ವಿಜಯಪುರ: 1991ರಿಂದ ದೇಶದ ಆಡಳಿತವನ್ನು ಬಹುರಾಷ್ಟ್ರೀಯ ಕಂಪನಿಗಳೆ ನಡೆಸುತ್ತಿವೆ. ಜಾಗತೀಕರಣ, ಖಾಸಗೀಕರಣ, ಹಾಗೂ ಉದಾರೀಕರಣ ನೀತಿಗಳ ಅನುಷ್ಠಾನದ ಧಾವಂತದಲ್ಲಿ ಕೇಂದ್ರ ಸರ್ಕಾರ ದೇಶದ ಜನತೆಯ ಆಶಯವನ್ನೇ ಮರೆತಿದೆ ಎಂದು ಕಾರ್ಮಿಕ ಮುಖಂಡ ಸಿದ್ದನಗೌಡ ಪಾಟೀಲ ಕಿಡಿ ಕಾರಿದ್ದಾರೆ.
ನಗರದಲ್ಲಿ ಸರ್ಕಾರಿ ನೌಕರರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಿಂಚಣಿ ಹಾಗೂ ಹೊರಗುತ್ತಿಗೆ ಪದ್ಧತಿ ಕುರಿತು ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿರುದ್ಯೋಗ ನಿವಾರಣೆಗೆ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸಮಸ್ಯೆ ಪೋಷಿಸುವ ವ್ಯವಸ್ಥೆಯನ್ನು ಬೆಳೆಸುತ್ತಿದೆ ಎಂದರು.
ದೇಶದಲ್ಲಿ ಶಿಕ್ಷಣ, ಆರೋಗ್ಯ, ಕೈಗಾರಿಕೆ ಕ್ಷೇತ್ರದಲ್ಲಿ ಸರಕಾರದ ಜಾಗತೀಕರಣ ನೀತಿಯಿಂದ ಸಂಘಟಿತ ವಲಯದಲ್ಲಿ ಉದ್ಯೋಗದ ಅಭದ್ರತೆ, ಅಸಂಘಟಿತ ವಲಯದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ ಉಂಟಾಗಿದೆ. ಇದರಿಂದಾಗಿ ನಿರಂತರ ಬೆಲೆ ಏರಿಕೆ ಸೃಷ್ಟಿಯಾಗಿ ದೇಶದ ನಾಗರಿಕರು ತತ್ತರಿಸಿದ್ದಾರೆ. ಸರಕಾರಿ ನೌಕರರು ತಮ್ಮ ಹಿತರಕ್ಷಣೆಗಾಗಿ ಹೋರಾಟ ಮಾಡುವುದರ ಜೊತೆಗೆ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದನೆ ನೀಡಿ ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಮಹಾದೇವಯ್ಯ ಮಠಪತಿ ಮಾತನಾಡಿ, ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿರುವ ಮಂಜೂರಾದ 7.75 ಲಕ್ಷ ಹುದ್ದೆಗಳಲ್ಲಿ ಖಾಲಿಯಿರುವ 2.50 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಹೊರ ಗುತ್ತಿಗೆ ಹೆಸರಿನಲ್ಲಿ ಕಡಿಮೆ ವೇತನಕ್ಕೆ ಹೊರ ಗುತ್ತಿಗೆ, ದಿನಗೂಲಿ ಮೂಲಕ ಸರ್ಕಾರವೇ ನೌಕರರನ್ನು ಶೋಷಿಸುತ್ತಿದೆ ಎಂದು ದೂರಿದರು.
ನೆರೆ ರಾಜ್ಯಗಳಿಗೆ ಹೋಲಿಸಿದ್ದಲ್ಲಿ ರಾಜ್ಯದಲ್ಲಿ ತೆರಿಗೆ ಸಂಗ್ರಹ ಉತ್ತಮ ಸ್ಥಿತಿಯಲ್ಲಿದೆ. ಆದರೂ ರಾಜ್ಯ ಸರ್ಕಾರ ಮಾತ್ರ ನೌಕರರ ವೇತನ ನೀಡುತ್ತಿಲ್ಲ. 6ನೇ ವೇತನ ಆಯೋಗ ನ್ಯಾಯೋಚಿತ ರೀತಿ ಶಿಫಾರಸು ಮಾಡಿಲ್ಲ ಎಂದು ಕಿಡಿ ಕಾರಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಜೈಕುಮಾರ ಮಾತನಾಡಿ, ಎನ್‌ಪಿಎಸ್ ಹೊಸ ಪಿಂಚಣಿ ನೀತಿ ರದ್ದು ಪಡಿಸಿ ಹಳೆ ಪಿಂಚಣಿ ಪದ್ಧತಿ ಮುಂದುವರಿಸಬೇಕು. ಹೊರಗುತ್ತಿಗೆ ಪದ್ಧತಿ ಮುಂದುವರಿಸುವುದರಿಂದ ದೇಶದ ಆಡಳಿತಕ್ಕೂ ಸಮಸ್ಯೆ ಆಗಿರುವ ಕಾರಣ ಸರ್ಕಾರ ಹೊರ ಗುತ್ತಿಗೆ ಪದ್ಧತಿ ಕೈಬಿಡಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಎನ್.ಇ. ನಟರಾಜ ನೌಕರರ ಸಂಗಾತಿ ಮಾಸ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಜಿಲ್ಲಾಧ್ಯಕ್ಷ ಮಲ್ಲನಗೌಡ ಬಿರಾದಾರ, ಬಿ. ಶಿವಶಂಕರ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತರಾದ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಎಚ್. ಲೆಂಡಿ, ನೌಕರರಾದ ಜಯರಾಮ, ಈರಪ್ಪ ಕಂಬಳಿ, ಗೊಪಾಲ
ಅಥರ್ಗಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಮಿಕ ಮುಖಂಡರಾದ ಭೀಮಶಿ ಕಲಾದಗಿ, ಶೋಭಾ ಲೋಕನಾಗ, ಎಸ್.ಅಭಿಜಿತ, ಎಚ್.ಆರ್. ಮಾಚಪ್ಪನವರ, ಡಾ| ಮಹಾಂತೇಶ ಬಿರಾದಾರ, ಅರ್ಜುನ ಲಮಾಣಿ, ಎಂ.ಎಂ. ಪಾಟೀಲ, ಚೆನ್ನಾರೆಡ್ಡಿ, ಆರ್.ಎಸ್. ಮೆಣಸಗಿ, ಸಂತೋಷ ಬಿರಾದಾರ, ಸಂತೋಷ ಯರಗಲ್, ಸಿದ್ರಾಮಯ್ಯ ಪೂಜಾರಿ, ಉದಯ ಕುಲಕರ್ಣಿ ಇದ್ದರು.
ರಾಜು ಮಡಿವಾಳರ ಸ್ವಾಗತಿಸಿದರು. ಜಿ.ಬಿ. ಅಂಗಡಿ ವಂದಿಸಿದರು.