆ. ಅಲ್ಲದೇ ಪೊಲೀಸರ ವಿಚಾರಣೆಗೆ ಸಹಕಾರ ನೀಡುತ್ತಿರುವ ಆತ, ಸಹೋದರನ ಮತ್ತೂಂದು ಮದುವೆ ಸುದ್ದಿಯನ್ನೂ ಹೊರಹಾಕಿದ್ದಾನೆ.
ಕೇರಳದಿಂದ ಖತಾರ್‌ಗೆ ತೆರಳಿದ್ದ ಮೊಹಮದ್ ಶಿಹಾಬ್ ಪಾಕಿಸ್ತಾನದ ನಜ್ಮಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದ. ಇದಕ್ಕೂ ಮೊದಲು ಶಿಹಾಬ್‌ಗ 2013ರಲ್ಲೇ ಕೇರಳ ಮೂಲದ ಯುವತಿಯ ಜತೆ ಮದುವೆ ಆಗಿತ್ತು. ಮೊದಲ ಪತ್ನಿಗೆ ಹೆಣ್ಣು ಮಗು ಕೂಡ ಇದೆ. ಆದರೆ, ಖತಾರ್‌ನಲ್ಲಿ ಕೆಲಸಕ್ಕೆಂದು ತಂದೆಯ ಜತೆ ಹೋಗಿದ್ದ ಶಿಹಾಬ್, ತಂದೆ ಭಾರತಕ್ಕೆ ವಾಪಾಸಾದರೂ ಆತ ಮಾತ್ರ ಹಿಂದಿರುಗಲಿಲ್ಲ.
ಆಗ ಶಿಹಾಬ್ ಹಾಗೂ ಪಾಕಿಸ್ತಾನದ ಯುವತಿ ನಡುವೆ ಪ್ರೇಮಾಂಕುರವಾಗಿದ್ದು. ಮದುವೆ ಕೂಡ ಆಗಿದ್ದ. ಈ ವಿಚಾರ ಮನೆಯವರಿಗೆ ತಿಳಿದಿತ್ತು. ಬಳಿಕ ಕೇರಳಕ್ಕೆ ಬಂದು ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದ. ಆದರೆ, ಖತಾರ್‌ನಿಂದ ಬೆಂಗಳೂರಿಗೆ ಬಂದು ನೆಲೆಸಿರುವುದು ತಿಳಿದಿರಲಿಲ್ಲ. ಮಾಧ್ಯಮಗಳ ಮೂಲಕ ತಿಳಿಯಿತು ಎಂದು ಸಹೋದರ ಶಿಬ್ಲಿನ್ ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿ ಇಲ್ಲಿನ ದಾಖಲೆಗಳನ್ನು ಸೃಷ್ಟಿಸಿಕೊಂಡು ಅಕ್ರಮವಾಗಿ ನೆಲೆಸಿದ್ದರು ಎನ್ನುವ ಆರೋಪದ ಮೇಲೆ ಸಿಸಿಬಿ ಪೊಲೀಸರು, ಕೇರಳದ ಮಹಮದ್ ಶಿಹಾಬ್ ಈತನ ಪತ್ನಿ ಪಾಕಿಸ್ತಾನದ ನಜ್ಮಾ, ಮಹಮದ್ ಖಾಸಿಫ್ ಮತ್ತು ಈತನ ಪತ್ನಿ ಝೈನಬ್ ಕಿರಣ್ ಅವರನ್ನು ಬಂಧಿಸಿದ್ದರು.
500 ರೂ.ಗೆ ಆಧಾರ್ ಕಾರ್ಡ್
ಆರೋಪಿಗಳು ನಕಲಿ ದಾಖಲೆಗಳನ್ನು ಕೊಟ್ಟು 500 ರೂಪಾಯಿಗೆ ಆಧಾರ ಕಾರ್ಡ್ ಪಡೆದುಕೊಂಡಿದ್ದಾರೆ. ಆಧಾರ್ ಪಡೆಯುವ ವೇಳೆ ಯಾವ ದಾಖಲೆಗಳನ್ನು ಕೊಟ್ಟಿದ್ದರು ಎಂಬ ಬಗ್ಗೆ ಆರೋಪಿಗಳು ಸರಿಯಾಗಿ ಉತ್ತರಿಸುತ್ತಿಲ್ಲ. ದಕ್ಷಿಣ ವಿಭಾಗದಲ್ಲೇ ಆಧಾರ್ ಮಾಡಿಸಿರುವುದು ಖಚಿತವಾಗಿದೆ. ಆದರೆ,ಯಾವ ಸೆಂಟರ್‌ನಲ್ಲಿ ಮಾಡಿಸಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.