Advertisement

KFD: ಸಾಗರಕ್ಕೊಂದು ಮಂಗನ ಕಾಯಿಲೆ ತಪಾಸಣಾ ಕೇಂದ್ರ; ಸರ್ಕಾರಕ್ಕೆ ಮನವಿ

03:39 PM Feb 24, 2024 | Kavyashree |

ಸಾಗರ: ಮಂಗನ ಕಾಯಿಲೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಸಾಗರಕ್ಕೊಂದು ಮಂಗನ ಕಾಯಿಲೆ ತಪಾಸಣಾ ಕೇಂದ್ರ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

Advertisement

ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಂಗನ ಕಾಯಿಲೆ ಸ್ಯಾಂಪಲ್ ತಕ್ಷಣ ಸಿಗುವಂತೆ ಮಾಡಲು ಲ್ಯಾಬ್ ಅಗತ್ಯವಿದೆ. ಹಿಂದೆ ಕೋವಿಡ್ ಸಂದರ್ಭದಲ್ಲಿ ಆರ್‌ಟಿಪಿಸಿಆರ್ ಲ್ಯಾಬ್ ಪ್ರಾರಂಭಿಸಲಾಗಿತ್ತು. ಅದೇ ಮಾದರಿಯಲ್ಲಿ ಕೆಎಫ್‌ಡಿ ಸ್ಯಾಂಪಲ್ ತಪಾಸಣೆಗೆ ಲ್ಯಾಬ್ ಅಗತ್ಯವಾಗಿದೆ ಎಂದು ಹೇಳಿದರು.

2008-09ನೇ ಸಾಲಿನಲ್ಲಿ ನಾನು ಶಾಸಕನಾಗಿದ್ದ ಸಂದರ್ಭ ನಗರವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಗೆ 70 ಕೋಟಿ ರೂ. ಹಣ ಮಂಜೂರು ಮಾಡಿಸಲಾಗಿತ್ತು. ಯಾಕೋ ಯುಜಿಡಿ ಕಾಮಗಾರಿ ಪೂರೈಸುವ ನಿಟ್ಟಿನಲ್ಲಿ ಹಿಂದಿನ ಜನಪ್ರತಿನಿಧಿಗಳು ಆಸಕ್ತಿ ತೋರಿಸಿಲ್ಲ ಎಂದರು.

ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚುವರಿಯಾಗಿ 40 ಕೋಟಿ ರೂಪಾಯಿ ಅಗತ್ಯವಿದ್ದು, ಮೊದಲ ಹಂತದಲ್ಲಿ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಧಿಕಾರಿಗಳಿಗೆ ಕಾಮಗಾರಿ ತ್ವರಿತವಾಗಿ ಮುಗಿಸಲು ಸೂಚನೆ ನೀಡಲಾಗಿದೆ. ನಗರೋತ್ಥಾನ ಯೋಜನೆಯಡಿ ಪ್ರತಿ ವಾರ್ಡ್‌ಗೆ 1.50 ಕೋಟಿ ರೂ.ನಿಂದ 2 ಕೋಟಿ ರೂ.ವರೆಗೆ ಹಣ ಮಂಜೂರು ಮಾಡಲಾಗಿದ್ದು, ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ ಎಂದು ಹೇಳಿದರು.

ಇತಿಹಾಸ ಪ್ರಸಿದ್ದವಾದ ಗಣಪತಿ ದೇವಸ್ಥಾನ ಅಭಿವೃದ್ದಿಗೆ ಮೊದಲ ಹಂತದಲ್ಲಿ 50 ಲಕ್ಷ ರೂ. ಬಿಡುಗಡೆಯಾಗಿದೆ. ದೇವಸ್ಥಾನದ ಮುಖಮಂಟಪದ ಗೋಪುರ ಮಳೆಗಾಲದಲ್ಲಿ ಸೋರುತ್ತಿರುವ ದೂರು ಇರುವ ಹಿನ್ನೆಲೆ ಸ್ಥಳೀಯರ ಜೊತೆ ಚರ್ಚೆ ನಡೆಸಿ ಅಭಿವೃದ್ದಿ ಕೆಲಸವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Advertisement

ಪ್ರತಿ ಕ್ಷೇತ್ರದ ಅಭಿವೃದ್ದಿಗೆ ಮುಖ್ಯಮಂತ್ರಿ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ರಸ್ತೆ, ಚರಂಡಿ, ದೇವಸ್ಥಾನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದರು.

ಸಾಗರವನ್ನು ಮಾದರಿಯಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ನೀರಿನ ಕೊರತೆಯಿಂದ ಅಂಬಾರಗೋಡ್ಲು-ಕಳಸವಳ್ಳಿ ಲಾಂಚ್ ಸದ್ಯದಲ್ಲೇ ನಿಲ್ಲುವ ಸ್ಥಿತಿ ಇದೆ. ಈ ಹಿನ್ನೆಲೆ ಹೊಸದಾಗಿ ನೀರಿನ ಹರಿವು ಇರುವ ಕಡೆ ರ‍್ಯಾಂಪ್ ನಿರ್ಮಿಸುವ ಅಗತ್ಯವಿದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ತಕ್ಷಣ 70 ಲಕ್ಷ ರೂ. ಹಣ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿ ಕಾಮಗಾರಿ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಟಿ.ಪಿ.ರಮೇಶ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಗುರುಕೃಷ್ಣ ಶೆಣೈ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next