Advertisement
ಮಂಗಳೂರು ಮಹಾನಗರ ಪಾಲಿಕೆಯ 24ನೇ ಅವಧಿಗೆ ಮೇಯರ್ ಹುದ್ದೆ “ಸಾಮಾನ್ಯ’ ಹಾಗೂ ಉಪ ಮೇಯರ್ ಸ್ಥಾನ “ಸಾಮಾನ್ಯ ಮಹಿಳೆ’ ಮೀಸಲಾತಿ ಎಂಬುದಾಗಿ ರಾಜ್ಯ ಸರಕಾರ ಬುಧವಾರ ಪ್ರಕಟಿಸಿದೆ.
Related Articles
Advertisement
1 ವರ್ಷಕ್ಕೆ ಮುನ್ನವೇ ಮೀಸಲಾತಿ!
ಸಾಮಾನ್ಯವಾಗಿ ಆಯಾಯ ವರ್ಷದ ಮೇಯರ್ -ಉಪಮೇಯರ್ ಮೀಸಲಾತಿ ಆಯಾ ವರ್ಷವೇ ಸರಕಾರ ಪ್ರಕಟ ಮಾಡುತ್ತದೆ. ಆದರೆ ಮಂಗಳೂರು ಪಾಲಿಕೆ ಹಾಗೂ ರಾಜ್ಯದ ಉಳಿದ ಪಾಲಿಕೆಗಳ ನಡುವೆ 1 ವರ್ಷದ ಆಡಳಿತ ಅವಧಿ ವ್ಯತ್ಯಾಸವಿದೆ. ಹೀಗಾಗಿ ಮಂಗಳೂರು ಪಾಲಿಕೆಗೆ 23ನೇ ಅವಧಿಯ ಮೇಯರ್-ಉಪಮೇಯರ್ ಆಯ್ಕೆ ನಡೆಯಲಿದ್ದರೆ, ಉಳಿದ ಪಾಲಿಕೆಗಳಲ್ಲಿ ಈ ಬಾರಿ 24ನೇ ಅವಧಿ ನಡೆಯುತ್ತಿದೆ. ಕಳೆದ ವರ್ಷವೇ 23ನೇ ಅವಧಿಯ ಮೇಯರ್ -ಉಪಮೇಯರ್ ಮೀಸಲಾತಿ ಮಂಗಳೂರು ಪಾಲಿಕೆಗೆ ಬಂದಿತ್ತು. ಅದು ಈ ವರ್ಷ ಅನುಷ್ಠಾನವಾಗಬೇಕಿತ್ತು. ಮುಂದಿನ ಸಾಲಿನ ಮೀಸಲಾತಿ ಬುಧವಾರ ಪ್ರಕಟವಾಗಿದೆ.
3ನೇ ಬಾರಿಯೂ “ಸಾಮಾನ್ಯ’ ಮೀಸಲಾತಿ!
ಪಾಲಿಕೆಯ ಬಿಜೆಪಿ ಆಡಳಿತದ ಮೊದಲ ಅವಧಿಯಲ್ಲಿ ದಿವಾಕರ್ ಪಾಂಡೇಶ್ವರ ಮೇಯರ್ ಗದ್ದುಗೆಗೇರಿದರೆ, ಎರಡನೇ ಅವಧಿಗೆ ಸಾಮಾನ್ಯ ಮೀಸಲು ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಪ್ರೇಮಾನಂದ ಶೆಟ್ಟಿ ಅವರಿಗೆ ಮೇಯರ್ ಹುದ್ದೆ ಒಲಿದು ಬಂದಿತ್ತು. ಕಳೆದ ವರ್ಷ ಸರಕಾರ ಪ್ರಕಟಿಸಿದ್ದ ಮೂರನೇ ಅವಧಿಯ ಮೀಸಲಾತಿಯೂ “ಸಾಮಾನ್ಯ’ ಅಭ್ಯರ್ಥಿಗೆ ನಿಗದಿಯಾಗಿತ್ತು. ಆದರೆ ಚುನಾವಣೆ ನಡೆದಿಲ್ಲ. ಇದೀಗ 4ನೇ ಅವಧಿಯ ಮೇಯರ್ ಮೀಸಲಾತಿಯನ್ನೂ “ಸಾಮಾನ್ಯ’ ಅಭ್ಯರ್ಥಿಗೆ ನಿಗದಿ ಮಾಡಿರುವುದು ಪಾಲಿಕೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸರಕಾರದ ಸ್ಪಷ್ಟನೆ ಕೋರಲಾಗಿದೆ: ಮಂಗಳೂರು ಪಾಲಿಕೆಗೆ ಕಳೆದ ವರ್ಷ 23ನೇ ಅವಧಿಗೆ ಮೇಯರ್, ಉಪ ಮೇಯರ್ ಸ್ಥಾನದ ಮೀಸಲಾತಿ ಪ್ರಕಟವಾಗಿತ್ತು. ಆದರೆ ಚುನಾವಣೆ ನಡೆದಿರಲಿಲ್ಲ. ಇದೀಗ 24ನೇ ಅವಧಿಗೆ ಮೀಸಲಾತಿ ಪ್ರಕಟವಾಗಿದೆ. ಹೀಗಾಗಿ 23ನೇ ಅವಧಿಯ ಮೇಯರ್, ಉಪ ಮೇಯರ್ ಚುನಾವಣೆಗೆ ಸಂಬಂಧಿಸಿ ದಿನಾಂಕ ನಿಗದಿಯಾಗಬೇಕಾಗಿದೆ. ಈ ಬಗ್ಗೆ ಸರಕಾರದಿಂದ ಸ್ಪಷ್ಟನೆಯನ್ನು ಕೋರಲಾಗಿದೆ. – ಅಕ್ಷಯ್ ಶ್ರೀಧರ್, ಆಯುಕ್ತರು, ಮನಪಾ