“ಹುಲಿರಾಯ’ ಮೂಲಕ ಸುದ್ದಿಯಾಗಿದ್ದ ನಾಯಕ ಬಾಲು ನಾಗೇಂದ್ರ ಯಾವ ಚಿತ್ರ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿತ್ತು. ಆ ಪ್ರಶ್ನೆಗೆ ಉತ್ತರ “ಕಪಟ ನಾಟಕ ಪಾತ್ರಧಾರಿ’ ಚಿತ್ರ. ಹೌದು, ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿದ ಚಿತ್ರತಂಡ ಇತ್ತೀಚೆಗೆ ಪೋಸ್ಟರ್ ಹಾಗೂ ಟ್ರೇಲರ್ ಬಿಡುಗಡೆ ಮಾಡಿತು. ಈ ಚಿತ್ರಕ್ಕೆ ಕ್ರಿಶ್ ನಿರ್ದೇಶಕರು. ಈ ಹಿಂದೆ “ಜಾಸ್ತಿ ಪ್ರೀತಿ’ ಚಿತ್ರ ನಿರ್ದೇಶಿಸಿದ್ದ ಅವರು, “ಕಪಟ ನಾಟಕ ಪಾತ್ರಧಾರಿ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಇದರೊಂದಿಗೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ.
ಎಲ್ಲಾ ಸರಿ, ಈ ಚಿತ್ರದ ಕಥೆ ಏನು? ಇದಕ್ಕೆ ಉತ್ತರ ಕೊಡುವ ನಿರ್ದೇಶಕ ಕ್ರಿಶ್, “ಜಗತ್ತಿನಲ್ಲಿ ಪ್ರತಿಯೊಬ್ಬರ ಬದುಕು ಕೂಡ ನಾಟಕ. ಅವರವರ ಜೀವನದಲ್ಲಿ ಬರುವವರು ಪಾತ್ರಧಾರಿಗಳಾಗಿರುತ್ತಾರೆ. ಇಲ್ಲಿ ಎಲ್ಲವೂ ಹೀಗೆ ಅಂತ ಹೇಳಲು ಆಗುವುದಿಲ್ಲ. ಸಿನಿಮಾ ನೋಡುಗರು ಅಲ್ಲೇನೋ ನಡೆಯುತ್ತೆ ಅಂತ ಭಾವಿಸಿದರೆ, ಅಲ್ಲಿ ಬೇರೆಯದ್ದೇ ಆಗಿರುತ್ತೆ. ಈಗಿನ ಬದುಕಿನ ಸ್ಥಿತಿ, ಸಂಬಂಧಗಳ ಮೌಲ್ಯ ಕುರಿತು ಚಿತ್ರ ಸಾಗಲಿದೆ. ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ’ ಎಂದು ವಿವರ ಕೊಟ್ಟರು ನಿರ್ದೇಶಕ ಕ್ರಿಶ್.
ನಾಯಕ ಬಾಲು ನಾಗೇಂದ್ರ ಅವರು “ಹುಲಿರಾಯ’ ಬಳಿಕ ಈ ಚಿತ್ರ ಒಪ್ಪಿಕೊಂಡಿದ್ದಾರೆ. ಸೋಮಾರಿಯಾಗಿರುವ ಅವರು ಬದುಕು ಕಟ್ಟಿಕೊಳ್ಳಲು ಆಟೋ ಚಾಲಕರಾಗಿ, ಆ ಮಧ್ಯೆ ಒಂದು ಪ್ರೀತಿಯೂ ಹುಟ್ಟಿಕೊಂಡು, ಅದರ ಜೊತೆಗೆ ಎದುರಾಗುವ ಸಮಸ್ಯೆಗಳು. ಅದನ್ನು ಎದುರಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.
ಚಿತ್ರದಲ್ಲಿ ಜೈದೇವ್ ಗೆಳೆಯನ ಪಾತ್ರ ನಿರ್ವಹಿಸಿದ್ದಾರೆ. ಶಂಕರ್ ನಾರಾಯಣ್ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಅದಿಲ್ ನದಾಫ್ ಚಿತ್ರದ ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಗೋಕುಲ್ ನೃತ್ಯ ಸಂಯೋಜಿಸಿದ್ದಾರೆ. ಪರಮೇಶ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈ ಚಿತ್ರಕ್ಕೆ ಸುರೇಶ್, ಅರವಿಂದ್ ಮತ್ತು ಚಂದ್ರಶೇಖರ್ ನಿರ್ಮಾಪಕರು. ಅಂದು ಗೀತರಚನೆಕಾರ ನಾಗೇಂದ್ರ ಪ್ರಸಾದ್ ಚಿತ್ರದ ಪೋಸ್ಟರ್ ಮತ್ತು ಟ್ರೇಲರ್ ಬಿಡುಗಡೆ ಮಾಡಿ, “ಸಮಾನ ಮನಸ್ಕರು, ವಯಸ್ಕರು ಸೇರಿ ಮಾಡಿದ ಈ ಪ್ರಯತ್ನಕ್ಕೆ ಗೆಲುವು ಸಿಗಲಿ’ ಎಂದು ಶುಭ ಹಾರೈಸಿದರು. ಅಂದು ಸಂಗೀತಾ ಭಟ್ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಎಲ್ಲರೂ ಮಾತಾಡುವ ಹೊತ್ತಿಗೆ ಸಮಯ ಮೀರಿತ್ತು. ಮಾತುಕತೆಗೂ ಬ್ರೇಕ್ ಬಿತ್ತು.