ಹುಡುಗರ ದಿರಿಸನ್ನು ಹುಡುಗಿಯರು ಧರಿಸುವುದು ಹೊಸತೇನಲ್ಲ. ಹಾಗಂತ ಇದ್ದುದನ್ನು ಇದ್ದ ಹಾಗೆ ತೊಡುವ ಜಾಯಮಾನವೂ ಇವರದಲ್ಲ. ಅದರಲ್ಲೂ ಹೊಸತನವನ್ನು ಟ್ರೈ ಮಾಡಿ ನೋಡಿಯೇ ಬಿಡುತ್ತಾರೆ. ಹಿಂದಿನ ಕಾಲದಲ್ಲಿ ಮಾತ್ರವಲ್ಲ ಈಗೀನ ಕಾಲದಲ್ಲೂ ಅಪರೂಪಕ್ಕೊಮ್ಮೆ ಹುಡುಗರು ಧರಿಸುವ, ಸಾಂಪ್ರದಾಯಿಕ ದಿರಿಸು ಎಂದೇ ಖ್ಯಾತಿ ಪಡೆದಿರುವ ಧೋತಿ (ಕಚ್ಚೆ) ಹುಡುಗಿಯರ ಮನಸ್ಸನ್ನೂ ಕದ್ದಿದೆ. ಪಟಿಯಾಲ, ಹ್ಯಾರೆಮ್ ಪ್ಯಾಂಟ್‌ಗಳಂತೆ ಧೋತಿ ಪ್ಯಾಂಟ್‌ಗಳು ಕೂಡ ಮಾರುಕಟ್ಟೆಯಲ್ಲಿ ಈಗ ಸದ್ದು ಮಾಡುತ್ತಿವೆ.
ಧೋತಿ ಪ್ಯಾಂಟ್ ಧರಿಸಬೇಕಿದ್ದರೆ ಕಚ್ಚೆ ಕಟ್ಟಬೇಕಿಲ್ಲ, ಇತರ ಪ್ಯಾಂಟ್‌ಗಳಂತೆ ಸುಲಭವಾಗಿ ಧರಿಸಬಹುದು. ಇದರಲ್ಲಿ ಲಾಡಿ, ಎಲಾಸ್ಟಿಕ್, ಬಟನ್, ಹುಕ್‌ಗಳಿರುವ ಪ್ಯಾಂಟ್‌ಗಳ ಆಯ್ಕೆಗಳೂ ಇವೆ. ಧೋತಿ ಪ್ಯಾಂಟ್ ಹುಡುಗರು ಧರಿಸುವ ಧೋತಿಯಂತಿದ್ದರೂ ಇದು ಧೋತಿಯಲ್ಲ. ಕುರ್ತಾ, ಕ್ರಾಪ್‌ಟಾಪ್, ಟೀ ಶರ್ಟ್, ಜಾಕೆಟ್, ಕಾಲರ್ ಇರುವ ಶರ್ಟ್, ಒನ್ ಶೋಲ್ಡರ್ ಟಾಪ್, ಸ್ಕಿಮ್ಮಿಂಗ್ ಜಾಕೆಟ್ ಜತೆಯೂ ಇದನ್ನು ಧರಿಸಬಹುದು.
ಸಾಂಪ್ರದಾಯಿಕ ಶುಭ ಸಮಾರಂಭಗಳಿಗೆ ಮಾತ್ರವಲ್ಲ ಪಾರ್ಟಿ, ಟೂರ್, ಟ್ರಕ್ಕಿಂಗ್ ಹೊರಡುವಾಗಲೂ ಸೂಕ್ತವೆನಿಸುವ ಈ ಪ್ಯಾಂಟ್ ಒಂದು ರೀತಿಯಲ್ಲಿ ಎಲ್ಲ ಕಾರ್ಯಕ್ರಮಕ್ಕೂ ಹೊಂದುವ ದಿರಿಸಾಗಿ ಹುಡುಗಿಯರ ಮನ ಗೆದ್ದಿದೆ. ಈ ಪ್ಯಾಂಟ್ ಬಾಲಿವುಡ್‌ನಲ್ಲೂ ಸಾಕಷ್ಟು ಸದ್ದು ಮಾಡಿದೆ. ಹಳೆಯ ಕಾಲದ ಸಿನೆಮಾಗಳಲ್ಲಿ ಕುರ್ತಾ, ಚೂಡಿದಾರದೊಂದಿಗೆ ಬಳಕೆಯಾಗುತಿದ್ದ ಧೋತಿ ಪ್ಯಾಂಟ್‌ಗೆ ಜಬ್ ವಿ ಮೆಟ್ ಹಿಂದಿ ಸಿನೆಮಾದಲ್ಲಿ ಕರೀನಾ ಕಪೂರ್ ವಿವಿಧ ಬಗೆಯ ಮೇಲುಡುಗೆ ತೊಟ್ಟು ಇದರ ಹೊಸ ಟ್ರೆಂಡ್ ಅನ್ನು ಆರಂಭಿಸಿದರು. ಬಳಿಕ ಸಾಕಷ್ಟು ಸಿನೆಮಾಗಳಲ್ಲಿ ಇದು ಬಳಕೆಯಾಗಿದೆ.
