ಮೈಸೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳ ನಡುವಿನ ಮೈತ್ರಿಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ಈ ಹಿಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರ ರಚಿಸಿದ್ದರೂ ಅದಕ್ಕೆ ಎಚ್.ಡಿ.ದೇವೇಗೌಡರ ಒಪ್ಪಿಗೆ ಇರಲಿಲ್ಲ. ಆದರೆ ಈಗಿನ ಮೈತ್ರಿ ಸಂಪೂರ್ಣ ಭಿನ್ನ. ಎಚ್.ಡಿ.ದೇವೇಗೌಡರೇ ಮುಂದೆ ನಿಂತು ಬಿಜೆಪಿ ಜತೆ ಮೈತ್ರಿಗೆ ಅಸ್ತು ಎಂದಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಂದೇ ವೇದಿಕೆಯಲ್ಲಿ ನಿಂತು ಮತ ಯಾಚಿಸುವ ಸಂದರ್ಭವಿದು. ಅಲ್ಲಿಗೆ ಕರ್ನಾಟಕ ರಾಜ್ಯ ರಾಜಕಾರಣ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿಯ ಕಣವಾಗಲಿದೆ.
ರಾಜ್ಯದ 28 ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ. ಹೀಗಾಗಿ, ಜೆಡಿಎಸ್ ಮೈತ್ರಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ದಕ್ಕಿಸಿಕೊಳ್ಳಲು ಲಾಭವಾಗಲಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ವರ್ಚಸ್ಸು, ಬಿಜೆಪಿ ಸಂಘಟನೆಯ ಶಕ್ತಿ ಜೆಡಿಎಸ್ ಅಭ್ಯರ್ಥಿಗಳಿಗೆ ವರವಾಗಲಿದೆ. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಮೈತ್ರಿ ಮುಂದುವರಿದರೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಯು ಜೆಡಿಎಸ್‌ಗೆ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಗೆ ಒತ್ತಾಸೆಯಾಗಿ ನಿಲ್ಲಲಿದೆ.
ಹಾಗೆ ನೋಡಿದರೆ ರಾಜ್ಯ ರಾಜಕಾರಣದಲ್ಲಿ ತಳಮಟ್ಟದಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮಧ್ಯೆ ಅಷ್ಟಾಗಿ ಜಿಲ್ಲಾಜಿದ್ದಿ ವಿರೋಧಗಳಿಲ್ಲ. ಜೆಡಿಎಸ್-ಬಿಜೆಪಿ ಈ ಹಿಂದೆ ಮೈತ್ರಿ ಸರಕಾರ ರಚಿಸಿದ್ದಾಗ ಎರಡೂ ಪಕ್ಷಗಳ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ, 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚಿಸಿದಾಗ ಈ ಎರಡೂ ಪಕ್ಷಗಳಲ್ಲಿ ಮಂಕು ಆವರಿಸಿತ್ತು. ಅಂದರೆ, ಜೆಡಿಎಸ್ ಅಥವಾ ಕಾಂಗ್ರೆಸ್ ಕಾರ್ಯಕರ್ತರಿಗಾಗಲಿ ಪರಸ್ಪರ ಮೈತ್ರಿಗೆ ಸಮ್ಮತಿ ಇರಲಿಲ್ಲ. ನಾಯಕರು ಹಸ್ತ ಕುಲುಕಿದರೂ ಕಾರ್ಯಕರ್ತರು ಮುಖ ತಿರುಗಿಸಿದ್ದೇ ಜಾಸ್ತಿ. ಆದರೆ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಒಂದು ರೀತಿ ಸಹಜ ಎಂಬ ಭಾವ ಉಭಯ ಪಕ್ಷಗಳ ಕಾರ್ಯಕರ್ತರಲ್ಲಿದೆ. ಯಾಕೆಂದರೆ, ಈ ಎರಡೂ ಪಕ್ಷಗಳ ಕಾರ್ಯಕರ್ತರದ್ದು ಕಾಂಗ್ರೆಸ್ ವಿರೋಧಿ ಮನೋಭಾವ.
ಉದಾಹರಣೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧಿಸಿ ಸ್ಥಾನ ಹೊಂದಾಣಿಕೆ ಮಾಡಿಕೊಂಡಿತ್ತು. ಮೈಸೂರಿನಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಕಣಕ್ಕೆ ಇಳಿದರೆ ತುಮಕೂರಿನಲ್ಲಿ ಎಚ್.ಡಿ.ದೇವೇಗೌಡರೇ ಸ್ಪರ್ಧಿಸಿದ್ದರು. ಮೈಸೂರಿನಲ್ಲಿ ವಿಜಯಶಂಕರ್ ಪರ ಜೆಡಿಎಸ್ ಕಾರ್ಯಕರ್ತರು ಕೆಲಸ ಮಾಡಲಿಲ್ಲ. ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರನ್ನು ಜೆಡಿಎಸ್ ಮುಖಂಡರು ಬಹಿರಂಗವಾಗಿ ಬೆಂಬಲಿಸಿ ಅವರ ಗೆಲುವಿಗೆ ನೆರವಾದರು. ತುಮಕೂರಿನಲ್ಲಿ ಕಾಂಗ್ರೆಸ್‌ನ ಪ್ರಭಾವಿ ಮುಖಂಡರು, ಕಾರ್ಯಕರ್ತರು ದೇವೇಗೌಡರ ಸೋಲಿಗೆ ಟೊಂಕ ಕಟ್ಟಿ ನಿಂತಿದ್ದರು. ಅಲ್ಲಿ ಅವರು ಬಿಜೆಪಿಯನ್ನು ಬೆಂಬಲಿಸಿ ದೇವೇಗೌಡರ ಪರಾಭವಕ್ಕೆ ಕಾರಣರಾದರು. ಇಂಥ ಪರಿಸ್ಥಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸ್ಥಾನ ಹೊಂದಾಣಿಕೆ ಅಸಹಜ ಎಂಬಂತೆ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಅನಿಸಿದ್ದು ನಿಜ. ಆದರೆ, ಇದೇ ಮಾತು ಬಿಜೆಪಿ-ಜೆಡಿಎಸ್ ಸ್ಥಾನ ಹೊಂದಾಣಿಕೆಯಾದರೆ ಅನ್ವಯ ಆಗದು.
ಕೂಡ್ಲಿ ಗುರುರಾಜ