ನಾವು ಕೋಪದ ಆವೇಶದಲ್ಲಿ ಉಂಟುಮಾಡುವ ಒಂದೊಂದು ಕಲೆಗಳೂ ಜೀವನದುದ್ದಕ್ಕೂ ನಮ್ಮನ್ನು ಕಾಡುತ್ತಿರುತ್ತವೆ. ಕೋಪದ ಭರದಲ್ಲಿ ನಾವಾಡುವ ಮಾತಿನ ಮೇಲೆ ನಮಗೆ ಹಿಡಿತವಿಲ್ಲದೆ ಬೇಕಾಬಿಟ್ಟಿ ಮಾತನಾಡುತ್ತೇವೆ. ಆದರೆ ಕೋಪ ಕಡಿಮೆಯಾದ ಮೇಲೆ ಎದುರಿಗಿದ್ದವರಲ್ಲಿ ಎಷ್ಟೇ ಆ ಬಗ್ಗೆ ಕ್ಷಮೆ ಕೇಳಿದರೂ ಆ ಗಾಯ ಮಾಗುವುದಿಲ್ಲ. ಕೋಪದಿಂದ ಕೊಯ್ದ ಮೂಗು ಮತ್ತೆ ಬರುವುದಿಲ್ಲ ಎನ್ನುವ ಗಾದೆ ಮಾತಿದೆ.
ಒಂದು ಊರಿನಲ್ಲಿ ಅತ್ಯಂತ ಚೂಟಿಯಾದ ಒಬ್ಬ ಹುಡುಗನಿದ್ದ. ಆತನಿಗೆ ಮೂಗಿನ ತುದಿಯಲ್ಲೇ ಕೋಪವಿತ್ತು. ಆತನಿಗೆ ಕೋಪ ನೆತ್ತಿಗೇರಿದಾಗ ಗೆಳೆಯರು, ಮನೆಯ ಸದಸ್ಯರು, ಹಿರಿಯರು ಮತ್ತು ಕಿರಿಯರೆನ್ನುವ ವ್ಯತ್ಯಾಸವಿಲ್ಲದೇ ಕೆಟ್ಟದಾಗಿ ಬೈಯುತ್ತಿದ್ದ. ಇದರಿಂದ ಆತನ ಮೇಲೆ ಸುತ್ತಮುತ್ತಲಿರುವ ಎಲ್ಲರಿಗೂ ಬಹಳ ಬೇಸರವಿತ್ತು. ಈತನ ಕೋಪದ ಪ್ರಖರತೆಯನ್ನು ತಡೆಯಲಾಗದೇ ಆ ಹುಡುಗನ ತಾಯಿಯು ಮಗನ ಸಿಟ್ಟಿನ ಕುರಿತು “ನಿಮ್ಮ ಮಗನ ಸಿಟ್ಟು ಹೀಗೇ ಮುಂದುವರಿದರೆ ಅವನ ಜತೆ ಯಾರೂ ಸೇರೋದಿಲ್ಲ. ಆದ್ದರಿಂದ ಅವನ ಕೋಪವನ್ನು ಹೇಗಾದರೂ ಕಡಿಮೆ ಮಾಡಿಸಲೇಬೇಕು’ ಎಂದು ತನ್ನ ಗಂಡನಲ್ಲಿ ಹೇಳಿದಳು.
ಅಪ್ಪ ಮರುದಿನ ಮಗನನ್ನು ಕರೆದು “ನಿನ್ನ ಕೋಪವನ್ನು ನೀನು ಕಡಿಮೆ ಮಾಡಿಕೊಳ್ಳಬೇಕು. ಕೋಪ ಇದೇ ರೀತಿ ಮುಂದುವರಿದರೆ ನಿನ್ನ ಬದುಕೇ ಹಾಳಾಗುತ್ತದೆ’ ಎಂದು ಬುದ್ಧಿ ಹೇಳಿದರು. “ಇನ್ನು ಮುಂದಕ್ಕೆ ನಿನಗೆ ಕೋಪ ಬಂದಾಗಲೆಲ್ಲ ನೀನು ಒಂದೊಂದು ಕಬ್ಬಿಣದ ಮೊಳೆಯನ್ನು ತೆಗೆದುಕೊಂಡು ನಮ್ಮ ಮನೆಯ ಆವರಣದ ಗೋಡೆಗೆ ಹೊಡೆಯಬೇಕು. ಆಗಲಾದರೂ ನಿನ್ನ ಕೋಪವು ಕಡಿಮೆಯಾಗಲಿ ಎಂದು ತಂದೆಯು ಉಪಾಯವನ್ನು ಹೇಳಿಕೊಟ್ಟರು. ಅದೇ ರೀತಿಯಾಗಿ ಕೋಪ ಬಂದಾಗಲೆಲ್ಲ ಗೋಡೆಗೆ ಮೊಳೆಯನ್ನು ಹೊಡೆಯಲಾರಂಭಿಸಿದ. ಮೊದಲ ದಿನ ಆತನು ಗೋಡೆಗೆ ಒಟ್ಟು 42 ಮೊಳೆಗಳನ್ನು ಹೊಡೆದ. ಎರಡನೇ ದಿನ 35, ಮೂರನೇ ದಿನಕ್ಕೆ 22 ಮೊಳೆಗಳನ್ನು ಹೊಡೆದಿದ್ದ. ಹೀಗೇ ದಿನದಿಂದ ದಿನಕ್ಕೆ ಆತನ ಕೋಪವೂ ಕಡಿಮೆಯಾಗಿ ಅವನು ಗೋಡೆಗೆ ಹೊಡೆಯುವ ಮೊಳೆಗಳ ಸಂಖ್ಯೆಯೂ ಕಡಿಮೆ ಆಯಿತು. ಕೊನೆಗೆ ಒಂದು ದಿನ ಪೂರ್ತಿ ಆತನಿಗೆ ಕೋಪವೇ ಬರದೇ ಆತ ಒಂದೇ ಒಂದು ಮೊಳೆಯನ್ನು ಹೊಡೆಯದಿರುವಷ್ಟು ಶಾಂತ ಸ್ವಭಾವದವನಾಗಿ ಬದಲಾಗಿದ್ದ. ಆ ದಿನ ಹುಡುಗ ತನ್ನ ಅಪ್ಪನ ಬಳಿ ಹೋಗಿ ತನ್ನ ಕೋಪ ಪೂರ್ತಿ ಕಡಿಮೆ ಆಗಿರುವ ವಿಚಾರವನ್ನು ತಿಳಿಸಿದ.
