Advertisement

ಗೃಹರಕ್ಷಕ ಕಚೇರಿ ಆವರಣದಲ್ಲಿ ಸುಂದರ ಉದ್ಯಾನವನ; ತ್ಯಾಜ್ಯ ತುಂಬಿದ್ದ ಪ್ರದೇಶಕ್ಕೆ ಹೊಸ ರೂಪ

12:42 PM Jul 22, 2022 | Team Udayavani |

ಮೇರಿಹಿಲ್‌: ಹಸುರೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಗೃಹ ರಕ್ಷಕದಳ ಮುಂದಾಗಿದ್ದು, ಮೇರಿಹಿಲ್‌ ನಲ್ಲಿರುವ ಮುಖ್ಯ ಕಚೇರಿಯಲ್ಲಿ ಸುಂದರ ಉದ್ಯಾನವನ ನಿರ್ಮಾಣಗೊಂಡಿದೆ. ಈ ಹಿಂದೆ ತ್ಯಾಜ್ಯ ತುಂಬಿದ್ದ ಪ್ರದೇಶವನ್ನು ಕಂಗೊಳಿಸುವಂತೆ ಮಾಡುವ ಉದ್ದೇಶದಿಂದ ಜಿಲ್ಲಾ ಗೃಹರಕ್ಷಕದಳ ಕಚೇರಿಯ ಎಡ ಭಾಗದಲ್ಲಿ ಸುಮಾರು ಒಂದು ಸಾವಿರ ಚದರ ಅಡಿ ಜಾಗದಲ್ಲಿ ಸುಂದರ ಉದ್ಯಾನವನ ನಿರ್ಮಾಣ ಮಾಡಲಾಗಿದೆ.

Advertisement

ಗೃಹರಕ್ಷಕ ದಳದ ಕಮಾಂಡೆಂಟ್‌ ಡಾ| ಮುರಲೀ ಮೋಹನ್‌ ಚೂಂತಾರು ಅವರ ಮನವಿ ಮೇರೆಗೆ ಕರ್ಣಾಟಕ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌. ಅವರು ತತ್‌ಕ್ಷಣ ಸ್ಪಂದಿಸಿ ಕಾರ್ಪೋರೆಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ ಆರ್‌) ನಿಧಿಯಿಂದ 2.25 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಗೃಹರಕ್ಷಕ ದಳದ ಮಹಾ ಸಮಾದೇಷ್ಠ, ಡಿಜಿಪಿ ಡಾ| ಅಮರ್‌ ಕುಮಾರ್‌ ಪಾಂಡೆ ಅವರು ಗೃಹ ರಕ್ಷಕದಳದ ಜಿಲ್ಲಾ ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿದ್ದರು.

ಈ ಸಂದರ್ಭ ಕಚೇರಿ ಆವರಣದಲ್ಲಿ ತ್ಯಾಜ್ಯ ತುಂಬಿರುವುದನ್ನು ವೀಕ್ಷಿಸಿ ಅಸಮಾಧಾನ ವ್ಯಕ್ತಪಡಿಸಿದ ತತ್‌ಕ್ಷಣ ಶುಚಿಗೊಳಿಸಿ, ಪರಿಸರದಲ್ಲಿ ಗಿಡಗಳನ್ನು ನೆಡುವಂತೆ ಡಿಜಿಪಿಯವರು ಸೂಚಿಸಿದ್ದರು. ಅದರಂತೆ ಉದ್ಯಾನವನ ನಿರ್ಮಾಣಕ್ಕೆ ಮುನ್ನುಡಿ ಇಡಲಾಗಿದೆ.

ಸುತ್ತಮುತ್ತಲಿನ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಪ್ರತಿ ಗೃಹರಕ್ಷಕರು ಒಂದೊಂದು ಗಿಡ ನೆಡುವ ಸಂಕಲ್ಪ ಕೈಗೊಂಡಿದ್ದಾರೆ. 5 ವರ್ಷಗಳಲ್ಲಿ 5 ಸಾವಿರಕ್ಕೂ ಅಧಿಕ ವಿವಿಧ ಬಗೆಯ ಗಿಡಗಳನ್ನು ನೆಡಲಾಗಿದೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಈ ವರ್ಷವೂ ಅರಣ್ಯ ಇಲಾಖೆಯಿಂದ ಗಿಡ ಪಡೆಯಲು ನಿರ್ಧರಿಸಲಾಗಿದೆ. ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರ ಸಹಕಾರದಲ್ಲಿ ನೆಟ್ಟಿರುವ ಗಿಡಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ.

ಪಾರ್ಕ್‌ ನಿರ್ವಹಣೆ ಗೃಹರಕ್ಷಕ ದಳದ ಜವಾಬ್ದಾರಿ: ನಗರದ ಮೇರಿಹಿಲ್‌ನಲ್ಲಿರುವ ಗೃಹರಕ್ಷಕ ದಳ ಆವರಣದಲ್ಲಿ ಸುಂದರ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಕರ್ಣಾಟಕ ಬ್ಯಾಂಕ್‌ ಪ್ರಾಯೋಜಕತ್ವ ನೀಡಿದ್ದು, ಮುಂದಿನ ದಿನಗಳಲ್ಲಿ ಸುಂದರ ಪಾರ್ಕ್‌ ನಿರ್ವಹಣೆಯ ಜವಾಬ್ದಾರಿ ವಹಿಸುತ್ತೇವೆ. –ಡಾ| ಮುರಲೀ ಮೋಹನ್‌ ಚೂಂತಾರು, ಕಮಾಂಡೆಂಟ್‌ ಗೃಹರಕ್ಷಕದಳ ದ.ಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next