ಬೆಂಗಳೂರು: ಕಿಸಾನ್ ಡ್ರೋನ್‍ಗಳು ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ಮೊದಲ ಹೆಜ್ಜೆಯಾಗಿದೆ. ಹೊಸ ಉದ್ಯೋಗ ಸೃಷ್ಠಿಸುವ ಜೊತೆಗೆ ವಿದ್ಯಾವಂತ ಯುವ ಕೃಷಿಕರಿಗೆ ಹೊಸ ಅವಕಾಶಗಳನ್ನು ನಿರ್ಮಿಸುತ್ತದೆ. ಇದರಿಂದಾಗಿ ರೈತರಿಗೆ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಕೃಷಿ ಕ್ಷೇತ್ರಕ್ಕೆ ಇದು ವರದಾನವಾಗಲಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.
ಫೆಬ್ರುವರಿ 1 ರಂದು ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಘೋಷಣೆಯಾಗಿದ್ದ, ಕಿಸಾನ್ ಡ್ರೋನ್ ಯೋಜನೆಯನ್ನು ಕೇವಲ 18 ದಿನಗಳಲ್ಲಿ ಜಾರಿಗೆ ಬರುವಂತೆ ಮಾಡಿದ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಕೃಷಿ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ತುಂಬಾ ಸಹಕಾರಿಯಾಗಲಿದೆ. ಕೀಟನಾಶಕ, ಔಷಧ, ಪೋಷಕಾಂಶಗಳ ಸಿಂಪಡಣೆ, ಬೆಳೆ ಆರೋಗ್ಯ ತಪಾಸಣೆ, ಭೂ ದಾಖಲೆಗಳ ಡಿಜಿಟಲೀಕರಣ, ಜಮೀನುಗಳ ಸರ್ವೆ ಈ ಎಲ್ಲ ಕಾರ್ಯಗಳಿಗೆ ಕಿಸಾನ್ ಡ್ರೋನ್ ಯೋಜನೆ ಅನುಕೂಲವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ:ಬಂಟ್ವಾಳ: ಲಾರಿ ಢಿಕ್ಕಿ; ಬೈಕ್ ಸವಾರನಿಗೆ ಗಾಯ
ರೈತ ಉತ್ಪಾದಕ ಸಂಸ್ಥೆಗಳಿಗೆ ಖರೀದಿಸಲು ಸರ್ಕಾರ ಶೇ. 75 ರಷ್ಟು ಸಬ್ಸಿಡಿ ನೀಡುತ್ತದೆ. ಹೆಕ್ಟೇರ್‍ಗೆ 6.000 ರೂ. ನಂತೆ ಪಾವತಿಸಿ ಬಾಡಿಗೆಗೂ ಪಡೆಯಬಹುದು. ಸದ್ಯ 100 ಸ್ಥಳಗಳಲ್ಲಿ ಕಿಸಾನ್ ಡ್ರೋನ್ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದ್ದು, 2 ವರ್ಷಗಳಲ್ಲಿ ಈ ಸಂಖ್ಯೆ 1 ಲಕ್ಷಕ್ಕೇರಲಿದೆ. ಕೃಷಿ ಕ್ಷೇತ್ರದ ವಿಚಾರದಲ್ಲಿ ಇದೊಂದು ಉತ್ತೇಜನಕಾರಿ ಮತ್ತು ಮಹತ್ವದ ಬೆಳವಣಿಗೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.