ದಾಂಡೇಲಿ : ಅವ ಅಂಥವ, ಇವ ಇಂಥವ, ಅವ ಆ ಧರ್ಮದವ, ಇವ ಈ ಧರ್ಮದವ, ಅವ ಶ್ರೀಮಂತ, ಇವ ಬಡವ ಎಂಬ ನಮ್ಮ ನಮ್ಮಲ್ಲಿ ಕಚ್ಚಾಡುವ ಕಾಲಘಟ್ಟದಲ್ಲಿರುವ ಇಂದಿನ ದಿನಮಾನದಲ್ಲಿಯೂ ಎಲೋ ಮಾನವರೇ ನಮ್ಮನ್ನು ನೋಡಿ ಕಲಿಯಿರಿ ಎಂದು ಮಾತು ಬಾರದ ಪ್ರಾಣಿಗಳು ತಮ್ಮ ಹೃದಯವೈಶಾಲ್ಯತೆಯ ಮೂಲಕವೆ ಹೇಳುವಂತಹ ಅಪೂರ್ವ ದೃಶ್ಯವಿದು.
ಅಂದ ಹಾಗೆ ದಾಂಡೇಲಿ ನಗರದ ಸಮೀಪದಲ್ಲಿರುವ ಅಂಬೇವಾಡಿಯ ನವಗ್ರಾಮ-ಗಾವಟಾನದಲ್ಲಿ ಕಳೆದೆ ಮೂರು ತಿಂಗಳುಗಳಿಂದ ಪ್ರತಿನಿತ್ಯ ಕಂಡು ಬರುತ್ತಿರುವ ಮಾನವೀಯತೆಯ ದೃಶ್ಯವಿದು. ನವಗ್ರಾಮದಲ್ಲಿ ಮೂರು ಮರಿಗಳನ್ನು ಹಾಕಿ ಕೆಲವೆ ಕೆಲವು ದಿನಗಳೊಳಗೆ ವಾಹನದಡಿಗೆ ಸಿಕ್ಕಿ ತಾಯಿ ನಾಯಿಯು ಮೃತಪಟ್ಟಿತ್ತು. ಬೀದಿ ನಾಯಿಯಾಗಿದ್ದ ಮೃತ ನಾಯಿಯ ಮೂರು ಮರಿಗಳು ಆನಂತರ ಅನಾಥವಾಗತೊಡಗಿದ್ದವು. ಇನ್ನೂ ಕೆಲ ಸಮಯದವರೆಗೆ ತಾಯಿಯ ಹಾಲು ಕುಡಿಯಬೇಕಾದ ಈ ನಾಯಿ ಮರಿಗಳು ಇನ್ನೇನೂ ಸತ್ತೇ ಹೋಗಬಹುದು ಎನ್ನುವಷ್ಟರಲ್ಲಿ ಹಂದಿಯೊಂದು ತಾಯಿಯ ರೂಪದಲ್ಲಿ ಬಂದು ನಾಯಿಮರಿಗಳಿಗೆ ಹೊಸ ಬದುಕು ನೀಡುತ್ತದೆ.
ಇದನ್ನೂ ಓದಿ: ದಾಮೋದರ ದೇವರ ಕೃಪೆಯಿಂದ ದೇಶಸೇವೆ ಮಾಡುವ ಭಾಗ್ಯ ಲಭಿಸಿದೆ- ರಾಜ್ಯಪಾಲ ರಾಜೇಂದ್ರ ಅರ್ಲೇಕರ್
ನಗರದ ಆದರ್ಶ ಪ್ರೌಢಶಾಲೆಯ ಶಿಕ್ಷಕರಾದ ಸುಭಾಸ.ಎಸ್.ರಾಥೋಡ ಅವರು ಈ ನಾಯಿ ಮರಿಗಳ ಬಗ್ಗೆ ವಿಶೇಷ ಲಕ್ಷ್ಯವನ್ನಿಟ್ಟು ಕಾಪಾಡಿಕೊಂಡು ಬರುತ್ತಿದ್ದಾರೆ. ಕಳೆದೆರಡು ತಿಂಗಳುಗಳಿಂದ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೀಗೆ ದಿನಕ್ಕೆ ಮೂರು ಬಾರಿ ಹಂದಿ ಬಂದು ಈ ನಾಯಿಮರಿಗಳಿಗೆ ಹಾಲುಣಿಸುತ್ತಿದೆ. ಯಾವುದೋ ಜಾತಿಯ, ಯಾವುದೋ ಹೊಟ್ಟೆಯಲ್ಲಿ ಹುಟ್ಟಿದ್ದ ತಬ್ಬಲಿ ನಾಯಿ ಮರಿಗಳಿಗೆ ತಾಯಿಯ ರೂಪದಲ್ಲಿ ಬಂದಿರುವ ಹಂದಿಯ ಮಾತೃ ಹೃದಯ ಹಾಗೂ ಹೃದಯವೈಶಾಲ್ಯತೆ ಅನೇಕತೆಯಲ್ಲಿ ಏಕತೆಯನ್ನು ಸಾರ ಹೊರಟಿದೆ. ಸಂಘರ್ಷಕ್ಕಿಂತ ಸಾಮಾರಸ್ಯವೆ ಲೇಸು ಎಂಬುವುದನ್ನು ಈ ಹಂದಿ ಮತ್ತು ನಾಯಿ ಮರಿಗಳು ತಮ್ಮ ದೈನಂದಿನ ಮಾನವೀಯತೆಯ ಮೂಲಕ ಸಾದರ ಪಡಿಸುತ್ತಿದೆ.
ಒಟ್ಟಿನಲ್ಲಿ ಹಂದಿಯ ಮಾತೃಹೃದಯ, ಮೂರು ತಬ್ಬಲಿ ನಾಯಿಮರಿಗಳ ತುಂಟಾಟ ಸ್ಥಳೀಯ ನವಗ್ರಾಮದ ಜನತೆಯ ಅಚ್ಚರಿಗೆ ಕಾರಣವಾಗಿದೆ.