ಬೆಂಗಳೂರು: ನಗರದಲ್ಲಿ ಪ್ರತಿ ಮನೆಗಳಿಂದ ಉತ್ಪತ್ತಿಯಾಗುವ ಕಸಕ್ಕೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಉಪನಿಯಮ-2020ರಡಿ ಮಾಸಿಕ 200 ರೂ. ನಿಗದಿ ಮಾಡುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಿಯಮ ಬದಲಾವಣೆ ಮಾಡಲು ಪಾಲಿಕೆ ಮುಂದಾಗಿದೆ. ಉದ್ದೇಶಿತ ಶುಲ್ಕ ವಿಧಿಸುವ ಸಂಬಂಧ ಶುಕ್ರವಾರ ನಡೆದ ಪಾಲಿಕೆ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಸಾರ್ವಜ ನಿಕರು ಆಸ್ತಿ ತೆರಿಗೆ ಜತೆಗೆ ಶೇ.2 ತ್ಯಾಜ್ಯ ಉಪಕರ ನೀಡುತ್ತಿದ್ದಾರೆ. ಈಗ ಹೊಸ ಉಪನಿಯಮದಿಂದ ಮಾಸಿಕ ಪ್ರತಿ ಮನೆಗೆ 200 ರೂ. ನಿಗದಿ ಮಾಡಿದರೆ ಜನರಿಗೆ ಮತ್ತಷ್ಟು ಹೊರೆಯಾಗಲಿದೆ. ಇದು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಟೀಕಿಸಿದರು. ತ್ಯಾಜ್ಯ ನಿರ್ವಹಣೆ ತೆರಿಗೆ ವಿಧಿಸುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದರು. ಈ ವೇಳೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಪದ್ಮನಾಭರೆಡ್ಡಿ, ಈ ಬಗ್ಗೆ ಚರ್ಚೆ ಅನಗತ್ಯ. ಪೂರ್ಣ ಚರ್ಚೆಮಾಡಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಅಲ್ಲಿವರೆಗೂ ಇದು ಜಾರಿಗೆ ಬರುವುದಿಲ್ಲ ಎಂದರು. ಮೇಯರ್ ಎಂ. ಗೌತಮ್ ಕುಮಾರ್ ಮಾತನಾಡಿ, ಘನತ್ಯಾಜ್ಯ ನಿರ್ವಹಣಾ ಉಪನಿಯಮದ ತಿದ್ದುಪಡಿ, ಜಾರಿಗೊಳಿಸಲು 90 ದಿನಗಳ ಕಾಲಾವಕಾಶವಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುವುದು ಎಂದರು.
ವೇತನ ನೀಡಿ: ಬಿಬಿಎಂಪಿ ಶಾಲೆಗಳಲ್ಲಿನ ಅತಿಥಿ ಶಿಕ್ಷಕರನ್ನು ಕೆಲಸದಿಂದ ತೆಗೆಯಬಾರದು ಹಾಗೂ ಬಾಕಿ ಉಳಿಸಿಕೊಂಡಿರುವ ಅವರ ಮೂರು ತಿಂಗಳ ವೇತನವನ್ನು ಕೂಡಲೇ ಕೊಡಬೇಕು ಎಂದು ಮಾಜಿ ಮೇಯರ್ ಶಾಂತಕುಮಾರಿ ಒತ್ತಾಯಿಸಿದರು. ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಪ್ರತಿಕ್ರಿಯಿಸಿ, ಯಾವ ಅತಿಥಿ ಶಿಕ್ಷಕರನ್ನು ಕೆಲಸದಿಂದ ತೆಗೆಯುವುದಿಲ್ಲ. ಕೋವಿಡ್ 19ದಿಂದ ಶಾಲೆಗಳನ್ನು ತೆರೆದಿಲ್ಲ. ಸರ್ಕಾರ ಶಾಲೆಗಳನ್ನು ಪ್ರಾರಂಭಿಸುವ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ, ಸದ್ಯಕ್ಕೆ ಕೆಲಸಕ್ಕೆ ಬರದಂತೆ ಸೂಚಿಸಲಾಗಿದೆ. ಮಾರ್ಚ್‌ವರೆಗೂ ವೇತನ ನೀಡಿದ್ದು, ಏಪ್ರಿಲ್ ತಿಂಗಳ ವೇತನ ಹಾಗೂ ಸಂಬಳ ಹೆಚ್ಚಳಕ್ಕೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಮಳೆ ಅನಾಹುತ ತಡೆಗೆ ತಂಡ: ನಗರದಲ್ಲಿ ಮಳೆ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಪಾಲಿಕೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸೂಕ್ತ ವ್ಯವಸ್ಥೆ ಮಾಡಿ ಕೊಂಡಿಲ್ಲ ಎಂದು ಪಾಲಿಕೆಯ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರಣ್ಯಪುರ ವಾರ್ಡ್‌ನ ಪಾಲಿಕೆ ಸದಸ್ಯೆ ಕುಸುಮಾ ಮಾತನಾಡಿ, ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಚರಂಡಿ ನೀರು ನುಗ್ಗಿ ತೊಂದರೆಯಾಗುತ್ತಿದೆ. ಅಧಿಕಾರಿಗಳಿಗೆ ಕರೆ ಮಾಡಿದರೆ, ಕರೆ ಸ್ವೀಕರಿಸುತ್ತಿಲ್ಲ. ಮರಗಳು ಬಿದ್ದರೂ ತೆರವು ಮಾಡುತ್ತಿಲ್ಲ ಎಂದು ದೂರಿದರು. ಆಯುಕ್ತರು ಪ್ರತಿಕ್ರಿಯಿಸಿ ಮಳೆ ಅನಾಹುತ ತಪ್ಪಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಮಾಸ್ಕ್ ಧರಿ ಸದಿದ್ದರೆ ದಂಡ: ಮಾಸ್ಕ್ ಧರಿಸುವ ಸಂಬಂಧ ಶೂನ್ಯ ವೇಳೆಯಲ್ಲಿ ಚರ್ಚೆ ನಡೆಯಿತು. ಪಾಲಿಕೆ ಸದಸ್ಯ ಡಾ. ರಾಜು ಅವರು ಮಾಸ್ಕ್ ತೆಗೆದು ಮಾತನಾಡಲು ಆರಂಭಿಸಿದರು. ಮಧ್ಯ ಪ್ರವೇಶಿಸಿದ ಮಾಜಿ ಮೇಯರ್ ಸಂಪತ್ ಕುಮಾರ್, ಮಾಸ್ಕ್ ಹಾಕಿಕೊಳ್ಳಿ ಇಲ್ಲವೇ ದಂಡ ಬೀಳುತ್ತದೆ ಎಂದರು. ಕಾರ್‌ನಲ್ಲಿ ಹೋಗು ವವರು, ಅಂಗಡಿಯಲ್ಲಿ ಇರುವವರು ಮಾಸ್ಕ್ ಧರಿಸದೆ ಇದ್ದರೂ ದಂಡ ವಿಧಿಸಲಾಗುತ್ತಿದೆ. ಹೀಗಾಗಿ, ಮಾಸ್ಕ್ ದಂಡಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿ ನೀಡಬೇಕು ಎಂದುಅಬ್ದುಲ್ ವಾಜಿದ್ ಆಗ್ರಹಿಸಿದರು.