Advertisement
ಅದನ್ನು ತಿಳಿಯುವ ಕುತೂಹಲವಿದ್ದರೆ, ಒಮ್ಮೆ “ಸೀಜರ್’ನ ಸೀಜಿಂಗ್ ಕೆಲಸ ನೋಡಬಹುದು. ಇಲ್ಲಿ ಕಾರುಗಳನ್ನು ಸೀಜ್ ಮಾಡುವುದೇ ಕಥೆ ಅಂದುಕೊಂಡಿದ್ದರೆ ಆ ಊಹೆ ತಪ್ಪು. ಅಲ್ಲೊಂದು ದೊಡ್ಡ ತಿರುವಿದೆ. ಅಲ್ಲಿ ನಿಂತು ನೋಡಿದರೆ, ಸಾಕಷ್ಟು ಹಳ್ಳ-ಕೊಳ್ಳಗಳೂ ಸಿಗುತ್ತವೆ. ಆ ಹಳ್ಳ-ಕೊಳ್ಳದಲ್ಲಿ ತರಹೇವಾರಿ ಜನರ ದರ್ಶನವಾಗುತ್ತಾ ಹೋಗುತ್ತದೆ. ಅಸಲಿಗೆ, ಇದೊಂದು ಸರಳ ಕಥೆ. ಚಿತ್ರಕಥೆಯೂ ಅದಕ್ಕೆ ಹೊರತಾಗಿಲ್ಲ.
Related Articles
Advertisement
ಒಂದು ಕಮರ್ಷಿಯಲ್ ಚಿತ್ರಕ್ಕೆ ಇರಬೇಕಾದ ಭರ್ಜರಿ ಸಾಹಸಮಯ ದೃಶ್ಯಗಳು, ಹಾಡು, ಪ್ರೀತಿ, ಹಾಸ್ಯ, ಚಿಕ್ಕದ್ದೊಂದು ಸೆಂಟಿಮೆಂಟ್ ಎಲ್ಲವೂ ಇಲ್ಲಿ ಸಮ್ಮಿಶ್ರಗೊಂಡಿರುವುದರಿಂದ ಮೊದಲರ್ಧ ಅಷ್ಟೇ ವೇಗವಾಗಿ ಮುಗಿದು ಹೋಗುತ್ತದೆ. ದ್ವಿತಿಯಾರ್ಧದಲ್ಲಿ ಸಿಗುವ ಕಾಲ್‌ಕೇಜಿಯಷ್ಟು ತಿರುವು, ಆ ಸೀಜರ್ ಮಾಡುವ ಎರಡು ಕೊಲೆಗಳ ಸುಳಿವನ್ನು ಬಿಚ್ಚಿಡುತ್ತದೆ. ಅಷ್ಟೆಲ್ಲಾ ಹೊಡೆದಾಡುವ, ಕೊಲೆ ಮಾಡುವ ಸೀಜರ್‌ನ ನಡೆ ನಿಗೂಢವಾಗಲು ಕಾರಣ ಏನೆಂಬುದನ್ನು ಕೊನೆಯಲ್ಲಿ ವಿವರಿಸಲಾಗಿದೆ.
ಬಹುಶಃ, ಅದೊಂದೇ ಸೀಕ್ರೇಟ್, ಸೀಜರ್‌ಗೆ ಆಗುವ ಹೆಚ್ಚಿನ ಅಪಾಯ ತಪ್ಪಿಸಿದೆ ಎನ್ನಬಹುದು. ಒನ್ ಅಂಡ್ ಓನ್ಲಿ ಫೈನಾನ್ಸ್ ಕಂಪೆನಿ ಮಾಲೀಕ ರವಿಚಂದ್ರನ್. ಅಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವಾತ ಸೀಜರ್ (ಚಿರು). ಹಣ ಕಟ್ಟದ ಕಾರುಗಳನ್ನು ಲೀಗಲ್ ಆಗಿ ಸೀಜ್ ಮಾಡುವ ಸೀಜರ್, ಗಜಪತಿ (ಪ್ರಕಾಶ್ ರೈ) ಎಂಬುವನ ದುಬಾರಿ ಕಾರನ್ನೂ ಸೀಜ್ ಮಾಡುತ್ತಾನೆ. ಅವರಿಬ್ಬರಿಗೂ ಒಂದು ಹಳೆಯ ದ್ವೇಷದ ನಂಟು ಇರುತ್ತೆ ಅನ್ನೋದು ಅಲ್ಲಿ ಗೊತ್ತಾಗುತ್ತೆ. ಅಲ್ಲಿಂದ ಗಜಪತಿ ಮತ್ತು ಸೀಜರ್‌ಗೂ ದೊಡ್ಡ ಕಾದಾಟ.