ಆಗ ಆತನ ಅಪ್ಪನು, ಹುಡುಗನಿಗೆ ಈಗಾಗಲೇ ಗೋಡೆಗೆ ಹೊಡೆದಿರುವ ಅಷ್ಟೂ ಮೊಳೆಗಳನ್ನು ಒಂದೊಂದಾಗಿ ಕೀಳಲು ಹೇಳುತ್ತಾರೆ. ಅದರಂತೆ ಹುಡುಗ ಗೋಡೆಗೆ ಹೊಡೆದಿದ್ದ ಎಲ್ಲ ಮೊಳೆಗಳನ್ನು ಕಿತ್ತು ಅಪ್ಪನ ಬಳಿ ಬರುತ್ತಾನೆ. ಆಗ ಅಪ್ಪ ಮಗನನ್ನು ಆ ಕಾಂಪೌಂಡಿನ ಬಳಿ ಕರೆದುಕೊಂಡು ಹೋಗಿ ಆ ಗೋಡೆಯನ್ನು ನೋಡಲು ಹೇಳುತ್ತಾರೆ. ಅಂದು ಅಂದವಾಗಿದ್ದ ಆ ಗೋಡೆಯ ಮೇಲೆ ಎಲ್ಲೆಲ್ಲೂ ಕೇವಲ ತೂತುಗಳೇ ಇದ್ದವು. ಅಲ್ಲಿದ್ದ ತೂತುಗಳನ್ನು ತೋರಿಸುತ್ತಾ “ನೋಡು ಮಗನೇ, ನೀನು ಕೋಪ ಬಂದಾಗಲೆಲ್ಲ ಈ ರೀತಿ ಮೊಳೆಯನ್ನು ಗೋಡೆಗೆ ಹೊಡೆದಂತೆಯೇ ನೀನು ಎಲ್ಲರ ಮೇಲೆ ರೇಗಾಡುತ್ತಿದ್ದೆ. ಅನಂತರ ಮೊಳೆಯನ್ನು ವಾಪಸು ಕಿತ್ತಂತೆ ನೀನು ಹೋಗಿ ಅವರಲ್ಲೆಲ್ಲ ಕ್ಷಮೆಯನ್ನೂ ಕೇಳಬಹುದು. ಆದರೆ ಈ ಗೋಡೆಯಲ್ಲಿ ತೂತುಗಳು ಮಾತ್ರ ಶಾಶ್ವತವಾಗಿ ಉಳಿಯುವಂತೆ ನಿನ್ನ ಬೈಗುಳದಿಂದ ಜನರಿಗಾಗಿರುವ ಬೇಸರವು ಅವರ ಮನಸಿನಲ್ಲಿ ಹಾಗೇ ಉಳಿದಿರುತ್ತದೆ ಎಂದರು.
ಮಗನಿಗೆ ತನ್ನ ತಪ್ಪಿನ ಅರಿವಾಗಿ ಆತನ ಕೋಪವೂ ಮಾಯವಾಗಿತ್ತು. ಈಗ ಆತ ಹೊಸ ಹುಡುಗ, ಹೊಸ ಮನಸ್ಸಿನ ಮಗ ಎಲ್ಲರ ಪ್ರೀತಿಯ ಗೆಳೆಯನಾಗಿ ಬದಲಾಗಿದ್ದ. ಕೋಪದಲ್ಲಿ ಯಾರ ಮೇಲೂ ರೇಗಾಡಬಾರದು. ಅನಂತರದಲ್ಲಿ ಎಲ್ಲವೂ ಸರಿ ಹೋದರೂ, ಆ ಮಾತಿನ ಕಲೆಗಳು ಮಾತ್ರ ಇತರರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತದೆ ಕೋಪದ ಕೈಯಲ್ಲಿ ಯಾವತ್ತೂ ಮನಸ್ಸನ್ನು ಕೊಡಬಾರದು. ಕೋಪದಲ್ಲಿ ಹೊಡೆಯುವ ಒಂದೊಂದು ಮೊಳೆಗಳೂ ಜೀವನದುದ್ದಕ್ಕೂ ಶಾಶ್ವತವಾಗಿ ಉಳಿದುಬಿಡುತ್ತವೆ.
- ಸಂತೋಷ್ ರಾವ್ ಪೆರ್ಮುಡ