Advertisement

ಪೊಲೀಸರು, ಜಿಲ್ಲಾಡಳಿತಕ್ಕೆ ಹೊಸ ಸವಾಲು

09:42 AM Jul 20, 2020 | mahesh |

ಮಂಗಳೂರು: ವಿವಿಧ ಪ್ರಕರಣಗಳಲ್ಲಿ ಬಂಧಿತರಾಗುವ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಕೋವಿಡ್‌ ಪರೀಕ್ಷೆ ಮಾಡಿಸಬೇಕಿದ್ದು, ಅದರ ವರದಿ ಬರುವ ತನಕ ಹಾಗೂ ವರದಿ ಪಾಸಿಟಿವ್‌ ಬಂದ ಸಂದರ್ಭದಲ್ಲಿ ಅವರನ್ನು ದಾಖಲಿಸಲು ಕೊರೊನಾ ಆಸ್ಪತ್ರೆಯಾಗಿರುವ ವೆನ್ಲಾಕ್‌ನಲ್ಲಿ ಪ್ರತ್ಯೇಕ ವ್ಯವಸ್ಥೆ ಇಲ್ಲದಿರುವುದು ಪೊಲೀಸರಿಗೂ ಜಿಲ್ಲಾಡಳಿತಕ್ಕೂ ತಲೆ ನೋವಾಗಿ ಪರಿಣಮಿಸಿದೆ.

Advertisement

ಆರೋಪಿಗಳಿಗಾಗಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕವನ್ನು (ವಿಚಾರಣಾಧೀನ ಕೈದಿಗಳ ಸೆಲ್‌ ಇರುವಂತೆ) ತೆರೆಯುವಂತೆ ಪೊಲೀಸರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಈವರೆಗೆ ವ್ಯವಸ್ಥೆ ಆಗಿಲ್ಲ. ಕೋವಿಡ್‌ ಪರೀಕ್ಷೆಯ ವರದಿ ಬರುವ ತನಕ ಆರೋಪಿಗಳನ್ನು ಠಾಣೆಯಲ್ಲಿಯೇ ಇರಿಸಬೇಕಾಗುತ್ತದೆ. ವರದಿ ಪಾಸಿಟಿವ್‌ ಬಂದರೆ ಕೊರೊನಾ ಆಸ್ಪತ್ರೆ (ವೆನ್ಲಾಕ್‌)ಗೆ ದಾಖಲಿಸಲಾಗುತ್ತದೆ. ಅಲ್ಲಿ ಅವರಿಗೆ ಪ್ರತ್ಯೇಕ ಕೊಠಡಿ ಇಲ್ಲದ ಕಾರಣ ಇತರ ಸಾಮಾನ್ಯ ರೋಗಿಗಳ ಹಾಗೆ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

ಬೆಂಗಾವಲು ಅನಿವಾರ್ಯ
ಕೋವಿಡ್ ಪರೀಕ್ಷೆಯ ವರದಿ ಬರಲು 2-3 ದಿನ ತಗಲುತ್ತಿದ್ದು, ಈ ಅವಧಿಯಲ್ಲಿ ಹಾಗೂ ಆಸ್ಪತ್ರೆಗೆ ದಾಖಲಿಸಿ ಗುಣಮುಖರಾಗುವ ತನಕ ಆರೋಪಿಗಳಿಗೆ ಬೆಂಗಾವಲು ಒದಗಿಸಲೇಬೇಕಾಗುತ್ತದೆ. ಆಸ್ಪತ್ರೆಯಿಂದ ಬಿಡುಗಡೆ ಆಗಲು ಕೆಲವು ಸಂದರ್ಭಗಳಲ್ಲಿ 14ರಿಂದ 21 ದಿನಗಳು ಬೇಕಾಗುತ್ತವೆ. ಅಷ್ಟೂ ದಿನ ಅವರಿಗೆ ಕಾವಲು ಅನಿವಾರ್ಯ. ಸಾಮಾನ್ಯವಾಗಿ ಒಬ್ಬ ಆರೋಪಿಗೆ ಓರ್ವ ಸಿಎಆರ್‌/ ಡಿಎಆರ್‌ ಸಿಬಂದಿ ಮತ್ತು ಠಾಣೆಯ ಓರ್ವ ಸಿಬಂದಿ ಸೇರಿದಂತೆ ಇಬ್ಬರು ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಅವರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಇಂತಹ ಕರ್ತವ್ಯ ಭಾರದಿಂದಲೇ ಕೆಲವು ಮಂದಿ ಪೊಲೀಸರು ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ.

ದ.ಕ.: 22 ಆರೋಪಿಗಳಿಗೆ, 78 ಪೊಲೀಸರಿಗೆ ಪಾಸಿಟಿವ್‌
ದ.ಕ. ಜಿಲ್ಲೆಯಲ್ಲಿ ಮಾರ್ಚ್‌ 22ರ ಬಳಿಕ ಪೊಲೀಸರು ಬಂಧಿಸಿರುವ ಆರೋಪಿಗಳ ಪೈಕಿ 22 ಮಂದಿಗೆ ಹಾಗೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ 78 ಪೊಲೀಸರಿಗೆ ಕೊರೊನಾ ಸೋಂಕು ತಗಲಿದೆ. ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 17 ಆರೋಪಿಗಳಿಗೆ, 68 ಪೊಲೀಸರು ಮತ್ತು ಇಬ್ಬರು ಗೃಹರಕ್ಷಕರನ್ನು ಕೊರೊನಾ ಬಾಧಿಸಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಐವರು ಆರೋಪಿಗಳಿಗೆ ಮತ್ತು 10 ಪೊಲೀಸರಿಗೆ ಸೋಂಕು ತಗಲಿದೆ. ಬಾಧಿತ ಪೊಲೀಸರ ಕುಟುಂಬದವರೂ ಕ್ವಾರಂಟೈನ್‌ಗೆ ಒಳಗಾಗಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.

ಪ್ರತ್ಯೇಕ ಕೊಠಡಿಗೆ ಕೋರಿಕೆ
ಬಂಧಿತರ ಕೋವಿಡ್‌ ಪರೀಕ್ಷೆಯ ವರದಿ ಬರುವ ತನಕ / ಕೊರೊನಾ ದೃಢವಾಗಿ ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂದರೆ ಅವರಿಗೆ ಪ್ರತ್ಯೇಕ ಸೆಲ್‌/ ಕೊಠಡಿ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತವನ್ನು ಕೋರಲಾಗಿದೆ. ವಿವಿಧ ಸಭೆಗಳಲ್ಲಿಯೂ ಪ್ರಸ್ತಾವಿಸಲಾಗಿದೆ. ಈ ತನಕ ವ್ಯವಸ್ಥೆ ಆಗಿಲ್ಲ. ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದರೆ ಪೊಲೀಸರಿಗೂ ಜಿಲ್ಲಾಡಳಿತಕ್ಕೂ ಅನುಕೂಲ.
– ಲಕ್ಷ್ಮೀ ಗಣೇಶ್‌, ಡಿಸಿಪಿ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next