ಇತ್ತೀಚೆಗೆ ಗೆಳತಿಯೊಬ್ಬರ ಮೆಹೆಂದಿ ಕಾರ್ಯಕ್ರಮದಲ್ಲಿ ಕೃತಿ ಸಾನೊನ್, ಮೀರಾ ರಜಪೂತ್ ಕಪೂರ್, ಅತಿಯಾ ಶೆಟ್ಟಿ, ಶ್ರದ್ಧಾ ಕಪೂರ್ ಧೋತಿ ಪ್ಯಾಂಟ್‌ನೊಂದಿಗೆ ಬೇರೆ ಬೇರೆ ರೀತಿಯ ಮೇಲುಡುಗೆ ಧರಿಸಿ ಸಂಭ್ರಮಿಸಿದ್ದರು. ಶಿಲ್ಪಾ ಶೆಟ್ಟಿ ಕುಂದ್ರಾ ಧೋತಿ ಪ್ಯಾಂಟ್‌ನೊಂದಿಗೆ ಲಾಂಗ್ ಜಾಕೆಟ್ ತೊಟ್ಟು ಮಿಂಚಿದ್ದರು. ನಮ್ಮ ದೇಶದ ಮಹಿಳೆಯರ ವಾರ್ಡ್‌ರೋಬ್‌ನಲ್ಲಿ ಈಗ ಧೋತಿ ಪ್ಯಾಂಟ್‌ಗೂ ಸ್ಥಾನ ಸಿಕ್ಕಿದೆ. ಇದರಲ್ಲಿ ಮದುವೆ ಸಮಾರಂಭಗಳಿಗೆ ಹೊಂದುವಂತಹ ಕಪ್ಪು, ಐವೊರಿ, ಚಿನ್ನದ ಬಣ್ಣದ ಧೋತಿ ಪ್ಯಾಂಟ್ ಗಳಿಗೆ ಬೇಡಿಕೆ ಹೆಚ್ಚಿದೆ. ಸಾಂಪ್ರದಾಯಿಕ ಮೇಲುಡುಗೆಗಳೊಂದಿಗೂ ಈ ಪ್ಯಾಂಟ್ ಧರಿಸಬಹುದು. ಆದರೆ ಆಗ ಇದರೊಂದಿಗೆ ದುಪ್ಪಟ್ಟಾ ಹಾಕಿಕೊಂಡರೆ ನೀವು ಧರಿಸಿದ ಉಡುಗೆ ಹೆಚ್ಚು ಸುಂದರವಾಗಿ ಕಾಣುತ್ತದೆ.
ಧೋತಿ ಪ್ಯಾಂಟ್‌ನೊಂದಿಗೆ ಪಾಶ್ಚಾತ್ಯ ಶೈಲಿಯ ಉಡುಗೆ ಧರಿಸುವುದಾದರೆ ಸೊಂಟಕ್ಕೊಂದು ಬೆಲ್ಟ್, ಕಾಲಿಗೆ ಹೈಹೀಲ್ಡ್ ಚಪ್ಪಲಿಯೂ ಸೂಟ್ ಆಗುತ್ತದೆ. ಹೆಚ್ಚು ಸಡಿಲವಾಗಿರುವ ಈ ದಿರಿಸು ಯೋಗ, ಜಿಮ್, ವ್ಯಾಯಾಮ ಮಾಡುವಾಗ ಧರಿಸಲು ಯೋಗ್ಯವಾಗಿದೆ. ಸ್ಟೈಲ್ ಜತೆಗೆ ಆರಾಮವನ್ನೂ ನೀಡುವುದರಿಂದ ಈ ಉಡುಗೆ ಕಾಲೇಜು ಯುವತಿಯರು ಮಾತ್ರವಲ್ಲ ಎಲ್ಲ ವಯಸ್ಸಿನ ಹೆಂಗಳೆಯರ ಮನ ಗೆದ್ದಿದೆ.
ವಿದ್ಯಾ ಕೆ. ಇರ್ವತ್ತೂರು