ಜಾಗತಿಕವಾಗಿ ಇಂದು ಯೋಗಕ್ಕೆ ಭಾರೀ ಮನ್ನಣೆ ಸಿಕ್ಕಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವಲ್ಲಿ ಯೋಗದ ಪಾತ್ರ ಹಿರಿದಾಗಿದ್ದು, ಪ್ರಪಂಚದ ಸುಮಾರು 30 ಕೋಟಿಗೂ ಹೆಚ್ಚು ಮಂದಿ ಯೋಗ ಮಾಡುತ್ತಿದ್ದಾರೆ ಎಂದರೆ ಅಚ್ಚರಿ ಎನಿಸದೇ ಇರದು. ಇಂದು ಯೋಗ ಧರ್ಮ, ದೇಶ, ಸಂಪ್ರದಾಯಗಳನ್ನು ಮೀರಿ ಬೆಳೆದು ನಿಂತಿದೆ. ಅಷ್ಟೇ ಅಲ್ಲ, ಯೋಗಕ್ಕೆ ಸಂಬಂಧಿಸಿದ ಪೂರಕ ಉದ್ಯಮವೂ ಬೆಳೆದು ನಿಂತಿದೆ.
2015ರ ಜೂ.21ರಂದು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಧಿಕೃತವಾಗಿ ಆರಂಭಿಸಿತು. ಪ್ರಧಾನಿ ನರೇಂದ್ರ ಮೋದಿಯವರ ಶ್ರಮದಿಂದಾಗಿ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಣೆ ಶುರು ಮಾಡಿತು. ಇಂದು ಅಮೆರಿಕ, ಚೀನಾ, ಇಂಗ್ಲೆಂಡ್, ಆಸ್ಟ್ರೇಲಿಯ, ಕೆನಡಾ ಆದಿಯಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪೈಕಿ ಶೇ.90ರಷ್ಟು ದೇಶಗಳು ಯೋಗದಿನ ಆಚರಿಸುತ್ತಿವೆ. ಅಷ್ಟೇ ಅಲ್ಲ, ಯೋಗವನ್ನು ಜೀವನದ ಒಂದು ಭಾಗವಾಗಿ ಅನುಸರಿಸುತ್ತಿವೆ.
ಯೋಗದ ಮೂಲ ಭಾರತ. ಸುಮಾರು 5 ಸಾವಿರ ವರ್ಷಗಳ ಹಿಂದೆ ಆರಂಭವಾದ ಈ ಯೋಗ, ಭಾರತದಲ್ಲೇ ಹೆಚ್ಚು ಪ್ರಸಿದ್ಧಿಯಾಗಿತ್ತು. ಇದನ್ನು ಜಾಗತಿಕ ಮಟ್ಟಕ್ಕೆ ಪಸರಿಸಿದ ಮೊದಲಿಗರು ಸ್ವಾಮಿ ವಿವೇಕಾನಂದರು. 1883ರಲ್ಲಿ ಚಿಕಾಗೋದಲ್ಲಿ ಹಿಂದೂ ಧರ್ಮದ ಬಗ್ಗೆ ಭಾಷಣ ಮಾಡಿದ್ದ ಸ್ವಾಮಿ ವಿವೇಕಾನಂದ ಅವರು, ಯೋಗದ ಮಹಿಮೆಯನ್ನು ಸಾರಿದ್ದರು. ಇಂಥ ಯೋಗ ಇಂದು ಅಮೆರಿಕದುದ್ದಕ್ಕೂ ಪಸರಿಸಿದೆ. ಅಲ್ಲಿ ಸದ್ಯ 3.6 ಕೋಟಿ ಮಂದಿ ಯೋಗ ಅಭ್ಯಾಸ ಮಾಡುತ್ತಿದ್ದಾರೆ. ಜಾಗತಿಕವಾಗಿ 30 ಕೋಟಿ ಮಂದಿ ಯೋಗಾಭ್ಯಾಸ ನಡೆಸುತ್ತಿದ್ದಾರೆ.
ಯೋಗದಿಂದ ಆರೋಗ್ಯದ ಮೇಲಾಗುವ ಉಪಯೋಗಗಳು ಹೆಚ್ಚು. ಇದು ಹೃದಯ ಸಂಬಂಧಿ ರೋಗಗಳು, ಮಾನಸಿಕ ಆರೋಗ್ಯ ಸುಧಾರಣೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ, ದೇಹದ ತೂಕ ಕಡಿಮೆ ಮಾಡುತ್ತದೆ. ಅಲ್ಲದೆ, ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇರುವುದರಿಂದ ವೈದ್ಯರೂ, ಯೋಗಾಭ್ಯಾಸ ನಡೆಸುವಂತೆ ಸಲಹೆ ನೀಡುತ್ತಿರುತ್ತಾರೆ.
ಯೋಗದಿಂದ ಕೇವಲ ಆರೋಗ್ಯದ ಸುಧಾರಣೆ ಮಾತ್ರವಲ್ಲ, ಆರ್ಥಿಕವಾಗಿ ಮತ್ತು ಔದ್ಯಮಿಕವಾಗಿಯೂ ಲಾಭ ತರುವಂಥದ್ದಾಗಿದೆ. ಇಂದು ಲಕ್ಷಾಂತರ ಮಂದಿ ಯೋಗದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಯೋಗ ಹೇಳಿಕೊಡುತ್ತಲೇ ಉತ್ತಮ ಜೀವನವನ್ನೂ ಕಂಡುಕೊಂಡಿದ್ದಾರೆ.
ಆರೋಗ್ಯ ಮತ್ತು ಆರ್ಥಿಕವಾಗಿಯೂ ಲಾಭ ತರುವಂಥ ಯೋಗ ಇನ್ನಷ್ಟು ಪಸರಿಸಬೇಕಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರೂ ಯೋಗ ಮಾಡುವುದನ್ನು ಕಲಿತರೆ ತಪ್ಪೇನಿಲ್ಲ. ವಿಚಿತ್ರವೆಂದರೆ ವಿದೇಶಗಳಲ್ಲಿ ಯೋಗಕ್ಕಿರುವ ಮನ್ನಣೆ, ಕೆಲವೊಮ್ಮೆ ಭಾರತದಲ್ಲಿಯೂ ಸಿಗುವುದಿಲ್ಲ. ಇದರ ಆರೋಗ್ಯದ ಗುಟ್ಟು ಇಲ್ಲೇ ಬಹುತೇಕರಿಗೆ ತಿಳಿದಿಲ್ಲ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಪ್ರತಿ ದಿನವೂ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು.
ಅದೇ ರೀತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ವಿಸ್ತರಣೆಯಾಗುವಂತೆ ಕೇಂದ್ರ ಸರ್ಕಾರ ಶ್ರಮ ಹಾಕಬೇಕು. ಈ ನಿಟ್ಟಿನಲ್ಲಿ ಬುಧವಾರ ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಅಂಗಳದಲ್ಲೇ ಯೋಗಾಭ್ಯಾಸ ನಡೆಸುತ್ತಿರುವುದು ಸ್ವಾಗತಾರ್ಹ. ಈ ಮೂಲಕವಾದರೂ, ಯೋಗ ಇನ್ನಷ್ಟು ಪಸರಿಸಲಿ ಎಂಬುದು ಎಲ್ಲರ ಆಶಯ.