ಅದು ಯಾಕೆ, ಹೇಗೆ, ಏನು ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ, ಸಿನಿಮಾದಲ್ಲಿ ಹುಡುಕಬೇಕು. ಚಿರಂಜೀವಿ ಸರ್ಜಾ, ಎಂದಿನಂತೆ ಇಲ್ಲೂ ಘರ್ಜಿಸಿದ್ದಾರೆ. ಎದುರಾಳಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಟನೆ ವಿಷಯ ಬಿಟ್ಟು, ಆ್ಯಕ್ಷನ್ ಬಗ್ಗೆ ಹೇಳುವುದಾದರೆ, ಒಂದು ಹೆಜ್ಜೆ ಮುಂದೆ ಎನ್ನಬಹುದು. ಅವರ ಎನರ್ಜಿ ಸ್ಟಂಟ್‌ನಲ್ಲಿ ಎದ್ದು ಕಾಣುತ್ತೆ. ಲವ್ ವಿಷಯದಲ್ಲಿ ವೀಕು.
ಯಾಕೆಂದರೆ, ಲವ್‌ಸ್ಟೋರಿಯೇ ಇಲ್ಲಿ ವೀಕು. ಇನ್ನು, ರವಿಚಂದ್ರನ್ ಅವರ ಪಾತ್ರಕ್ಕೂ ತೂಕವಿದೆ. ಅವರಿಗೊಂದು ಹಾಡೂ ಇದೆ. ತಮ್ಮ ಶೈಲಿಯಲ್ಲೇ ಮಾತುಗಳನ್ನು ಹರಿಬಿಟ್ಟಿರುವ ಅವರು, ಸ್ಟೈಲಿಶ್ ಆಗಿಯೇ ಸಿಕ್ಕ ಪಾತ್ರವನ್ನು ಸಲೀಸಾಗಿ ಮಾಡಿದ್ದಾರೆ. ಪ್ರಕಾಶ್ ರೈ ನೆಗೆಟಿವ್ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದಾರೆ. ತಮ್ಮದೇ ಧಾಟಿಯ ಮಾತುಗಳ ಮೂಲಕ ಗತ್ತು, ಗಮತ್ತು ಪ್ರದರ್ಶಿಸಿದ್ದಾರೆ. ಪಾರುಲ್ ಯಾದವ್ ಇದ್ದರೂ ಇಲ್ಲದಂತಿದ್ದಾರೆ.
ಲವ್‌ಟ್ರ್ಯಾಕ್ ಇದ್ದೂ ಇಲ್ಲದಂತಿದೆ. ಸಾಧು ಕೋಕಿಲ ಅವರ ಹಾಸ್ಯದ ಪ್ರಯತ್ನ ವರ್ಕೌಟ್ ಆಗಿಲ್ಲ. ಉಳಿದಂತೆ ಬರುವ ಪಾತ್ರಗಳ್ಯಾವೂ ಅಷ್ಟೊಂದು ಗಮನಸೆಳೆಯಲ್ಲ. ಚಂದನ್ ಶೆಟ್ಟಿ ಸಂಗೀತದಲ್ಲಿ “ಹೋದಲೆಲ್ಲಾ ನೀ ಹಿಂದೆ ಬಂದಂತೆ …’ ಹಾಡೊಂದು ಗುನುಗುವಂತಿದೆ. ಅದು ಬಿಟ್ಟರೆ, ರ್ಯಾಪ್ ಶೈಲಿಯಿಂದ ಅವರು ಹೊರಬಂದಿಲ್ಲ. ಶ್ರೀಕಾಂತ್ ಅವರ ಸಂಕಲನ ಇಲ್ಲಿ ಮಾತಾಡುತ್ತದೆ. ಅಂಜಿ – ರಾಜೇಶ್ ಕಟ್ಟ ಅವರ ಛಾಯಾಗ್ರಹಣ “ಸೀಜರ್’ನ ಅಂದಗೊಳಿಸಿದೆ.
ಚಿತ್ರ: ಸೀಜರ್ನಿರ್ಮಾಣ: ತ್ರಿವಿಕ್ರಮ್ ಸಪಲ್ಯ
ನಿರ್ದೇಶನ: ವಿನಯ್ ಕೃಷ್ಣ
ತಾರಾಗಣ: ಚಿರಂಜೀವಿ ಸರ್ಜಾ, ರವಿಚಂದ್ರನ್, ಪ್ರಕಾಶ್ ರೈ, ಪಾರುಲ್ ಯಾದವ್, ಸಾಧು ಕೋಕಿಲ, ಶೋಭರಾಜ್ ಮುಂತಾದವರು * ವಿಜಯ್ ಭರಮಸಾಗರ