Advertisement

ಪ್ರಾಕೃತಿಕ ವಿಕೋಪಕ್ಕೆ ಅತ್ಯಲ್ಪ ಪರಿಹಾರ ಮೊತ್ತ

11:38 PM May 21, 2020 | Sriram |

ಸುಳ್ಯ: ಪಾಕೃತಿಕ ವಿಕೋಪದಡಿ ಬೆಳೆ ನಷ್ಟವಾದರೆ ಸಿಗುವ ಪರಿಹಾರ ಮೊತ್ತ ಎಷ್ಟೆಂದರೆ, ಅರ್ಜಿ ಸಲ್ಲಿಸಲು ತಗಲುವ ಖರ್ಚಿಗೂ ಈ ಮೊತ್ತ ಸಾಲದಷ್ಟು..! 50 ವರ್ಷಗಳ ಹಿಂದಿನ ಈ ನಿಯಮ ಬದಲಾವಣೆಗೆ ಸರಕಾರಗಳು ಮನಸ್ಸು ಮಾಡದ ಕಾರಣ ಪ್ರತಿ ವರ್ಷ ಅರ್ಹ ಕೃಷಿಕರಿಗೆ ಪ್ರಯೋಜನ ದೊರೆಯುತಿಲ್ಲ.

Advertisement

ಶೇ. 33ರಷ್ಟು ಹಾನಿಯಾದರೆ ಮಾತ್ರ ಪರಿಹಾರ…!
ಮಳೆಗಾಲದಲ್ಲಿ ಶೇ. 33ರಷ್ಟು ಬೆಳೆ ನಷ್ಟವಾಗಿದ್ದರೆ ಮಾತ್ರ ಈ ಪ್ರಾಕೃತಿಕ ವಿಕೋಪದ ಪರಿಹಾರ ನೀಡಲಾಗುತ್ತದೆ. ಅದಕ್ಕಿಂತ ಕಡಿಮೆ ನಷ್ಟವಾದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಉದಾಹರಣೆಗೆ ಒಂದು ಹೆಕ್ಟೇರ್‌ನಲ್ಲಿ 452ಕ್ಕೂ ಹೆಚ್ಚು ಅಡಿಕೆ ಗಿಡ/ ಇತರ ಬೆಳೆ ನಷ್ಟವಾದರೆ ಅರ್ಜಿ ಸಲ್ಲಿಸಬಹುದು. 450ಕ್ಕಿಂತ ಕಡಿಮೆ ಹಾನಿ ಆದರೆ ಆ ಸಂತ್ರಸ್ತ ಬೆಳೆಗಾರರಿಗೆ ಪರಿಹಾರ ದೊರಕುವುದಿಲ್ಲ.

ಅವೈಜ್ಞಾನಿಕ ಪರಿಹಾರ;
ಹಲವು ನೀತಿ ನಿಬಂಧನೆ
ಅರ್ಜಿ ಸಲ್ಲಿಸಿದ ಅನಂತರ ಸಂತ್ರಸ್ತರ ತೋಟದಲ್ಲಿ ಗ್ರಾಮಕರಣಿಕರು ಸ್ಥಳ ತಪಾಸಣೆ ನಡೆಸುತ್ತಾರೆ. ಬೆಳೆ ನಷ್ಟದ ಬಗ್ಗೆ ಕಂದಾಯ ಅಧಿಕಾರಿಗಳಿಂದ ಶಿಫಾರಸುಗೊಂಡು ತಹಶೀಲ್ದಾರ್‌ ರುಜು ಪಡೆದು, ತೋಟಗಾರಿಕೆ ಇಲಾಖೆ ಸಮ್ಮತಿ ಸಿಕ್ಕಿದ ಅನಂತರ ಚೆಕ್‌ ನೀಡುವ ನಿಬಂಧನೆಗಳಿವೆ. ಇಲ್ಲಿ ಅರ್ಜಿದಾರ ತೋಟಗಾರಿಕೆಗೆ ಅರ್ಜಿ ಕೊಟ್ಟರೆ, ಕಂದಾಯ ಇಲಾಖೆಗೆ ನೀಡಿ ಎಂಬ ಉತ್ತರ ಬರುತ್ತದೆ ಎಂಬ ಆರೋಪವೂ ಇದೆ. ಹೀಗಾಗಿ ಒಟ್ಟು ವ್ಯವಸ್ಥೆಯಲ್ಲೇ ಗೊಂದಲ ಇದೆ.

ಅಡಿಕೆ, ತೆಂಗು ಬೆಳೆಗೆ ಹೆಕ್ಟೇರ್‌ಗೆ ನೀಡುವ ಪರಿಹಾರದ ಮೊತ್ತ 6,800 ರೂ., ಎರಡೂವರೆ ಎಕ್ರೆಯಲ್ಲಿನ ಎಲ್ಲ ಬೆಳೆ ನಷ್ಟವಾದರೆ ಮಾತ್ರ ಈ ಮೊತ್ತ ದೊರೆಯಬಲ್ಲದು. ಇದು 10 ಸೆಂಟ್ಸ್‌ನಿಂದ ಹಿಡಿದು ಸಾವಿರಾರು ಎಕ್ರೆ ತನಕವೂ ಇದೆ ಮಾನದಂಡವಿದೆ. ಫಸಲು ಬರುವ ಅಡಿಕೆಯೊಂದರ ಮರದ ಮೂಲ ಬೆಲೆ ಸರಕಾರಿ ಅಂಕಿ ಅಂಶದ ಪ್ರಕಾರ 552 ರೂ. ಅದರನ್ವಯ 100 ಗಿಡಗಳಿಗೆ ಹಾನಿ ಉಂಟಾದರೆ 55,200 ರೂ. ನೀಡಬೇಕು. ಆದರೆ ಇಲ್ಲಿ 1,200 ರೂ. ನೀಡಿ ಕೈ ತೊಳೆದುಕೊಳ್ಳಲಾಗುತ್ತದೆ.

ಬದಲಾವಣೆಯ ಅಗತ್ಯ
ಪ್ರಾಕೃತಿಕ ವಿಕೋಪದಡಿ ಕೃಷಿಕರಿಗೆ ಬೆಳೆ ನಷ್ಟಕ್ಕೆ ನೀಡುತ್ತಿರುವ ಪರಿಹಾರದ ಮೊತ್ತ ಏನೇನೂ ಸಾಲದು ಎನ್ನುವ ಅಂಶ ಗಮನಕ್ಕೆ ಬಂದಿದೆ. ಇಲ್ಲಿ ನಿಯಮಗಳಲ್ಲಿ ಲೋಪ ಇದೆ. ಹಲವು ವರ್ಷಗಳ ಹಿಂದಿನ ಲೆಕ್ಕಚಾರದಲ್ಲಿ ಈ ಪರಿಹಾರ ಮೊತ್ತ ನೀಡಲಾಗುತ್ತಿದೆ. ಹೊಸ ನೀತಿ ನಿಯಮ ರೂಪಿಸಿ ಆ ಮಾನದಂಡದಲ್ಲಿ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ.
-ಎಸ್‌.ಅಂಗಾರ,
ಶಾಸಕ, ಸುಳ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next