Advertisement

ಉದ್ಘಾಟನೆಯಾದರೂ ಆರಂಭಗೊಳ್ಳದ ಹೊಸ ವಿಧಾನ

12:40 AM Nov 17, 2021 | Team Udayavani |

ಮಂಗಳೂರು: “ಜನಸ್ನೇಹಿ ಸೇವೆಯೆಡೆಗೆ ಸಾರಿಗೆ ಇಲಾಖೆ’ ಯೋಜನೆಯಡಿ ರಾಜ್ಯ ಸರಕಾರವು ಸಾರಿಗೇತರ ವಾಹನಗಳ ನೋಂದಣಿಯನ್ನು ಮಾರಾಟಗಾರರ ಹಂತದಲ್ಲಿಯೇ ನಡೆಸುವ ಪ್ರಕ್ರಿಯೆಗೆ ನವೆಂಬರ್‌ 1ರಂದು ಚಾಲನೆ ನೀಡಿದೆ. ಆದರೆ ಇದಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸೂಕ್ತ ಸಿದ್ಧತೆಗಳು ಆಗದೇ ಇರುವುದರಿಂದ ಸದ್ಯ ಹಳೆಯ ಮಾದರಿಯ ಪ್ರಕ್ರಿಯೆ ಮುಂದುವರಿದಿದೆ.

Advertisement

ಹೊಸ ಯೋಜನೆಯಡಿ ಮಾರಾಟಗಾರರ ಹಂತದಲ್ಲಿಯೇ ನೋಂದಣಿ ಮತ್ತು ರಹದಾರಿ ಹಾಗೂ ಕಲಿಕಾ ಚಾಲನಾ ಅನುಜ್ಞಾ ಪತ್ರ ನೀಡುವಿಕೆ ಸಹಿತ 11 ಸಾರಥಿ ಸೇವೆಗಳು ಹಾಗೂ 19 ವಾಹನ್‌ ಸೇವೆಗಳನ್ನು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಸಂಪರ್ಕ ರಹಿತವಾಗಿ, ಆರ್‌ಟಿಒ ಕಚೇರಿಗಳಿಗೆ ಭೇಟಿ ನೀಡದೆಯೇ ಪಡೆಯುವ ಅವಕಾಶವನ್ನು ರಾಜ್ಯ ಸರಕಾರ ಕಲ್ಪಿಸಿದೆ.

ಏನಿದು ಹೊಸ ವ್ಯವಸ್ಥೆ
ಹೊಸ ವ್ಯವಸ್ಥೆಯಲ್ಲಿ ವಾಹನ ನೋಂದಣಿಗೆ ಡೀಲರ್‌ಗಳು ಆರ್‌ಟಿಒ ಕಚೇರಿಗೆ ಹೋಗಬೇಕಿಲ್ಲ. ಬದಲಾಗಿ ಇಲಾಖೆಯ ಆಯುಕ್ತರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಪಡೆಯ ಬೇಕಾಗುತ್ತದೆ. ಈ ಪ್ರಕ್ರಿಯೆಗಾಗಿ ಸರಕಾರ ನಿಗದಿಪಡಿಸಿದ ವಿದ್ಯಾರ್ಹತೆಯ (ಡಿಪ್ಲೊಮಾ ಇನ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಅಥವಾ ಆಟೋಮೊಬೈಲ್‌ ಎಂಜಿರಿಯರಿಂಗ್‌) ವ್ಯಕ್ತಿಯನ್ನು ನೋಂದಣಿ ಅಧಿಕಾರಿಯನ್ನಾಗಿ ಡೀಲರ್‌ಗಳೇ ನೇಮಿಸಬೇಕು. ಹೊಸ ವಾಹನ ಖರೀದಿಗೆ ಸಂಬಂಧಿಸಿದ ಹೈಪೊತಿಕೇಶನ್‌, ಆಧಾರ್‌ ಕಾರ್ಡ್‌ ಲಿಂಕ್‌, ಆದಾಯ ತೆರಿಗೆ, ವಿಮೆ ಇತ್ಯಾದಿ ಎಲ್ಲ ಪ್ರಕ್ರಿಯೆಗಳನ್ನು ಈ ಅಧಿಕಾರಿಯೇ ನಿರ್ವಹಿಸ ಬೇಕಾಗುತ್ತದೆ. ಎಲ್ಲ ಪ್ರಕ್ರಿಯೆ ಮುಗಿದು ನೋಂದಣಿ ಆದ ಬಳಿಕ ಡೀಲರ್‌ಗಳು ಅದನ್ನು ಆರ್‌ಟಿಒ ಕಚೇರಿಗೆ ಅಪ್‌ಲೋಡ್‌ ಮಾಡ ಬೇಕಾಗುತ್ತದೆ. ಆದರೆ ಡೀಲರ್‌ಗಳಿಂದ ನೋಂದಣಿ ಅಧಿಕಾರಿಗಳ ನೇಮಕ ಹಾಗೂ ಸಂಬಂಧ ಪಟ್ಟ ಇತರ ಕೆಲಸ ಕಾರ್ಯಗಳು ಇನ್ನಷ್ಟೇ ಆಗ ಬೇಕಾಗಿದೆ. ಸಾರಿಗೆ ಇಲಾಖೆಯ ಹಂತದಲ್ಲಿಯೂ ಪ್ರತ್ಯೇಕ ಕಂಪ್ಯೂಟರೀಕರಣ ವ್ಯವಸ್ಥೆ ಪೂರ್ಣಗೊಂಡಿಲ್ಲ.

ರಾಜಾಜಿನಗರದಲ್ಲಿ ಮಾತ್ರ ಜಾರಿ
ರಾಜ್ಯದಲ್ಲಿ ಬೆಂಗಳೂರಿನ ರಾಜಾಜಿ ನಗರದ ಆರ್‌ಟಿಒ ವ್ಯಾಪ್ತಿಯಲ್ಲಿ ಮಾತ್ರ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಆರಂಭಗೊಂಡಿದೆ. ಮುಂದೆ ಮೊದಲ ಹಂತದಲ್ಲಿ ಮಂಗಳೂರು ಸೇರಿದಂತೆ ರಾಜ್ಯದ 10 ಆರ್‌ಟಿಒ ವ್ಯಾಪ್ತಿಯಲ್ಲಿ ಹಾಗೂ ಕ್ರಮೇಣ ಎಲ್ಲ ಕಡೆಗಳಲ್ಲಿ ಜಾರಿಗೊಳಿಸುವ ಉದ್ದೇಶವನ್ನು ಸರಕಾರ ಹೊಂದಿದೆ.

ದ.ಕ. ಜಿಲ್ಲೆಯ ಬಂಟ್ವಾಳ ಮತ್ತು ಪುತ್ತೂರುಆರ್‌ಟಿಒಗಳಲ್ಲಿ ಸದ್ಯ ಹಳೆಯ ವ್ಯವಸ್ಥೆಯಲ್ಲಿಯೇ ನೋಂದಣಿ ನಡೆಯುತ್ತದೆ. ಮಂಗಳೂರು ಕಚೇರಿ ವ್ಯಾಪ್ತಿಯ ಡೀಲರ್‌ಗಳಿಗೆ ಬೆಂಗಳೂರಿನ ಸಾರಿಗೆ ಇಲಾಖೆಯ ಆಯುಕ್ತರ ಕಚೇರಿಗೆ ತೆರಳಿ ಅಲ್ಲಿಯೇ ಅರ್ಜಿ ಸಲ್ಲಿಸಿ ಅಲ್ಲಿಂದಲೇ ನೋಂದಣಿ ಮಾಡಿಸಿಕೊಂಡು ಬರುವಂತೆ ಸೂಚಿಸಲಾಗುತ್ತಿದೆ.

Advertisement

ಇದನ್ನೂ ಓದಿ:ಕ್ರಿಪ್ಟೋ: ಆರ್ಥಿಕತೆ ಮೇಲೆ ದುಷ್ಪರಿಣಾಮ; ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಆತಂಕ

ಮಂಗಳೂರಿನಲ್ಲಿ ದ್ವಿಚಕ್ರ ವಾಹನಗಳ 12, ಲಘು ವಾಹನಗಳ 8 ಡೀಲರ್‌ಗಳಿದ್ದಾರೆ. ಇದುವರೆಗೆ ಹೊಸ ವ್ಯವಸ್ಥೆ ಜಾರಿಗೆ ಯಾವುದೇ ಡೀಲರ್‌ಗಳು ಮುಂದೆ ಬಂದಂತೆ ಕಾಣುತ್ತಿಲ್ಲ ಎಂದು ಮಂಗಳೂರು ಆರ್‌ಟಿಒ ಕಚೇರಿಯ ಮೂಲಗಳು ತಿಳಿಸಿವೆ.

ಜನರು ಆರ್‌ಲೈನ್‌ ಮೂಲಕವೇ ಸಾರಿಗೆ ಇಲಾಖೆಯ ಸೇವೆಯನ್ನು ಪಡೆಯಲು ವ್ಯವಸ್ಥೆ ಜಾರಿಗೊಳಿಸಿರುವುದು ಸ್ವಾಗತಾರ್ಹ. ಆರ್‌ಟಿಒ ಕಚೇರಿಗಳಲ್ಲಿ ಈ ವ್ಯವಸ್ಥೆಗೆ ಸಿದ್ಧತೆಗಳು ಪೂರ್ಣಗೊಳ್ಳುವ ತನಕ ಹೆಲ್ಪ್ಡೆಸ್ಕ್ ಆರಂಭಿಸ ಬೇಕು. ಹೊಸ ವ್ಯವಸ್ಥೆಯ ತಾಂತ್ರಿಕ ಸಮಸ್ಯೆಗನ್ನು ಆದಷ್ಟು ಶೀಘ್ರ ಪರಿಹರಿಸಲು ಸರಕಾರ ಕ್ರಮ ಕೈಗೊಳ್ಳಬೇಕು.
– ಶಶಿಧರ ಪೈ ಮಾರೂರು,
ಕೆನರಾ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿಯ ಅಧ್ಯಕ್ಷ

ವಿನೂತನ ವ್ಯವಸ್ಥೆಗೆ ಮಂಗಳೂರು ಆರ್‌ಟಿಒ ಆಯ್ಕೆಯಾಗಿದೆಯಾದರೂ ಅನುಷ್ಠಾನಕ್ಕೆ ಬರುವ ತನಕ ಹೊಸ ವಾಹನ ನೋಂದಣಿಗೆ ಏನು ಮಾಡಬೇಕೆಂಬ ಯಾವುದೇ ಸೂಚನೆ ಬಂದಿಲ್ಲ. ಹಾಗಾಗಿ ವಾಹನ ಮಾರಾಟಗಾರರು ನೇರವಾಗಿ ಬೆಂಗಳೂರಿಗೆ ತೆರಳಿ, ಸಾರಿಗೆ ಆಯುಕ್ತರಿಗೆ ಅರ್ಜಿ ಸಲ್ಲಿಸಿ ನೋಂದಣಿ ಆಗಿರುವ ಬಗ್ಗೆ ಪ್ರಮಾಣ ಪತ್ರ ತರುವಂತೆ ಸೂಚಿಸಲಾಗುತ್ತಿದೆ.
– ಆರ್‌.ಎಂ. ವರ್ಣೇಕರ್‌,
ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು

-ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next